Saturday, 24 December 2011

ಸ್ಯಾನೋಸೆಯ ಭೂತ ಬಂಗಲೆ

ಅಮೆರಿಕದಂತಹ ಅತ್ಯಂತ ಮುಂದುವರಿದ ದೇಶದಲ್ಲೂ ಭೂತ ಪ್ರೇತಗಳನ್ನು ನಂಬುವವರು, ಮಾಟಗಾರರು- ಮಂತ್ರವಾದಿಗಳ ಮೊರೆ ಹೋಗುವವರು ಯಥೇಚ್ಛ. ನಮ್ಮಲ್ಲಿರುವಂತೆ ಅಲ್ಲೂ ಭೂತದ ಕಥೆಗಳನ್ನು ಕೇಳಬಹುದು. ಶ್ವೇತಭವನದಲ್ಲಿ ಲಿಂಕನ್ ಸೇರಿದಂತೆ ಅನೇಕ ಮಾಜಿ ಅಧ್ಯಕ್ಷರ ಭೂತಗಳ ಓಡಾಟದ ಕಥೆಗಳು ಸದಾ ಕುತೂಹಲ ಕೆರಳಿಸುತ್ತಲೇ ಬಂದಿವೆ.ನಾನಿಲ್ಲಿ ಹೇಳಲು ಹೊರಟಿರುವುದು ಇಂಥದೇ ಭೂತ ಬಂಗಲೆಯೊಂದರ ಬಗ್ಗೆ. ಕ್ಯಾಲಿಫೋರ್ನಿಯ ರಾಜ್ಯದ ಸ್ಯಾನೋಸೆ ಪಟ್ಟಣದಲ್ಲಿನ ‘ವಿಂಚೆಸ್ಟರ್ ರಹಸ್ಯ ಬಂಗಲೆ‘ ಈಗಲೂ ರಹಸ್ಯವನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಅದರ ಬಗ್ಗೆ ನೂರಾರು ದಂತಕಥೆಗಳಿವೆ.ಸುಮಾರು ೬ ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ತಲೆ ಎತ್ತಿರುವ ಈ ಬಂಗಲೆ ನಿತ್ಯ ನೂರಾರು ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ೧೬೦ ಕೋಣೆ, ೨ ಸಾವಿರ ಬಾಗಿಲು, ೧೦ ಸಾವಿರ ಕಿಟಕಿಗಳು, ಉಪ್ಪರಿಗೆ ಏರಲು ೪೭ ಕಡೆ ಪಾವಟಿಗೆಗಳು (ಸ್ಟೇರ್ಕೇಸ್), ೪೭ ಅಗ್ಗಿಷ್ಟಿಕೆಗಳು, ೧೩ ಸ್ನಾನದ ಮನೆಗಳು, ೬ ಅಡುಗೆ ಮನೆಗಳ ಭವ್ಯ ಕಟ್ಟಡವಿದು.ಇದರೊಳಗೊಂದು ಸುತ್ತು ಬಂದ ಬಹುತೇಕರಿಗೆ ಅತೀಂದ್ರಿಯ ಶಕ್ತಿಗಳ, ಭೂತದ ಇರುವಿಕೆಯ ಅನುಭವವಾಗಿದೆ. ಮಧ್ಯರಾತ್ರಿ ದಿಢೀರನೆ ದೀಪ ಹತ್ತಿಕೊಳ್ಳುವುದು, ಗಂಟೆ ಶಬ್ದ, ಯಾರೋ ಮೆಟ್ಟಿಲು ಹತ್ತುವ ಸಪ್ಪಳ ಇತ್ಯಾದಿ. ಎಷ್ಟೆಷ್ಟೋ ಮನಃಶಾಸ್ತ್ರಜ್ಞರು, ಮಂತ್ರವಾದಿಗಳು, ಜಾದೂಗಾರರು, ವಿಜ್ಞಾನಿಗಳೆಲ್ಲ ತಮಗಾದ ವಿಸ್ಮಯವನ್ನು ದಾಖಲಿಸಿದ್ದಾರೆ.
ಟೇಪ್ರೆಕಾರ್ಡರ್ನಲ್ಲಿ ವಿಚಿತ್ರ ಧ್ವನಿ, ತಾವು ತೆಗೆದ ಬಂಗಲೆ ಫೋಟೊದಲ್ಲಿ ಭೂತದ ಅಸ್ಪಷ್ಟ ಚಿತ್ರ ಮೂಡಿದ ಬಗ್ಗೆ ಉಲ್ಲೇಖಿಸಿದ್ದಾರೆ.
