Tuesday, 19 April 2011

ಕೂದಲು ಉದುರುವಿಕೆಗೆ ಮಾನಸಿಕ ಒತ್ತಡವೂ ಕಾರಣ

ತಲೆಗೂದಲೆಂದರೆ ಸೌಂದರ್ಯದ ಪ್ರತೀಕ. ಹಾಗೆಂದು ಪ್ರತಿಯೊಬ್ಬರೂ ಪರಿಗಣಿಸಿರುವುದರಿಂದಲೇ ಕೂದಲು ಉದುರುವಿಕೆ ಎನ್ನುವುದು ಇಂದಿನ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇದರ ಹಿಂದಿನ ಕಾರಣಗಳನ್ನು ಹುಡುಕುತ್ತಾ ಹೋದರೆ ಅಲ್ಲಿ ಸಿಗುವ ದೊಡ್ಡ ಮಿಕ ಮಾನಸಿಕ ಒತ್ತಡ.
ಕೂದಲು ಉದುರುವಿಕೆ ಸಮಸ್ಯೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರುವುದು ಇಂದಿನ ಯುವ ಜನತೆ ಮತ್ತು ಕೂದಲು ಉದುರುತ್ತಿರುವುದು ಕೂಡ ಯುವ ಜನತೆಯದ್ದೇ. ಪುರುಷರಿಗಿಂತ ಸ್ತ್ರೀಯರಲ್ಲಿ ಕೂದಲಿನ ಬಗ್ಗೆ ಅತಿಯಾದ ಕಾಳಜಿ ಹೆಚ್ಚಾದರೂ, ಈ ಸಮಸ್ಯೆಯಿಂದ ಹೆಚ್ಚೆಚ್ಚು ಬಾಧೆಗೊಳಗಾಗುತ್ತಿರುವುದು ಪುರುಷರು ಎಂಬುದು ವಾಸ್ತವ. ವಯಸ್ಸು ಇಪ್ಪತ್ತಾಗುತ್ತಿದ್ದಂತೆ ತಲೆಯಲ್ಲಿ ಸೂರ್ಯ-ಚಂದ್ರನ ಮಚ್ಚೆಗಳು ಕಾಣಿಸಿಕೊಳ್ಳುವುದು ಸಹಜವಾಗಿಯೇ ಆತಂಕಕ್ಕೂ ಕಾರಣವಾಗುತ್ತಿದೆ.
ಆದರೆ ಇದಕ್ಕೆ ಆತಂಕವೇ ಕಾರಣ ಎನ್ನುತ್ತಾರೆ ತಜ್ಞ ವೈದ್ಯರು. ಕೆಲವು ಸಂದರ್ಭಗಳಲ್ಲಿ ಕಾರಣವಿಲ್ಲದೆ ಕೂದಲುಗಳು ಉದುರಬಹುದು. ಇಲ್ಲಿ ಮಾನಸಿಕ ಒತ್ತಡ, ಹಾರ್ಮೋನುಗಳ ವ್ಯತ್ಯಾಸ, ಅನಾರೋಗ್ಯದ ಸಂದರ್ಭದಲ್ಲಿ ತೆಗೆದುಕೊಳ್ಳುವ ಔಷಧಿಗಳ ದುಷ್ಪರಿಣಾಮ ಮುಂತಾದ ಹತ್ತು ಹಲವು ಕಾರಣಗಳು ದಿನದಿಂದ ದಿನಕ್ಕೆ ಇದಕ್ಕೆ ಸೇರ್ಪಡೆಯಾಗುತ್ತಾ ಬಂದಿದೆ.
ವೈದ್ಯರ ಪ್ರಕಾರ ದೇಹಕ್ಕೆ ಅಗತ್ಯ ಪೋಷಕಾಂಶಗಳ ಕೊರತೆಯಾದಾಗಲೂ ಕೂದಲು ಉದುರುತ್ತದೆ. ಹಾಗಾಗಿ ಕೂದಲು ಕಾಂತಿಯುತವಾಗಿ ಕಾಣಿಸಿಕೊಳ್ಳಲು ಪೌಷ್ಠಿಕಾಂಶಯುಕ್ತ ಆಹಾರಗಳ ಸೇವನೆಯೂ ಅಗತ್ಯ. ದೈನಂದಿನ ಆಹಾರ ಕ್ರಮದಲ್ಲಿ ಹೆಚ್ಚೆಚ್ಚು ತರಕಾರಿ ಮತ್ತು ಹಣ್ಣು ಹಂಪಲುಗಳ ಬಳಕೆಯೂ ಹೆಚ್ಚು ಫಲಕಾರಿ.
ಕೆಲವರಲ್ಲಿ ನರಸಂಬಂಧೀ ದುರ್ಬಲತೆ ಇದ್ದಾಗ ಕೂದಲುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಅಲ್ಲದೆ ಹಾರ್ಮೋನ್‌ಗಳ ಏರುಪೇರಿನಿಂದಾಗಿಯೂ ಕೂದಲು ಬೇಗನೆ ಬೆಳ್ಳಗಾಗುವ ಲಕ್ಷ್ಮಣಗಳು ಕಂಡುಬರುತ್ತಿವೆ.
ಆದರೆ ಇನ್ನು ಕೆಲವರಿಗೆ ವಂಶಪಾರಂಪರ್ಯವಾಗಿ ಕೂದಲು ಉದುರುವಿಕೆ ವಯೋಮಾನಕ್ಕೆ ವಿರುದ್ಧವಾಗಿ ಆರಂಭವಾಗುತ್ತದೆ. ಫಂಗಸ್ ಸೋಂಕಿನಿಂದ ಉಂಟಾಗುವ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಒಬ್ಬರು ಉಪಯೋಗಿಸಿದ ಬಾಚಣಿಗೆಯನ್ನು ಇನ್ನೊಬ್ಬರು ಉಪಯೋಗಿಸದಿದ್ದರೆ ಒಳಿತು.
ದೀರ್ಘಕಾಲೀನ ಪೋಷಕಾಂಶಗಳ ಕೊರತೆಯಿಂದಾಗಿ ಕೂದಲುಗಳ ತಮ್ಮ ಆಯುಷ್ಯವನ್ನು ಕಳೆದುಕೊಳ್ಳುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದಕ್ಕೆ ಅಧಿಕ ಲವಣಯುಕ್ತ ಆಹಾರಗಳ ಸೇವನೆಯು ಕಾರಣವಾಗುತ್ತದೆ.
ಸರಿಯಾದ ಆರೈಕೆಯಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಕೂದಲ ಉತ್ತಮ ಆರೋಗ್ಯಕ್ಕಾಗಿ ಕೊಬ್ಬರಿ ಎಣ್ಣೆ ಬಳಕೆ ಉತ್ತಮ. ಇದು ಸರಿಯಾದ ರಕ್ತ ಸಂಚಾರಕ್ಕೆ ಎಡೆ ಮಾಡಿಕೊಡುತ್ತದೆ. ಅದೇ ರೀತಿ ದಾಸವಾಳ ಗಿಡದ ಎಲೆಗಳನ್ನು ರುಬ್ಬಿ ಅದರಿಂದ ದೊರಕುವ ರಸವನ್ನು ತಲೆಗೆ ಲೇಪಿಸುವುದು ಉತ್ತಮ. ಆ ಮೂಲಕ ಶಾಂಪೂ ಬಳಕೆಯನ್ನು ತಪ್ಪಿಸಬಹುದಲ್ಲದೆ ಇದು ಕೂದಲನ್ನು ನಯವಾಗಿಸುತ್ತದೆ.
ಅಂದ ಹಾಗೆ ಕೂದಲಿಗೆ ಬಣ್ಣ ಹಚ್ಚುವುದು, ಬ್ಲೀಚ್ ಮಾಡುವುದರಿಂದ ಒಂದು ಹಂತದಲ್ಲಿ ಸುಂದರ, ಕಾಂತಿಯುತ ಕೂದಲನ್ನು ಕಾಣಬಹುದಾದರೂ, ನಂತರದ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುವ ಸಾಧ್ಯತೆಗಳೇ ಹೆಚ್ಚು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.
                                                                                                                                     -ನಾಗರಾಜ್ ಬೇಳ

ಕ್ಷಯ ರೋಗದ ಬಗ್ಗೆ ನಿಮಗೆಷ್ಟು ತಿಳಿದಿದೆ?

