ದಿ ಡರ್ಟಿ ಪಿಕ್ಚರ್

ಸಿಲ್ಕ್ ಸ್ಮಿತಾಳ ನಿಜ ಬದುಕಿನ ಕಥೆಯುಳ್ಳ ಚಿತ್ರ ಎಂಬ ನಿರೀಕ್ಷೆಯ ಭಾರ ಹೊತ್ತ ‘ದಿ ಡರ್ಟಿ ಪಿಕ್ಚರ್‘ಇನ್ನೊಂದು ಮನರಂಜನಾತ್ಮಕ ಸಿನಿಮಾ ಅಷ್ಟೇ.ರಂಜನೆಯ ನೆಲೆಯಲ್ಲಿ ಅರಳುವ ಪಾತ್ರಗಳು ಆ ಉದ್ದೇಶವನ್ನು ಮೀರುವುದೇ ಇಲ್ಲ.ಸಿಲ್ಕ್ ಸ್ಮಿತಾ ತರಹದ ಸಂಕೀರ್ಣ ಪಾತ್ರದ ಭಾವ ಪಲ್ಲಟವನ್ನು ಚಿತ್ರ ಸಮರ್ಥವಾಗಿ ಕಟ್ಟಿಕೊಟ್ಟಿಲ್ಲ. ಪುರುಷ ಪ್ರಧಾನ ಚಿತ್ರರಂಗವು ಮಹತ್ವಾಕಾಂಕ್ಷಿ ನಟಿಯೊಬ್ಬಳನ್ನು ಎಷ್ಟರ ಮಟ್ಟಿಗೆ ಸ್ವಾರ್ಥಕ್ಕೆ ಬಳಸಿ ಕೊಳ್ಳುತ್ತದೆ ಎಂಬುದನ್ನು ತುಸು ವ್ಯಂಗ್ಯ,ನಾಟಕೀಯತೆ ಬೆರೆತ ಧಾಟಿಯಲ್ಲಿ ‘ದಿ ಡರ್ಟಿ ಪಿಕ್ಚರ್‘ ಹೇಳುತ್ತದೆ.ಮಸಾಲೆ ಚಿತ್ರದ ಶೈಲಿಯಲ್ಲೇ ನಿರೂಪಣೆ ಇರುವುದರಿಂದ ಸಿಲ್ಕ್ ಸ್ಮಿತಾ ಬದುಕು ನೋಡುಗನಿಗೆ ಕಾಣುವುದು ಬಹು ದೂರದಿಂದ.ನಟಿ ಎಂಬುದಕ್ಕಿಂತ ಹೆಚ್ಚಾಗಿ ‘ಕ್ಯಾಬರೆ ನರ್ತಕಿ‘ಯಾಗಿಯೇ ತೆರೆ ಮೇಲೆ ಕಾಣಿಸಿಕೊಂಡಿದ್ದ ಸ್ಮಿತಾ ನೃತ್ಯ ಪ್ರತಿಭೆಯಾಗಲೀ,ಬಹುಭಾಷಾ ಚಿತ್ರಗಳಲ್ಲಿ ಅವಕಾಶ ಸೃಷ್ಟಿಯಾದ ಪರಿಯಾಗಲೀ ಸಿನಿಮಾದಲ್ಲಿ ಕಾಣುವುದಿಲ್ಲ. ನಿರ್ದೇಶಕ ಮಿಲನ್ ಲೂಥ್ರಿಯಾ ಉದ್ದೇಶ ರಂಜನೆಯಷ್ಟೇ;ಸ್ಮಿತಾ ಬದುಕಿನ ಭಾವ ಜಗತ್ತಿನ ಬೇರೆ ಬೇರೆ ಮಗ್ಗಲುಗಳು ಮುಖ್ಯವಲ್ಲ (ಚಿತ್ರದಲ್ಲಿ ನಾಯಕಿಯ ಪಾತ್ರ ‘ಸಿನಿಮಾ ಓಡುವುದು ಮೂರೇ ಕಾರಣಕ್ಕೆ- ಮನರಂಜನೆ, ಮನರಂಜನೆ ಹಾಗೂ ಮನರಂಜನೆ‘ ಎನ್ನುತ್ತದೆ.ಅದು ಈ ಚಿತ್ರಕ್ಕೂ ಅನ್ವಯವಾಗುವ ಮಾತು). ಮದುವೆಯಾದ ಮೊದಲ ದಿನವೇ ಮನೆಯಿಂದ ಓಡಿಹೋಗುವ ದಕ್ಷಿಣ ಭಾರತದ ಬಡ ಹುಡುಗಿಯೊಬ್ಬಳು ಮುಂದೆ
ಚಿತ್ರರಂಗವನ್ನುಪ್ರವೇಶಿಸಿ,ಅವಕಾಶಕ್ಕಾಗಿ ತನ್ನನ್ನು ತಾನೇ ತೇದುಕೊಳ್ಳುವ ಚಿತ್ರಕಥೆಯಲ್ಲಿ ಸಾವಧಾನದ ಕೊರತೆ ಇದೆ.ಸ್ಮಿತಾ ಬದುಕಿನ ಮೇಲ್ಪದರವನ್ನಷ್ಟೇ ಹೇಳುವ ನಿರ್ದೇಶಕರು ಎಲ್ಲವನ್ನೂ ಧಾವಂತದಲ್ಲೇ ಹೇಳುವ ಧಾಟಿಯನ್ನು ಒಪ್ಪಿ ಕೊಂಡಿದ್ದಾರೆ. ದಕ್ಷಿಣ ಭಾರತದ ಸ್ಟಾರ್ಗಳನ್ನು ಚಿತ್ರವು ಆಡಿಕೊಳ್ಳುತ್ತದಾದರೂ ಯಶಸ್ವಿಯಾಗಿ ಲೇವಡಿ ಮಾಡುವುದಿಲ್ಲ.