ಇದೇ ಕಾರಣಕ್ಕಾಗಿ ಈಗಲೂ ಈ ಬಂಗಲೆ ವೀಕ್ಷಣೆಗೆ ಬರುವ ಪ್ರವಾಸಿಗಳು ಗುಂಪಿನಲ್ಲಿಯೇ ಓಡಾಡುವಂತೆ ಸೂಚಿಸಲಾಗುತ್ತದೆ. ಮಾರ್ಗದರ್ಶಿಗಳು ನಿಂತು ಎಲ್ಲರ ರಕ್ಷಣೆಯನ್ನು ನೋಡಿಕೊಳ್ಳುತ್ತಾರೆ. ವಿಚಿತ್ರವಾದ ಸದ್ದು, ತಲೆ ಭಾರ, ಹಿಂದಿನಿಂದ ಯಾರೋ ಬೆನ್ನತ್ತಿ ಬಂದ, ಉಸಿರಾಡಿಸುವ, ಅಸ್ಪಷ್ಟ ಭೂತಾಕೃತಿಗಳು ಕೋಣೆಯ ಮೂಲೆಯಲ್ಲಿ ನಿಂತು ಗಮನಿಸುವಂತಹ ಅನುಭವಗಳಂತೂ ಸಾಮಾನ್ಯ.ಪಾಶ್ಚಾತ್ಯರಿಗೆ ಅಶುಭಕರವಾದ ೧೩ ಅಂಕಿಗಂತೂ ಈ ಬಂಗಲೆಯಲ್ಲಿ ಆದ್ಯತೆ. ಅನೇಕ ಕಿಟಕಿಗೆ ೧೩ ಬಾಗಿಲುಗಳಿವೆ. ೧೩ ಸ್ನಾನಗೃಹ, ೧೩ನೇ ಸ್ನಾನಗೃಹಕ್ಕೆ ಹೋಗಲು ೧೩ ಮೆಟ್ಟಿಲು, ಅದರಲ್ಲಿ ೧೩ ಕಿಟಕಿ, ಸಿಂಕ್ಗೆ ೧೩ ರಂದ್ರ, ಅನೇಕ ತೂಗುದೀಪಕ್ಕೆ ೧೩ ಅನಿಲ ಕೊಳವೆ ಹೀಗೆ ಸಾಗುತ್ತದೆ ೧೩ರ ಮಹಿಮೆ.     ೧೮೮೪ರಲ್ಲಿ ಆರಂಭವಾದ ಬಂಗಲೆಯ ನಿರ್ಮಾಣ ಸತತ ೩೮ ವರ್ಷ ನಡೆದಿತ್ತು. ಆ ಕಾಲದಲ್ಲೇ ಇದಕ್ಕೆ ತಗುಲಿದ ವೆಚ್ಚ ಸುಮಾರು ೫೫ ಲಕ್ಷ ಡಾಲರ್ (ಈಗಿನ ಲೆಕ್ಕದ್ಲ್ಲಲಾದರೆ ೩೫೦ ಕೋಟಿ ರೂಪಾಯಿ).ಮೂಲತಃ ಇದರಲ್ಲಿ ೫೦೦-೬೦೦ ಕೋಣೆಗಳಿದ್ದವಂತೆ. ೧೯೦೬ರ ಮಹಾ ಭೂಕಂಪದಲ್ಲಿ ಈ ಬಂಗಲೆಗೂ ಭಾರೀ ಹಾನಿಯಾಗಿ ಈಗ ಇಷ್ಟೇ ಉಳಿದಿವೆ ಎನ್ನಲಾಗುತ್ತದೆ.ಭವ್ಯ ವಿಕ್ಟೋರಿಯನ್ ವಾಸ್ತುಶೈಲಿ, ಸುಂದರ ಗೋಪುರಗಳು, ಹೊಗೆ ಗೂಡುಗಳು, ಬಾಲ್ಕನಿಗಳು, ಅರೆ ವೃತ್ತಾಕಾರದ ಗೋಡೆಗಳು, ಒಳಗೆ ಭವ್ಯವಾದ ಚಿನ್ನ ಬೆಳ್ಳಿಯ ಲೇಪನದ ತೂಗುದೀಪಗಳು, ಆ ಕಾಲಕ್ಕೇ ತಲಾ ೧೫೦೦ ಡಾಲರ್ ಬೆಲೆ ಬಾಳುತ್ತಿದ್ದ ಕಿಟಕಿ ಬಾಗಿಲು, ಜರ್ಮನ್ ಬಾಗಿಲುಗಳು, ಸ್ವಿಸ್ ಬಾತ್ಟಬ್ಗಳು, ಕೊಠಡಿಗಳಲ್ಲಿ ವಿಲಾಸಿ ಪೀಠೋಪಕರಣಗಳು, ಚಿತ್ರ ವಿಚಿತ್ರ ಬಣ್ಣಗಳು, ಹೊರಗೆ ಅತ್ಯಾಕರ್ಷಕ ತೋಟ, ಹಸಿರು ಸಸ್ಯ ರಾಶಿ ಇಡಿ ಕಟ್ಟಡಕ್ಕೆ ಮೆರುಗು ತುಂಬಿವೆ.