  
'ಕ್ಷಯ' ಮಾನವನಿಗೆ ಅದೇ ರೀತಿ ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ. ಈ ರೋಗವು ಮೈಕೊ 'ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್' ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗವು ದೇಹದ ಅಂಗಾಂಗಗಳ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ.
ಕ್ಷಯ ರೋಗಕ್ಕೆ ಸಮಾರು ನೂರು ವರ್ಷಗಳ ಇತಿಹಾಸವಿದೆ. ಇದು ಸಂಪೂರ್ಣವಾಗಿ ಗುಣಪಡಿಸುಬಹುದಾದ ಕಾಯಿಲೆಯಾಗಿದೆ. ರೋಗಿಯೊಬ್ಬ ಕೆಮ್ಮಿದಾಗ ಕಫದಲ್ಲಿರುವ ರೋಗಾಣುವಿನಿಂದ ಈ ರೋಗ ಹರಡುತ್ತದೆ. ಕಾಯಿಲೆ ಇರುವವರು ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ತುಂತುರು ಹನಿಗಳ ಮೂಲಕ ಬೇರೊಬ್ಬ ವ್ಯಕ್ತಿಗೆ ರೋಗ ಹರಡಲು ಕಾರಣವಾಗುತ್ತದೆ. ಹೀಗಾಗಿ ಇದು ಗಾಳಿಯ ಮೂಲಕವೂ ಹರಡುತ್ತವೆ.
ಈ ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗಲಿಸಬಹುದು. ಇದು ಸಾಮಾನ್ಯವಾಗಿ 15ರಿಂದ 45 ವರ್ಷದೊಳಗಿನವರಿಗೆ ಹೆಚ್ಚಾಗಿ ತಗಲುತ್ತವೆ. ಕ್ಷಯರೋಗದ ಪ್ರಮುಖ ಲಕ್ಷ್ಮಣಗಳು- ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಅಶಕ್ತತೆ, ಕಫದಲ್ಲಿ ರಕ್ತ, ರಾತ್ರಿಯಲ್ಲಿ ಬೆವರು, ಎದೆನೋವು, ಹಸಿವಾಗದಿರುವುದು. ಎಚ್‌ಐವಿ, ಏಡ್ಸ್ ಮತ್ತು ಮಧುಮೇಹ ರೋಗಿಗಳಿಗೂ ಬೇಗನೇ ಸೋಂಕು ತಗಲುವ ಸಾಧ್ಯತೆ ಹೆಚ್ಚಿವೆ.
ಕ್ಷಯರೋಗದ ಲಕ್ಷ್ಮಣಗಳು ಕಂಡುಬಂದಲ್ಲಿ ತಾತ್ಸಾರ ಮಾಡದೆ ಕೂಡಲೇ ಅರ್ಹ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ರೋಗ ಮತ್ತಷ್ಟು ಮಾರಕವಾಗುವ ಸಾಧ್ಯತೆ ಹೆಚ್ಚಿದೆ. ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಶ್ವಾಸಕೋಶ, ಮೆದುಳು, ಬೆನ್ನಮೂಳೆ ಭಾಗಗಳಿಗೆ ಹಾನಿಕಾರಕವಾಗುತ್ತದೆ. ಹಾಗಾಗಿ ರೋಗವನ್ನು ಯಾವುದೇ ಹಂತದಲ್ಲಿಯೂ ಕಡೆಗಣಿಸಬಾರದು.
ಪೌಷ್ಠಿಕ ಆಹಾರ ಕೊರತೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದ್ದರಿಂದ ರೋಗಾಣುಗಳು ಬೇಗನೇ ದೇಹವನ್ನು ಆಕ್ರಮಿಸುಕೊಳ್ಳುತ್ತವೆ. ಆದ್ದರಿಂದ ಪೌಷ್ಠಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಬೇಕು. ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ. ಕಫ ಪರೀಕ್ಷೆ, ಎಕ್ಸ್‌ರೇ ಮತ್ತು ರಕ್ತ ಪರೀಕ್ಷೆಯಿಂದಲೂ ರೋಗವನ್ನು ನಿರ್ಧರಿಸಬಹುದಾಗಿದೆ.
ರಿಫಾಂಪಿಸಿಸ್, ಇತ್ಯಾಂಬ್ಯುಟಾಲ್ ಮತ್ತು ಐಸೊನೆಕ್ಸ್‌ಗಳಂತಹ ಔಷಧಗಳಿಂದ ಈ ರೋಗ ವಾಸಿಯಾಗುತ್ತದೆ. ಈಗ ಡಾಟ್ಸ್ ಚಿಕಿತ್ಸಾ ವಿಧಾನದಲ್ಲಿ ಪರಿಣಾಮಕಾರಿ ಐದು ಔಷಧಿಗಳಿದ್ದು, ಕನಿಷ್ಠ 6 ತಿಂಗಳು ತಪ್ಪದೆ ಸೇವಿಸಬೇಕು. ರೋಗ ವಾಸಿಯಾಗದೇ ಔಷಧಿ ತೆಗೆದುಕೊಳ್ಳುವುದು ನಿಲ್ಲಿಸಿದ್ದರೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಕೆಮ್ಮುವ ಸಂದರ್ಭದಲ್ಲಿ ಇತರರಿಗೆ ಹರಡದಂತೆ ಕರವಸ್ತ್ರ ಉಪಯೋಗಿಸಬೇಕು. ಹಾಗೆಯೇ ಪರಿಸರ, ಸ್ವಚ್ಛ ಗಾಳಿಯ ಬಗ್ಗೆಯೂ ಜಾಗರೂಕತೆ ವಹಿಸಬೇಕು. ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ಜಾಗೃತಿ ದಿನವಾಗಿ ಆಚರಿಸಲಾಗುತ್ತಿದೆ.
                                                                                                                  *ನಾಗರಾಜ್ ಬೇಳ

ಮೂವತ್ತಾಯಿತೇ? ಮಧುಮೇಹ ಪರೀಕ್ಷೆ ಮಾಡಿಸ್ಕೊಳ್ಳಿ...