ತಮಿಳಿನ ‘ತಮಿಳ್ ಪಡಂ‘ಹಾಗೂ ಹಿಂದಿಯ ‘ದಬಂಗ್‘ಚಿತ್ರಗಳಲ್ಲಿ ಆ ಲಕ್ಷಣವಿತ್ತು.ಮಧುರ್ ಭಂಡಾರ್ಕರ್ ನಿರ್ದೇಶನದ ‘ಫ್ಯಾಷನ್‘ ಚಿತ್ರವು ಮಾಡೆಲಿಂಗ್ ಲೋಕದಲ್ಲಿ ನಲುಗುವ ಹೆಣ್ಣುಮಕ್ಕಳ ವಸ್ತುವನ್ನು ಯಶಸ್ವಿ ಯಾಗಿ ಬಿಂಬಿಸಿತ್ತು.ಅಷ್ಟು ದೊಡ್ಡ ಭಾವದ ಹರಹು ‘ದಿ ಡರ್ಟಿ ಪಿಕ್ಚರ್‘ನಲ್ಲಿ ಇಲ್ಲ.ವಿದ್ಯಾ ಬಾಲನ್ ಪಾತ್ರದ ನಿಕಷಕ್ಕೆ ತಮ್ಮನ್ನು ಸಂಪೂರ್ಣವಾಗಿ ಒಡ್ಡಿ ಕೊಂಡಿದ್ದಾರೆ. ದೇಹಾಕಾರವನ್ನು ತೋರುವಲ್ಲಿ,ಅಧರಚುಂಬನಕ್ಕೆ ಒಡ್ಡಿ ಕೊಳ್ಳುವಲ್ಲಿ ಅವರದ್ದು ನಿಸ್ಸಂಕೋಚ ಮನಸ್ಸು.ಅಭಿನಯ,ಸಂಭಾಷಣೆ ಹೇಳಿರುವ ಧಾಟಿ ಎಲ್ಲವೂ ಸೊಗಸು.ಆದರೆ,ಅವರ ಕಣ್ಣಲ್ಲಿನ ಮುಗ್ಧತೆಗೆ ಸಿಲ್ಕ್ ಸ್ಮಿತಾಗೆ ಇದ್ದ ಮಾದಕತೆ ಒಗ್ಗಿಲ್ಲ.ಏನೇ ಮೈಮಾಟ ತೋರಿದರೂ ಎಲ್ಲವೂ ಕೃತಕವೆಂಬಂತೆ ಭಾಸವಾಗುತ್ತದೆ. ಸಾವಿರದ ಒಂಬೈನೂರ ಎಂಬತ್ತರ ದಶಕದ ಸಂದರ್ಭವನ್ನು ಚಿತ್ರ ತೋರಿಸುತ್ತದೆ.ಆ ಕಾಲವನ್ನು ಸೃಷ್ಟಿಸುವಲ್ಲಿ ಕಲಾ ನಿರ್ದೇಶಕ ಹಾಗೂ ವಸ್ತ್ರವಿನ್ಯಾಸಕರ ಕಾಣಿಕೆ ದೊಡ್ಡದು. ರಜತ್ ಅರೋರಾ ಬರೆದಿರುವ,ಆಗೀಗ ವ್ಯಂಗ್ಯದ ಸೂಜಿಮೊನೆ ತಾಗಿಸುವ ಸಂಭಾಷಣೆ ಚಿತ್ರದ ಆಸಕ್ತಿಕರ ಅಂಶ.ಬಾಬಿ ಸಿಂಗ್ ಛಾಯಾಗ್ರಹಣ ಹಾಗೂ ವಿಶಾಲ್-ಶೇಖರ್ ಸಂಗೀತ ಚಿತ್ರದ ಔಚಿತ್ಯಕ್ಕೆ ತಕ್ಕಂತಿದೆ. ನಾಸಿರುದ್ದೀನ್ ಷಾ ಒಂದೆರಡು ದೃಶ್ಯಗಳಲ್ಲಿ ತಮ್ಮ ನಟನೆಯ ಛಾಪಿಗೆ ಮತ್ತೆ ಕನ್ನಡಿ ಹಿಡಿದಿದ್ದಾರೆ. ತುಷಾರ್ ಕಪೂರ್, ಇಮ್ರಾನ್ ಹಷ್ಮಿಗೆ ಹೆಚ್ಚೇನೂ ಅಭಿನಯದ ಅವಕಾಶವಿಲ್ಲ.ನಟಿ ಯೊಬ್ಬಳ ಸಂಕೀರ್ಣ ಬದುಕಿನ ಕಥಾನಕವನ್ನು ಕೇವಲ ರಂಜನೆಯ ಸರಕಾಗಿಯಷ್ಟೇ ಕಾಣುವುದು ತಪ್ಪಲ್ಲವೇ ಎಂಬ ಪ್ರಶ್ನೆಯನ್ನು ಕೂಡ ‘ದಿ ಡರ್ಟಿ ಪಿಕ್ಚರ್‘ ಹುಟ್ಟುಹಾಕುತ್ತದೆ.



No comments:

Post a Comment