ಇದನ್ನು ಕಟ್ಟಿಸಿದವಳು ಸಾರಾ ವಿಂಚೆಸ್ಟರ್ (೧೮೪೦- ೧೯೨೨). ಈಕೆ ವಿಶ್ವವಿಖ್ಯಾತ ವಿಂಚೆಸ್ಟರ್ ಗನ್ ತಯಾರಿಕಾ ಕಂಪೆನಿಯ ಮಾಲೀಕ, ಆಗರ್ಭ ಶ್ರೀಮಂತ ವಿಲಿಯಂ ವಿಂಚೆಸ್ಟರ್ನ ಪತ್ನಿ. ಸಣ್ಣ ವಯಸ್ಸಿನಲ್ಲೇ ಏಕೈಕ ಮಗಳನ್ನು ಕಳೆದೊಂಡವಳು. ದುರದೃಷ್ಟಕ್ಕೆ ಗಂಡ ಕೂಡ ಕೇವಲ ೧೯ ವರ್ಷದ
ದಾಂಪತ್ಯ ಬಳಿಕ ಕ್ಷಯಕ್ಕೆ ಬಲಿಯಾದ.ಆಗ ಸಾರಾಗೆ ೪೧ ವರ್ಷ. ೨ ಕೋಟಿ ಡಾಲರ್ ಸಂಪತ್ತಿನ ಒಡೆತನ ಬರುತ್ತದೆ. ಬಂದೂಕು ರಾಯಲ್ಟಿಯಿಂದಲೇ ನಿತ್ಯ ೧ ಸಾವಿರ ಡಾಲರ್ ಸಿಗುತ್ತಿರುತ್ತದೆ. ಆದರೆ ಕೌಟುಂಬಿಕ ದುರಂತಗಳು ಆಕೆಯನ್ನು ಖಿನ್ನಳಾಗಿ ಮಾಡುತ್ತವೆ. ಇದಕ್ಕೇನು ಕಾರಣ ಎಂದು ತಿಳಿಯಲು ಮಂತ್ರವಾದಿಗಳ ಮೊರೆ ಹೋಗುತ್ತಾಳೆ.‘ನಿನ್ನ ಗಂಡನ ಕಂಪೆನಿ ತಯಾರಿಸಿದ ಬಂದೂಕುಗಳಿಂದ ಸತ್ತವರ ಪ್ರೇತಾತ್ಮಗಳು ನಿನ್ನನ್ನು ಕಾಡುತ್ತಿವೆ. ಈಗಾಗಲೆ ಇಬ್ಬರನ್ನು ಬಲಿ ತೆಗೆದುಕೊಂಡಿದ್ದು ನಿನ್ನನ್ನೂ ಮುಗಿಸಲು ಹೊಂಚು ಹಾಕುತ್ತಿವೆ. ಅವನ್ನು ಸಂತೃಪ್ತಗೊಳಿಸಲು ಕಟ್ಟಡ ನಿರ್ಮಾಣ ಮಾಡು. ಈ ಕಟ್ಟಡದ ಕೆಲಸ ನಡೆಯುವಷ್ಟೂ ದಿನ ಅವು ನಿನ್ನ ತಂಟೆಗೆ ಬರೊಲ್ಲ‘ ಎಂದು ಸಲಹೆ ಕೊಡುತ್ತಾರೆ. ಅದರಂತೆ ಸಾಂತಾಕ್ರಾಸ್ ಕಣಿವೆಯ ಈಗಿನ ಸ್ಥಳದಲ್ಲಿ ೧೬೧ ಎಕರೆ ಜಮೀನು ಖರೀದಿಸಿ ಬಂಗಲೆ ನಿರ್ಮಿಸಲು ಶುರು ಮಾಡುತ್ತಾಳೆ. ನೂರಾರು ಜನ ಅವಿರತ ೩೮ ವರ್ಷ ಇಲ್ಲಿ ಕಟ್ಟುವ, ಕೆಡವುವ ಕೆಲಸ ಮಾಡುತ್ತಲೇ ಇದ್ದರಂತೆ.