ಮೊದಲೆಲ್ಲಾ ಅರುವತ್ತಕ್ಕೇ ಅರಳು ಮರಳು ಅನ್ನುವಂತಹಾ ಪರಿಸ್ಥಿತಿಯೂ, ಅರುವತ್ತು ವರ್ಷ ದಾಟಿದರೆ ಒಂದಿಲ್ಲೊಂದು ವೃದ್ಧಾಪ್ಯದ ಕಾಯಿಲೆ ಅಂಟಿಕೊಳ್ಳಲು ಶುರು ಹಚ್ಚಿಕೊಳ್ಳುತ್ತದೆ ಎಂಬ ಪರಿಸ್ಥಿತಿ ಇತ್ತು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ. ವರುಷ ಮೂವತ್ತು ದಾಟಿತೋ, ಬೀಪಿ, ಶುಗರ್, ಬೊಜ್ಜು, ಹಾರ್ಟ್ ಪ್ರಾಬ್ಲಂ ಒಂದಿಲ್ಲೊಂದು ಮುತ್ತಿಕ್ಕಿಕೊಂಡು ಬಿಡಲಾರಂಭಿಸಿದೆ.
ಪ್ರಕೃತಿಯನ್ನು, ವಾತಾವರಣವನ್ನು ನಾವು ಅಷ್ಟರ ಮಟ್ಟಿಗೆ ಹಾಳು ಮಾಡಿಕೊಂಡಿದ್ದೇವೆ. ಹೀಗಾಗಿ ಇದ್ದುದರಲ್ಲೇ ಬದುಕಬೇಕಾದ ಅನಿವಾರ್ಯತೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಐಡಿಎಫ್)ದ ವರದಿ ಪ್ರಕಾರ, ಭಾರತದಲ್ಲಿ ಮಧುಮೇಹ, ಸಕ್ಕರೆ ಕಾಯಿಲೆ, ಸಿಹಿಮೂತ್ರ ರೋಗ ಎಂದೆಲ್ಲಾ ಕರೆಯಲ್ಪಡುವ ಡಯಾಬಿಟೀಸ್‌ನಿಂದ ಬಳಲುತ್ತಿರುವವರ ಸಂಖ್ಯೆ 4.09 ಕೋಟಿ. ಇದು ಹೀಗೆಯೇ ಮುಂದುವರಿದರೆ, 2030ರ ವೇಳೆಗೆ ಜಗತ್ತಿನ ಐವರು ಮಧುಮೇಹಿಗಳಲ್ಲಿ ಒಬ್ಬ ಭಾರತೀಯ ಇರುವಷ್ಟರ ಮಟ್ಟಕ್ಕೆ ಮುಟ್ಟುತ್ತದೆಯಂತೆ!
ಹಾಗಿದ್ದರೆ, ಮಧುಮೇಹಕ್ಕೆ ಕಾರಣಗಳೇನು? ನಮ್ಮ ಬದಲಾಗಿರುವ ಜೀವನ ಶೈಲಿಯೇ? ಮಾನಸಿಕ ಒತ್ತಡವೇ? ನಮ್ಮ ಜೀನ್‌ಗಳೇ? ಈ ತೊಂದರೆ ಬಾರದಂತೆ, ಬಂದಿದ್ದನ್ನು ನಿಯಂತ್ರಿಸುವಂತೆ ಏನಾದರೂ ಉಪಾಯಗಳಿವೆಯೇ?
ಹೌದು, ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ನಮ್ಮ ಜೀವನ ಶೈಲಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಜೀವನ ಶೈಲಿಯಲ್ಲಿ ಮಧುಮೇಹಕ್ಕೆ ಪೂರಕವಾಗುವಂಥವುಗಳ ಬಗ್ಗೆ ಒಂದಿಷ್ಟು ಗಮನ ಹರಿಸೋಣ:
ಕೂತಲ್ಲೇ ಕೆಲಸ...
ಮುಖ್ಯವಾಗಿ, ಇದು ಕುಳಿತು ತಿನ್ನುವ ಕಾಲ. ಅಂದರೆ ಒಂದು ಬೆಳಿಗ್ಗೆ ಕಂಪ್ಯೂಟರ್ ಎದುರು ಕುಳಿತರೆ ಏಳೋದು ರಾತ್ರೀನೇ. ಬರೇ ಕೈಬೆರಳುಗಳಿಗೆ ಮಾತ್ರವೇ ಒಂದಿಷ್ಟು ವ್ಯಾಯಾಮ ದೊರೆತರೆ ಸಾಕೇ? ದೇಹವೂ ಒಂದಿಷ್ಟು ಅಲುಗಾಡಬೇಡವೇ? ಕುಳಿತುಕೊಂಡೇ ಮಾಡುವ ಕೆಲಸ ಇರುವವರಿಗೆ ವಾಕಿಂಗ್ ಅಥವಾ ಮೆಟ್ಟಿಲೇರುವುದು... ಇಂಥವೆಲ್ಲ ಬೇಕೇ ಬೇಕು. ಕುಳಿತೇ ಕೆಲಸ ಮಾಡುವವರು ಒಂದು ಗಂಟೆಗೊಮ್ಮೆಯಾದರೂ ಎದ್ದು ಅತ್ತಿತ್ತ ಹೋಗಿ, ನೀರು ಕುಡಿದು ಬಂದರೆ ಒಳಿತು. ಕೂತಲ್ಲೇ ಕೆಲಸ ಮಾಡುವುದು ಬೊಜ್ಜು ಹೆಚ್ಚಿಸಬಹುದು, ಇದರಿಂದ ಡಯಾಬಿಟೀಸ್ ಚಿಗಿತುಕೊಳ್ಳಲೂ ಕಾರಣವಾಗಬಹುದು.
ಒತ್ತಡ...
ಡೆಡ್‌ಲೈನುಗಳನ್ನು ಮೀಟ್ ಮಾಡುವ ಸಾಹಸ, ಮಾರಾಟದಲ್ಲಿ ಇಂತಿಷ್ಟು ಗುರಿ ಸಾಧಿಸಬೇಕೆಂಬ ಒತ್ತಡ, ಇಷ್ಟು ಗಂಟೆಯೊಳಗೆ ಇಷ್ಟು ಕೆಲಸ ಆಗಲೇಬೇಕೆಂಬ ನಿಯಮ... ಇದಲ್ಲದೆ, ಹೊರಗಿನಿಂದಲೂ ಬೆಲೆ ಏರಿಕೆ, ಸಾಂಸಾರಿಕ ಒತ್ತಡಗಳು... ಕಚೇರಿಯಲ್ಲಿಯೂ ನೆಮ್ಮದಿಯಿಲ್ಲ... ಇಂತಹಾ ಪರಿಸ್ಥಿತಿಯು ಮಾನಸಿಕ ಒತ್ತಡಕ್ಕೆ ಕಾರಣವಾಗಿ, ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಮಾತ್ರವಲ್ಲದೆ, ಡಯಾಬಿಟೀಸ್ ಹೆಚ್ಚಳಕ್ಕೂ ತನ್ನ ಕೊಡುಗೆ ನೀಡುತ್ತದೆ ಎನ್ನುತ್ತಾರೆ ತಜ್ಞರು.
ಜಂಕ್ ಫುಡ್ ಇಷ್ಟಾನೋ...
ನಗರೀಕರಣ ಹೆಚ್ಚಾದಂತೆ, ಯಾವುದೇ ಪೋಷಕಾಂಶಗಳಿಲ್ಲದ, ಜಂಕ್ ಆಹಾರಕ್ಕೆ ನಾವೆಲ್ಲಾ ಮೊರೆ ಹೋಗುತ್ತಿದ್ದೇವೆ. ನಾರಿನಂಶವಿರುವ ಗೋಧಿಯ ಬದಲು, ಅತ್ಯಲ್ಪ ಕಾರ್ಬೊಹೈಡ್ರೇಟ್ ಇರುವ ಮೈದಾ ಹಿಟ್ಟಿನ ಆಹಾರಕ್ಕೆ, ಪಾಸ್ತಾ, ಪಿಜ್ಜಾ, ನೂಡಲ್... ಏನೇನೋ ಕಂಡು ಕೇಳರಿಯದ ಪೋಷಕಾಂಶಗಳಿಲ್ಲದ ಆಹಾರಕ್ಕೆ ಬಲಿಯಾಗುತ್ತಿದ್ದೇವೆ. ನಾಲಿಗೆ ಚಪಲ ಬಿಡಬೇಕಲ್ಲ... ಅದೂ ಇರಲಿ, ನಮ್ಮ ಸಾಂಪ್ರದಾಯಿಕ ಆಹಾರಗಳೂ ಇರಲಿ. ಇಲ್ಲವಾದಲ್ಲಿ ಪರಿತಪಿಸಬೇಕಾಗಿರುವುದು ನಾವೇ ಅಲ್ಲವೇ?
ಒಂದು ವರದಿಯ ಪ್ರಕಾರ, ಪಾಶ್ಚಾತ್ಯರಿಗೆ ಹೋಲಿಸಿದರೆ ಮಧುಮೇಹಕ್ಕೆ ತುತ್ತಾಗುವ ಭಾರತೀಯರ ವಯಸ್ಸು ಅವರಿಗಿಂತ ಸುಮಾರು 10-20 ವರ್ಷ ಕಡಿಮೆ. ಅಂದರೆ ಯುವ ಪ್ರಾಯದಲ್ಲೇ ಇದು ಬಾಧಿಸುತ್ತದೆ. ಇದಕ್ಕೆ ಭಾರತೀಯ ಜೀವನ ಶೈಲಿ, ಆಹಾರ ಸೇವನಾ ಪದ್ಧತಿಯೂ ಪ್ರಮುಖ ಕಾರಣ.
ಹಾಗಿದ್ದರೆ ನಾವೇನು ಮಾಡಬಹುದು...
* ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಂಡು, ಡಯಾಬಿಟಿಸ್ ಇದೆಯೇ ಎಂದು ತಿಳಿದುಕೊಳ್ಳಬೇಕು. ಡಯಾಬಿಟೀಸ್ ಆರಂಭವಾದಾಗಲೇ ಇದು ಪತ್ತೆಯಾದರೆ, (ಇದನ್ನು ಪ್ರಿ-ಡಯಾಬಿಟಿಸ್ ಅಂತ ಕರೀತಾರೆ) ಅದನ್ನು ಗುಣಪಡಿಸುವುದು ಸುಲಭ. ಆದರೆ ಅದು ಡಯಾಬಿಟಿಸ್ ಹಂತಕ್ಕೆ ತಲುಪಿದರೆ, ಅದನ್ನು ಸಂಪೂರ್ಣ ಕಿತ್ತು ಹಾಕುವ ಮದ್ದಿಲ್ಲ. ಹೀಗಾಗಿ ಬಾರದಂತೆ ತಡೆಯುವುದೇ ನಮ್ಮ ಉದ್ದೇಶವಾಗಿರಬೇಕು.
* ತೂಕದವರಾಗಿದ್ದರೆ, ಆದಷ್ಟು ಬೇಗ ತೂಕ ಇಳಿಸಿಕೊಳ್ಳಬೇಕು. ಬೊಜ್ಜು ಕಡಿಮೆಯಾದರೆ ಡಯಾಬಿಟೀಸ್‌ನ ರಿಸ್ಕ್ ಕೂಡ ಕಡಿಮೆಯಾಗುತ್ತದೆ ಎಂಬುದನ್ನು ಮರೆಯಬೇಡಿ. ಜೀವನಶೈಲಿ - ಆಹಾರ ಸೇವನೆಯಲ್ಲಿ ಬದಲಾವಣೆ ಮತ್ತು ನಿಯಮಿತ ವ್ಯಾಯಾಮ ಮಾಡಿದರೆ ಅತ್ಯುತ್ತಮ. ಸೊಪ್ಪು-ತರಕಾರಿ, ಪೂರಿ, ಮೈದಾದಿಂದ ಮಾಡಿದ ಬ್ರೆಡ್ ಐಟಂ ಮುಂತಾದವುಗಳ ಬದಲು ರೋಟಿ, ಕುಚ್ಚಲಕ್ಕಿಯಂತಹಾ ಪೂರ್ಣಧಾನ್ಯದ ಆಹಾರ ಧಾರಾಳ ಸೇವಿಸಬೇಕು.
* ಬಣ್ಣ ಬಣ್ಣದ ಪೊಟ್ಟಣಗಳಲ್ಲಿ ಬರುವ ಚಿಪ್ಸ್, ಕುಕೀಸ್, ಕೇಕುಗಳು, ಐಸ್ ಕ್ರೀಂಗಳು ಮುಂತಾದವುಗಳನ್ನು ಸಾಧ್ಯವಾದಷ್ಟು ದೂರ ಮಾಡಿ.
* ದಿನಕ್ಕೆ ಕನಿಷ್ಠ ಅರ್ಧಗಂಟೆಯಂತೆ ವಾರದ ಐದು ದಿನಗಳಾದರೂ ವ್ಯಾಯಾಮ ಮಾಡಬೇಕು.
* ಸಾಧ್ಯವಿರುವಾಗಲೆಲ್ಲಾ ನಡೆಯಿರಿ, ಮೆಟ್ಟಿಲು ಹತ್ತಿ ತಾರಸಿಗೆ ಹೋಗಿ.
* ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ಅಥವಾ ಧ್ಯಾನಕ್ಕೆ ಮೊರೆ ಹೋಗಿ.
* ಧೂಮಪಾನ ತ್ಯಜಿಸಿ
* ಮದ್ಯಪಾನದಿಂದ ದೂರವಿರಿ.