ಈಕೆಗೆ ಭೂತಗಳ ಭಯ. ಆದರೆ ಅವುಗಳಲ್ಲಿ ಕೆಲವನ್ನು ಒಲಿಸಿಕೊಂಡಿದ್ದಳಂತೆ. ನಿತ್ಯಮಧ್ಯರಾತ್ರಿಯಿಂದ ಬೆಳಗಿನ ಜಾವ ೨ ಗಂಟೆಯವರೆಗೂ ನಿರ್ದಿಷ್ಟ ಗೌನ್ ಧರಿಸಿ ಗಂಟೆ ಕೋಣೆಯಲ್ಲಿ ಗಂಟೆ ಬಾರಿಸಿ ಸ್ನೇಹಪರ ಪ್ರೇತಾತ್ಮಗಳನ್ನು ಆಹ್ವಾನಿಸುತ್ತಿದ್ದಳು. ಮನೆ ವಿನ್ಯಾಸಕ್ಕೆ ಅವುಗಳ ಸಲಹೆ ಪಡೆಯುತ್ತಿದ್ದಳಂತೆ. ಕೆಟ್ಟ ಪ್ರೇತಗಳಿಗೆ ದಿಕ್ಕು ತಪ್ಪಿಸಲು ಆಕೆ ಒಂದೇ ಕೋಣೆಯಲ್ಲಿ ಸತತ ಎರಡು ರಾತ್ರಿ ಮಲಗುತ್ತಿರಲಿಲ್ಲವಂತೆ.ಆಗಿನ ಕಾಲದ ಶ್ರೀಮಂತ ಮಹಿಳೆಯರಂತೆ ಮುಖಕ್ಕೆ ಸದಾ ಕಪ್ಪು ಮುಖಗವುಸು ಹಾಕಿಕೊಂಡೇ ಇರುತ್ತಿದ್ದಳಂತೆ. ಹೀಗಾಗಿ ಈಕೆಯ ಮುಖ ನೋಡಿದವರೇ ಇಲ್ಲ. ಅಷ್ಟು ದೊಡ್ಡ ಬಂಗಲೆಯಲ್ಲಿ ಬಂಧು- ಬಾಂಧವರಿಲ್ಲದೆ ಏಕಾಂಗಿಯಾಗಿ ವಾಸವಾಗಿದ್ದಳು. ಇಡೀ ಬಂಗಲೆ ಆಕೆಯ ಶ್ರೀಮಂತಿಕೆ, ಸೌಂದರ್ಯ ಅಭಿರುಚಿಯ ಕುರುಹಾಗಿದೆ. ೮೨ನೇ ವರ್ಷದಲ್ಲಿ ಇದೇ ಮನೆಯ ಕೊಠಡಿಯೊಂದರಲ್ಲಿ ಮೃತಳಾದ ನಂತರ ಇದು ಅನೇಕರ ಕೈ ಸೇರಿ ಈಗ ಪ್ರತಿಷ್ಠಾನವೊಂದರ ಉಸ್ತುವಾರಿಯಲ್ಲಿದೆ.ಕ್ರಿಸ್ಮಸ್ ಬಿಟ್ಟು ವರ್ಷದ ಉಳಿದೆಲ್ಲ ದಿನ ಬೆಳಿಗ್ಗೆ ೯ಕ್ಕೆ ಬಂಗಲೆ ಪ್ರವಾಸ ಕಾರ್ಯಕ್ರಮ ಶುರು. ಮಧ್ಯರಾತ್ರಿ ಪ್ರವಾಸ, ಭಯದ ರಾತ್ರಿ ಪ್ರವಾಸ ಹೀಗೆ ಅನೇಕ ಪ್ರವಾಸಗಳಿವೆ. ೩೫ ಡಾಲರ್ ಕೊಟ್ಟ ಟಿಕೆಟ್ ಖರೀದಿಸಿ ಮಾರ್ಗದರ್ಶಿ ಜತೆ ಒಂದು ಸುತ್ತು ಬರಬಹುದು.

1 comment:

  1. ಓಹ್ ಗುಡ್ ಬ್ಲಾಗ್ ನವೀನ್ ಸರ್..... ಬ್ಲಾಗ್ ಹೇಗೆ ಡಿಸೈನ್ ಮಾಡೋದು ಅಂತ ನಂಗೆ ಸ್ವಲ್ಪ ಹೇಳ್ತಿರಾ....?

    vishwanath gudsi
    -9036822415

    ReplyDelete