ಚಳಿಗಾಲ: ಒಡೆಯುವ ಮುಖದ ಚರ್ಮಕ್ಕೆ ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ಚರ್ಮದ ಆರೈಕೆ ಎಲ್ಲರಿಗೂ ಕಷ್ಟವೇ. ಕೈಕಾಲುಗಳೆಲ್ಲ ಬಿರುಕು ಬಿಟ್ಟು ನೋಡಲು ಅಸಹ್ಯವಾಗಿ ಕಂಡರೆ, ತುಟಿಯೂ ಒಣಗಿ ರಕ್ತ ಸೋರಿ, ಮುಖದ ಚರ್ಮವೂ ಒರಟಾಗಿ ಏನು ಮಾಡಲಿ ಎಂದು ಅರ್ಥವಾಗುವುದಿಲ್ಲ. ಇದು ಕೇವಲ ಹುಡುಗಿಯರ ಸಮಸ್ಯೆ ಮಾತ್ರವಲ್ಲ. ಹುಡುಗರದ್ದೂ ಕೂಡಾ. ಎಲ್ಲ ವಯಸ್ಸಿನವರಿಗೂ ಚಳಿಗಾಲದಲ್ಲಿ ಚರ್ಮದ ರಕ್ಷಣಯೇ ದೊಡ್ಡ ಸಮಸ್ಯೆ. ಹಾಗಾಗಿ ಚಳಿಗಾಲದಲ್ಲಿ ಚರ್ಮ ನುಣುಪಾಗಿರಲು ವಯಸ್ಸು ಹಾಗೂ ಲಿಂಗಬೇಧವಿಲ್ಲದೆ ಮನೆಯಲ್ಲೇ ಮಾಡಬಹುದಾದ ರಕ್ಷಣೆಯ ಕೆಲವು ವಿಧಾನಗಳು ಇಲ್ಲಿವೆ. ಪ್ರಯತ್ನಿಸಿ ನೋಡಿ.
ಬಾಳೆಹಣ್ಣಿನ ಮಾಸ್ಕ್- ನಿಮ್ಮ ಮುಖದ ಚರ್ಮ ಎಣ್ಣೆಯುಕ್ತ ಹಾಗೂ ಒಣ ತ್ವಚೆಯಾಗಿದ್ದರೆ, ಬಾಳೆಹಣ್ಣಿನ ಮಾಸ್ಕ್ ಪ್ರಯೋಗಿಸಬಹುದು. ಚೆನ್ನಾಗಿ ಹಿಸುಕಿದ ಬಾಳೆಹಣ್ಣನ್ನು ಸ್ವಲ್ಪ ಕೆನೆಯೊಂದಿಗೆ ಸೇರಿಸಿ ಮಿಕ್ಸ್ ಮಾಡಿ ಸ್ವಚ್ಛ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದಜು ನಿಮ್ಮ ಮುಖವನ್ನು ತುಂಬ ನಯವಾಗಿಸುತ್ತದೆ. ಚಳಿಗಾಲಕ್ಕೆ ಇದು ಹೇಳಿ ಮಾಡಿಸಿದ ಮಾಸ್ಕ್ ಮೊಟ್ಟೆಯ ಬಿಳಿಲೋಳೆಯ ಮಾಸ್ಕ್- ಮೊಟ್ಟೆಯ ಬಿಳಿ ಲೋಳೆಯನ್ನು ಚೆನ್ನಾಗಿ ಬೀಟ್ ಮಾಡಿ, ಅದನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಈ ಮಾಸ್ಕ್ ನಿಮ್ಮ ಮುಖವನ್ನು ರಿಫ್ರೆಶ್ ಮಾಡುವುದಲ್ಲದೆ, ನಿಮ್ಮ ಚರ್ಮರಂಧ್ರಗಳನ್ನು ಟೈಟ್ ಮಾಡಿಸುತ್ತದೆ. ಇದು ನಿಮ್ಮನ್ನು ಇನ್ನು ಆರೋಗ್ಯಯುತವಾಗಿ ಕಂಗೊಳಿಸುವಂತೆ ಮಾಡುತ್ತದೆ. ಚಳಿಗಾಲದಲ್ಲಂತೂ ಇದು ಕಟುವಾದ ಚಳಿಗಾಳಿಗಳಿಂದ ನಿಮ್ಮ ಚರ್ಮಕ್ಕೆ ಸುರಕ್ಷೆ ನೀಡುತ್ತದೆ.
ಹಾಲಿನ ಮಾಸ್ಕ್- ಚಳಿಗಾಲದಲ್ಲಿ ಕಚೇರಿಗೆ ಹೋಗುವ ಮಂದಿಯ ಕಷ್ಟವಂತೂ ಹೇಳತೀರದು. ಹೊರಗಿನ ವಾತಾವರಣದ ಚಳಿಗಾಳಿಗೆ ಮುಖದ ಚರ್ಮ ಬಹುಬೇಗನೆ ಬಿರುಸಾಗುತ್ತದೆ. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಸರಿಯಾದ ಸಮಯದ ಕೊರತೆಯೂ ಕಾಡುತ್ತದೆ. ಆಧರೆ ಮನೆಯಲ್ಲೇ ಸುಲಭವಾಗಿ ಹೆಚ್ಚು ಸಮಯ ಅಗತ್ಯವಿಲ್ಲದ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಬಹುದು. ಹಾಲಿನ ಮಾಸ್ಕ್ ಕೂಡಾ ಅಂತಹ ಪ್ಯಾಕ್‌ಗಳಲ್ಲೊಂದು. ಹಾಲಿನ ಕೆನೆ, ಸ್ವಲ್ಪ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಕಚೇರಿ ಕೆಲಸದಿಂದ ಸುಸ್ತಾಗಿರುವ ಮುಖದ ಚರ್ಮಕ್ಕಿದು ತಾಜಾತನದ ಅನುಭೂತಿ ನೀಡುವ ಜೊತೆಗೆ ಚಳಿಗಾಲದ ಚರ್ಮದ ತೊಂದರೆಗಳನ್ನು ತೊಡೆದು ಹಾಕಿ ನಯವಾದ ಮುಖದ ಚರ್ಮ ನೀಡುತ್ತದೆ. 10. 15 ನಿಮಿಷದ ನಂತರ ಹಚ್ಚಿದ ಪ್ಯಾಕ್ ತೊಳೆಯಬಹುದು.
ಬೆಣ್ಣೆಹಣ್ಣಿನ ಮಾಸ್ಕ್- ಚಳಿಗಾಲದಲ್ಲಿ ಹೆಚ್ಚು ಒಣಚರ್ಮವಾಗಿರುವ ಮಂದಿಗೆ ಸೂಕ್ತ ಮಾಸ್ಕ್ ಎಂದರೆ ಅದು ಬೆಣ್ಣೆಹಣ್ಣಿನ ಮಾಸ್ಕ್. ಬೆಣ್ಣೆಹಣ್ಣಿನ ಒಳಗಿನ ಭಾಗವನ್ನು ತೆಗೆದು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ಹಚ್ಚಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಚಳಿಗಾಲದ ಒಣಗುವಿಕೆಯ್ನನು ತಡೆಯಲು ಇದು ಚರ್ಮಕ್ಕೆ ಎಲ್ಲಾ ರೀತಿಯ ವಿಟಮಿನ್, ಪೋಷಣೆಯನ್ನು ನೀಡುವುದರಿಂದ ಇದು ಹೆಚ್ಚು ಒಣಗುವ ಒಡೆಯುವ ಚರ್ಮದವರಿಗೆ ಅತ್ಯುತ್ತಮ.
ಜೇನಿನ ಮಾಸ್ಕ್- ಜೇನು ಒಂದೆರಡು ಚಮಚ ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಒಂದು ಚಮಚ ಸೇರಿಸಿ. (ರೋಸ್ ವಾಟರ್ ಸೇರಿಸದೆಯೂ ಹಾಗೆಯೇ ಜೇನನ್ನೂ ಮುಖಕ್ಕೆ ಹಚ್ಚಿಕೊಳ್ಳಬಹುದು) ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
ಪಪ್ಪಾಯಿ ಫೇಸ್ ಪ್ಯಾಕ್- ಪಪ್ಪಾಯಿ ಹಣ್ಣನ್ನು ಹಿಸುಕಿ ಚೆನ್ನಾಗಿ ಪೇಸ್ಟ್ ಮಾಡಿ ಮುಖ, ಕುತ್ತಿಗೆಗೆ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ. ಚರ್ಮ ನುಣುಪಾಗಿ ಹೊಳೆಯುತ್ತದೆ.
ದ್ರಾಕ್ಷಿ ಮಾಸ್ಕ್- ದ್ರಾಕ್ಷಿ ಹಣ್ಣಿನ ಬೀಜ ತೆಗೆದು ಚೆನ್ನಾಗಿ ಪೇಸ್ಟ್ ಮಾಡಿ. ಇದನ್ನು ಚೆನ್ನಾಗಿ ಮುಖಕ್ಕೆ ಹಚ್ಚಿ ತೊಳೆಯಿರಿ.
ಬಾದಾಮಿ ಎಣ್ಣೆ, ಹಾಲು ಫೇಸ್ ಪ್ಯಾಕ್- ಬಾದಾಮಿ ಎಣ್ಣೆ, ಸ್ವಲ್ಪ ಸಕ್ಕರೆ ಹಾಗೂ ಬಿಸಿ ಮಾಡದ ತಾಜಾ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖ, ಕತ್ತಿಗೆ ಲೇಪಿಸಿ 15 ನಿಮಿಷ ಬಿಟ್ಟು ತೊಳೆಯಿರಿ.
ಕ್ಯಾರೆಟ್- ಜೇನಿನ ಮಾಸ್ಕ್- ಕ್ಯಾರೆಟನ್ನು ತುರಿದು ಪೇಸ್ಟ್ ಮಾಡಿ. ಅದಕ್ಕೆ ಜೇನು ಸೇರಿಸಿ. ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.
ತೆಂಗಿನ ಹಾಲಿನ ಮಾಸ್ಕ್- ತೆಂಗಿನಕಾಯಿ ತುರಿದು ಅದನ್ನು ರುಬ್ಬಿ ರಸ ತೆಗೆಯಿರಿ. ಹಾಗೇ ಆ ರಸವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆಯಿರಿ.
ಟೊಮ್ಯಾಟೋ-ಮೊಸರಿನ ಪ್ಯಾಕ್- ಚೆನ್ನಾಗಿ ಪೇಸ್ಟ್ ಮಾಡಿದ ಟೊಮ್ಯಾಟೋಗೆ ಸ್ವಲ್ಪ ಮೊಸರು ಸೇರಿಸಿ. ಒಂದೆರಡು ಹನಿ ರೋಸ್ ವಾಟರ್ ಸೇರಿಸಿ ಮುಖಕ್ಕೆ ಈ ಮಿಶ್ರಣ ಹಚ್ಚಿ. 15 ನಿಮಿಷ ಬಿಟ್ಟು ತೊಳೆಯಿರಿ.

ಕೋಳಿ ಮೊಟ್ಟೆ ನಿಮ್ಮ ಸೌಂದರ್ಯಕ್ಕೆ ಟಾನಿಕ್!

ಕೋಳಿಮೊಟ್ಟೆಯೂ ಕೂಡಾ ಚರ್ಮಕ್ಕೆ ಟಾನಿಕ್ ಇದ್ದಂತೆ ಎಂಬ ವಿಷಯ ನಿಮಗೆ ಗೊತ್ತೇ? ಹೌದು. ಇದು ಅಕ್ಷರಶಃ ಕೋಳಿಮೊಟ್ಟೆ ಎಣ್ಣೆ ಹಾಗೂ ಮಿಶ್ರ ಚರ್ಮವಿದ್ದವರಿಗೆ ಸೂಕ್ತ ಟಾನಿಕ್. ಮೊಟ್ಟೆಯ ಬಿಳಿಯ ಲೋಳೆ ಹಾಗೂ ಹಳದಿ ಲೋಳೆ ಎರಡೂ ಕೂಡಾ ಚರ್ಮವನ್ನು ನುಣುಪಾಗಿಸುತ್ತದೆ. ಮೊಡವೆ ಹಾಗೂ ಮೊಡವೆಗಳಿಂದಾಗಿರುವ ಕಲೆಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಸೂಕ್ತ ಹಾಗೂ ಸುಲಭ ಸಾಧನ ಕೂಡಾ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಸೌಂದರ್ಯ ಕಾಳಜಿಯಿದು.
ಮೊಟ್ಟೆ ಹಾಗೂ ಜೇನಿನ ಮಾಸ್ಕ್- ಒಂದು ಮೊಟ್ಟೆಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಕಿ. ಅದಕ್ಕೆ ಆಲಿವ್ ಆಯಿಲ್ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. 15, 20 ನಿಮಿಷಗಳ ಕಾಲ ಒಣಗಲು ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ನಂತರ ಮತ್ತೆ ತಣ್ಣೀರಿನಿಂದ ಮುಖ ತೊಳೆಯಿರಿ. ಮೊಟ್ಟೆ ಚರ್ಮದ ರಂಧ್ರಗಳನ್ನು ಟೈಟ್ ಮಾಡುವ ಜತೆಗೆ ಚರ್ಮವನ್ನು ಟೋನ್ ಮಾಡುತ್ತದೆ. ಜೇನು ಚರ್ಮವನ್ನು ಮಾಯ್ಸ್‌ಶ್ಚರೈಸ್ ಮಾಡುವ ಗುಣ ಹೊಂದಿದ್ದು, ಮೊಡವೆ ಹಾಗೂ ಕಪ್ಪುಕಲೆಗಳನ್ನೂ ಹೋಗಲಾಡಿಸಲು ಸಹಕರಿಸುತ್ತದೆ.

ಕಣ್ಣಿನ ಕೆಳಭಾಗಕ್ಕೆ ಮೊಟ್ಟೆಯ ಬಿಳಿಲೋಳೆ ಮಾಸ್ಕ್- ಇದು ಶಾಶ್ವತ ಪರಿಹಾರ ಅಲ್ಲದಿದ್ದರೂ ತಾತ್ಕಾಲಿಕವಾಗಿ ಉತ್ತಮ ಪರಿಹಾರ. ಕಣ್ಣಿನ ಕೆಳಗೆ ಕಪ್ಪು ವರ್ತುಲದಿಂದ ಬಳಲುತ್ತಿರುವವರು ಹೊರಗೆ ಹೋಗುವ ಸಂದರ್ಭ ತಾತ್ಕಾಲಿಕವಾಗಿ ಮೊಟ್ಟೆಯ ಬಿಳಿ ಲೋಳೆಯ ಮೂಲಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೊರಗೆ ಹೋಗುವ ಮೊದಲು ಮೊಟ್ಟೆಯ ಬಿಳಿಲೋಳೆಯನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ. ಸ್ವಲ್ಪ ಒಣಗಿನ ಮೇಲೆ ಇನ್ನೊಂದು ಕೋಟ್ ಹಚ್ಚಿ. ನಂತರ ಒಣಗಿದ ಮೇಲೆ ತೊಳೆಯದೆ ಅದರ ಮೇಲೆಯೇ ಮೇಕಪ್ ಮಾಡಿ. ಇದು ತುಂಬ ಹೊತ್ತು ಇರುವುದರಿಂದ ಕೆಲವು ಗಂಟೆಗಳ ಕಾಲ ಕಣ್ಣಿನ ಕೆಳಗಿನ ಕಪ್ಪು ವರ್ತುಲ ಕಾಣುವುದಿಲ್ಲ.
ಮೊಟ್ಟೆಯ ಹೇರ್ ಕಂಡೀಷನರ್- ಎಣ್ಣೆಯುಕ್ತ ಕೂದಲಿನವರಿಗೆ ಇದೊಂದು ಅತ್ಯುತ್ತಮ ಟಾನಿಕ್. ಒಂದು ಮೊಟ್ಟೆಯನ್ನು ಒಡೆದು ಅದನ್ನು ಚೆನ್ನಾಗಿ ಬೀಟ್ ಮಾಡಿ. ಅದಕ್ಕೆ ಒಂದು ಚಮಚ ಆಲಿವ್ ಆಯಿಲ್ ಹಾಕಿ ಮತ್ತೆ ಬೀಟ್ ಮಾಡಿ. ಇದಕ್ಕೆ ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಕಲಸಿ ತಲೆಗೆ ಹಚ್ಚಿ. ಸ್ವಲ್ಪ ಹೊತ್ತಿನ ನಂತರ ತಣ್ಣೀರಿನಿಂದ ತೊಳೆಯಿರಿ. ಮೊಟ್ಟೆಯನ್ನು ಬೇಯಿಸಿ ಬಳಸಬೇಡಿ.

ಮೊಟ್ಟೆ ಹಾಗೂ ಬಾಳೆಹಣ್ಣಿನ ಪ್ರೋಟೀನ್ ಮಾಸ್ಕ್- ನಾಲ್ಕು ಚಮಚ ಕಾಬೂಲಿ ಚೆನ್ನಾ (ದೊಡ್ಡ ಕಡಲೆಕಾಳು) ಪುಡಿಯನ್ನು ಒಂದು ಬಾಳೆಹಣ್ಣಿನ ಜತೆ ಸೇರಿಸಿ ಪೇಸ್ಟ್ ಮಾಡಿ. ಒಂದು ಮೊಟ್ಟೆಯನ್ನು ಒಡೆದು ಇದಕ್ಕೆ ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷದ ನಂತರ ತೊಳೆಯಿರಿ. ಇದು ಮುಖದಲ್ಲಿರುವ ಕೆಂಪು ಗುಳ್ಳೆಗಳನ್ನು ತೆಗೆದುಹಾಕುವ ಜತೆಗೆ ಮುಖದ ರಂಧ್ರಗಳನ್ನು ಟೈಟ್ ಮಾಡುತ್ತದೆ.

ಮೊಟ್ಟೆ ಹಾಗೂ ಓಟ್‌ಮೀಲ್‌ನ ಮೊಡವೆ ಟ್ರೀಟ್‌ಮೆಂಟ್- ಒಂದು ಮೊಟ್ಟೆಯ ಬಿಳಿಲೋಳೆಯನ್ನು ತೆಗೆದು ಅದಕ್ಕೆ ಒಟ್‌ಮೀಲ್ ಪೌಡರ್ ಸೇರಿಸಿ ಪೇಸ್ಟ್ ಮಾಡಿ. ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷದ ನಂತರ ಉಗುರುಬಿಸಿ ನೀರಿನ್ಲಲಿ ತೊಳೆದು ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದು ಮೊಡವೆಯ ತೊಂದರೆಯಿಂದ ಬಳಲುತ್ತಿರುವವರಿಗೆ ಸೂಕ್ತ.

ನಿಮ್ಮ ಸೌಂದರ್ಯ ದೇಹದ ಆಕಾರದಲ್ಲೂ ಅಡಗಿದೆ!

ಸೌಂದರ್ಯ ಕೇವಲ ಮುಖದಲ್ಲಿ ಮಾತ್ರ ಅಡಗಿದೆಯೇ? ಖಂಡಿತಾ ಅಲ್ಲ. ಬಾಹ್ಯ ಸೌಂದರ್ಯದಲ್ಲಿ ಬಹುಮುಖ್ಯ ಪಾತ್ರ ವಹಿಸುವುದು ದೇಹದ ಆಕಾರ. ದಪ್ಪ ಶರೀರ ಸೌಂದರ್ಯವನ್ನು ಹಾಳು ಮಾಡುತ್ತದಷ್ಟೇ ಅಲ್ಲ, ಆರೋಗ್ಯವನ್ನೂ ಕೂಡಾ. ಹಾಗಾಗಿ ತೆಳ್ಳಗಾಗಲು ಮೊದಲು ಸಿದ್ಧರಾಗಿ.
ತೆಳ್ಳಗಾಗೋದು ಎಂದರೆ ಏನನ್ನೂ ತಿನ್ನದೆ ಉಪವಾಸ ಮಾಡುವುದಂತೂ ಖಂಡಿತ ಅಲ್ಲ. ದೇಹಕ್ಕೆ ಹಿತಮಿತವಾಗಿ ಕೊಬ್ಬೂ ಸೇರಿದಂತೆ ವಿಟಮಿನ್, ಕಾರ್ಬೋಹೈಡ್ರೇಟ್ ಎಲ್ಲವೂ ಬೇಕು. ಆದರೆ ಒಂದು ಮಿತಿಯನ್ನು ಇವು ದಾಟಿದರೆ ಬೊಜ್ಜು ಬರಲು ಶುರುವಾಗುತ್ತದೆ. ಆರೋಗ್ಯ, ಸೌಂದರ್ಯ, ನೆಮ್ಮದಿ ಎಲ್ಲವೂ ಹಾಳು. ದುಡ್ಡೂ ದಂಡ.ಹಾಗಾದರೆ ತೆಳ್ಳಗಾಗಬೇಕೆಂದರೆ ಏನು ಮಾಡಬೇಕು? ಈ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇದೆ. ಆಯುರ್ವೇದದಲ್ಲಿ ತೆಳ್ಳಗಾಗಲು ಸಾಕಷ್ಟು ಸಿದ್ಧ ಸೂತ್ರಗಳಿವೆ. ಚರಕ ಸಂಹಿತ, ದೇಹದಲ್ಲಿ ಬೊಜ್ಜು ಇದ್ದರೆ ಅದೊಂದು ರೋಗ ಎಂದೇ ವಿವರಿಸಿದೆ. ಜತೆಜತೆಗೇ ಬೊಜ್ಜು ಕರಗಿಸಲು ತಕ್ಕನಾದ ಸೂತ್ರಗಳನ್ನೂ ಹೇಳಿದೆ. ಹೆಚ್ಚಿನ ಬೊಜ್ಜಿನಿಂದ ಹೃದಯ, ಕಿಡ್ನಿ, ಲಿವರ್ ಮತ್ತಿತರ ಭಾಗಗಳಿಗೆ ಒತ್ತಡ ನೀಡುವುದಷ್ಟೇ ಅಲ್ಲ. ಸೊಂಟ, ಮೊಣಕಾಲು, ಕಾಲಿನ ಬುಡದ ಗಂಟಗಳಿಗೂ ಒತ್ತಡ ಹೆಚ್ಚಾಗುತ್ತದೆ. ಪರಿಣಾಮ ಹಲವು ರೋಗಗಳೂ ಆವರಿಸುತ್ತದೆ. ಅಧಿಕ ರಕ್ತದೊತ್ತಡ, ಕೀಲುನೋವು, ಹೃದಯದ ತೊಂದರೆ ಹೀಗೆ ಹತ್ತು ಹಲವು ರೋಗಗಳಿಗೂ ಮೂಲ ಕಾರಣ ಬೊಜ್ಜೇ ಆಗಿರುತ್ತದೆ.
ಹಾಗಾದರೆ ಈ ಬೊಜ್ಜು ಎಲ್ಲಿಂದ ಬಂತು ಎಂದು ಪ್ರಶ್ನೆ ಹಾಕಿದರೆ ಉತ್ತರ ಇಲ್ಲೇ ಇದೆ. ಹೆಚ್ಚು ತಿನ್ನುವುದು, ಸರಿಯಾದ ಸಮಯಕ್ಕೆ ತಿನ್ನದಿರುವುದು, ಜಂಕ್ ಫುಡ್‌ಗಳಿಗೇ ಮೊರೆಹೋಗುವುದು ಇವೆಲ್ಲ ಬೊಜ್ಜು ಬರಲು ಕಾರಣ. ಆದರೆ, ಬೊಜ್ಜು ಇಳಿಸಲು ತಲೆಕೆಡಿಸಿಕೊಂಡು ಮಾನಸಿಕ ಆರೋಗ್ಯವನ್ನೂ ಹಾಳು ಮಾಡಬೇಕಿಲ್ಲ. ಜಾಹಿರಾತುಗಳಲ್ಲಿ ಕಾಣಿಸುವ ಮಾತ್ರೆಗಳನ್ನೋ, ಬೆಲ್ಟ್‌ಗಳನ್ನೋ ಕೊಂಡುಕೊಳ್ಳಬೇಕಿಲ್ಲ. ತುಂಬ ಸುರಕ್ಷಿತವಾದ, ಯಾವುದೇ ಅಪಾಯವಿಲ್ಲದ ಮನೆಮದ್ದಿನಲ್ಲೇ ನಾವು ನಮ್ಮ ತೂಕ ಇಳಿಸಿಕೊಳ್ಳಬಹುದು.

1. ಬೆಳಿಗ್ಗೆ ಎದ್ದ ತಕ್ಷಣ ಅರ್ಧ ನಿಂಬೆಯನ್ನು ಒಂದು ಲೋಟ ಬಿಸಿ ನೀರಿಗೆ ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಬೆಳಗ್ಗಿನ ತಿಂಡಿ ಸಮಯದಲ್ಲಿ ಕಾಫಿ, ಟೀ ಕುಡಿಯುವ ಬದಲು ಹಾಲು ಕುಡಿಯಿರಿ. ಗೋಧಿಯ ತಿಂಡಿ ತಿಂದರೆ ಉತ್ತಮ. ಒಣ ಚಪಾತಿ ಒಳ್ಳೆಯದು.
3. ಮಧ್ಯಾಹ್ನದ ಊಟಕ್ಕೂ ಮೊದಲು ಹಸಿವಾದರೆ ಕಿತ್ತಳೆ, ಅನನಾಸು ಅಥವಾ ಕ್ಯಾರೆಟ್ಟಿನ ಜ್ಯೂಸ್ ಕುಡಿಯಿರಿ. ಸಕ್ಕರೆ ಹಾಕದಿದ್ದರೆ ಉತ್ತಮ. ಕೇವಲ ಹಣ್ಣಿನ ರಸ ತೆಗೆದು ಕುಡಿಯಿರಿ.
4. ಮಧ್ಯಾಹ್ನ ಊಟಕ್ಕೆ ಹಸಿ ತರಕಾರಿಗಳ ಸಲಾಡ್ ತಿನ್ನಿ. ಕ್ಯಾರೆಟ್, ಸೌತೆಕಾಯಿ, ಕ್ಯಾಬೇಜ್, ಟೋಮೇಟೋಗಳನ್ನು ಹಸಿಯಾಗಿ ಬಳಸಬಹುದು. ಅನ್ನ ಉಣ್ಣಬೇಡಿ. ಒಣ ಚಪಾತಿ ಒಳ್ಳೆಯದು. ಮಸಾಲೆ ಪದಾರ್ಥಗಳನ್ನು ಚಪಾತಿ ಜತೆಗೆ ತಿನ್ನಬೇಡಿ. ಸಲಾಡ್‌ಗಳೋ, ದಾಲ್‌ಗಳನ್ನೋ ಬಳಸಬಹುದು.
5. ಮಧ್ಯಾಹ್ನ ಊಟವಾದ ನಂತರ ಮಜ್ಜಿಗೆ ನೀರಿಗೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ. ಅದಕ್ಕೆ ಸ್ವಲ್ಪ ಶುಂಠಿಯನ್ನೂ ಸೇರಿಸಬಹುದು.
6. ನಡು ಮಧ್ಯಾಹ್ನ ಅಥವಾ ಸಂಜೆಯಾಗುತ್ತಾ ಬಂದಾಗ ಎಳೆನೀರು ಉತ್ತಮ. ಇಲ್ಲವಾದರೆ ಲೆಮೆನ್ ಟೀ ಕುಡಿಯಿರಿ. ಅಥವಾ ತಾಜಾ ತರಕಾರಿ ಸೂಪ್ ಕೂಡಾ ಕುಡಿಯಬಹುದು.
7. ರಾತ್ರಿ ಹೋಲ್ ವೀಟ್ ಬ್ರೆಡ್ ಅಥವಾ ಹೋಲ್ ಗ್ರೈನ್ ಬ್ರೆಡ್ ತಿನ್ನಿ. ಅಥವಾ ಚಪಾತಿಯೂ ತಿನ್ನಬಹುದು. ಜತೆಗೆ ಬಾಳೆಹಣ್ಣು ಹಾಗೂ ಆಪಲ್ ಹೊರತುಪಡಿಸಿ ಉಳಿದೆಲ್ಲಾ ಹಣ್ಣುಗಳನ್ನು ತಿನ್ನಬಹುದು. ಬಾಳೆಹಣ್ಣು ತೂಕ ನೀಡುತ್ತದೆ.

ಈ ಆಹಾರ ಪದ್ಧತಿಯನ್ನು ತಿಂಗಳುಗಳ ಕಾಲ ಮಾಡಿದರೆ ಖಂಡಿತಾ ತೂಕ ಇಳಿಯುತ್ತದೆ. ಆದರೆ, ಇಂಥ ಸಿದ್ಧ ಮಾದರಿಯ ಶಿಸ್ತಾದ ಆಹಾರಕ್ರಮ ಸಾಧ್ಯವಾಗದಿದ್ದರೆ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲೇ ಕೊಂಚ ಮಾರ್ಪಾಟು ಮಾಡಿಕೊಂಡರೂ ತೂಕ ಇಳಿಕೆ ಸಾಧ್ಯ. ಈ ಕ್ರಮವೂ ಅನುಸರಿಸಬಹುದು.

1. ತಿನ್ನುವುದನ್ನು ಸ್ವಲ್ಪ ಕಡಿಮೆ ಮಾಡಿ. ಬೇಕಾದಷ್ಟೇ ತಿನ್ನಿ. ಅಗತ್ಯಕ್ಕಿಂತ ಹೆಚ್ಚು ಬಾಯಿಗೆ ತುರುಕಬೇಡಿ. ಎಸೆಯಬೇಕಾಗುತ್ತದಲ್ಲ ಅಥವಾ ವೇಸ್ಟ್ ಆಗುತ್ತೆ ಅಂತ ಮುಗಿಸುವುದಕ್ಕೋಸ್ಕರ ಹೊಟ್ಟೆಗೆ ತಳ್ಳಬೇಡಿ. ಹೊಟ್ಟೆ ಡಸ್ಟ್ ಬಿನ್ ಖಂಡಿತಾ ಅಲ್ಲ.
2. ದಿನವೂ ಚುರುಕಿನಿಂದಿರಿ. ಊಟ ಮಾಡಿದ ತಕ್ಷಣ ಹಾಸಿಗೆಯಲ್ಲಿ ಗಡದ್ದಾಗಿ ಮಲಗಬೇಡಿ. ಸ್ವಲ್ಪ ಹೊತ್ತು ಏನಾದರೂ ಕೆಲಸ ಮಾಡುತ್ತಿರಿ. ಊಟ ಹಾಗೂ ನಿದ್ರೆಯ ಮಧ್ಯೆ ಒಂದೆರಡು ಗಂಟೆ ಸಮಯದ ಅಂತರವಿರಲಿ.
3. ಹಸಿ, ತಾಜಾ ಹಣ್ಣು ತರಕಾರಿಗಳನ್ನು ಚೆನ್ನಾಗಿ ತಿನ್ನಿ. ಹೆಚ್ಚು ಕ್ಯಾಲೊರಿಯಿರುವ ಆಹಾರವನ್ನು ಕಡಿಮೆ ಮಾಡಿ.
4. ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡಿ. ಉಪ್ಪು ದೇಹತೂಕವನ್ನು ಹೆಚ್ಚು ಮಾಡುತ್ತದೆ.
5. ಹಾಲಿನ ಉತ್ಪನ್ನಗಳಾದ ಚೀಸ್, ಬೆಣ್ಣೆ ತಿನ್ನಬೇಡಿ. ಮಾಂಸಾಹಾರವೂ ಬೇಡ. ಇವೆಲ್ಲವುಗಳಲ್ಲಿ ಹೆಚ್ಚು ಕೊಬ್ಬು ಇರುತ್ತದೆ.
6. ಪುದಿನ ಸೊಪ್ಪು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಊಟದೊಂದಿಗೆ ತಾಜಾ ಪುದಿನ ಸೊಪ್ಪಿನ ಚಟ್ನಿ ಮಾಡಿ. ಅಥವಾ ಪುದಿನ ಜ್ಯೂಸ್ ಕುಡಿಯಿರಿ.
7. ಮಸಾಲೆಗಳಾದ ಕಾಳುಮೆಣಸು, ಶುಂಠಿ, ಲವಂಗಗಳನ್ನು ಆಹಾರದಲ್ಲಿ ಬಳಸಬಹುದು. ಇವು ತೂಕ ಹೆಚ್ಚು ಮಾಡುವುದಿಲ್ಲ. ಕಡಿಮೆ ಮಾಡಲು ಸಹಕರಿಸುತ್ತವೆ.
8. ಕ್ಯಾರೆಟ್ ಜ್ಯೂಸ್ ಆಗಾಗ ಕುಡಿಯುತ್ತಿರುವುದರಿಂದ ತೂಕ ಕಡಿಮೆ ಮಾಡಬಹುದು.
9. ಅಕ್ಕಿ (ಅನ್ನ) ಹಾಗೂ ಆಲೂಗಡ್ಡೆಯನ್ನು ತುಂಬ ಕಡಿಮೆ ಮಾಡಿ. ಗೋಧಿ ತೂಕ ಇಳಿಸಲು ಒಳ್ಳೆಯದು.
10. ಹಾಗಲಕಾಯಿ, ಕಹಿ ನುಗ್ಗೇಕಾಯಿಯಂತಹ ಕಹಿ ರುಚಿಯ ತರಕಾರಿಗಳು ತೂಕ ಕಡಿಮೆ ಮಾಡುತ್ತವೆ.
11. ಜೇನುತುಪ್ಪ ಧಾರಾಳವಾಗಿ ಸೇವಿಸಬಹುದು. ಇದು ಕೊಬ್ಬನ್ನು ಕರಗಿಸಿ ತೂಕ ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
12. ಯಾವಾಗಲಾದರೊಮ್ಮೆ ಜೇನುತುಪ್ಪದ ಉಪವಾಸ ಮಾಡಿದರೆ ಉತ್ತಮ. ಒಂದು ಚಮಚ ಜೇನುತುಪ್ಪವನ್ನು ಒಂದು ಲೋಟ ಹದ ಬಿಸಿನೀರಿಗೆ ಸೇರಿಸಿ ಅದ್ಕಕೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ದಿನವಿಡೀ ಆಗಾಗ ಕುಡಿಯಬಹುದು.

13. ಹಸಿ ಅಥವಾ ಬೇಯಿಸಿದ ಕ್ಯಾಬೇಜನ್ನು ತಿನ್ನುವುದರಿಂದಲೂ ತೂಕ ಕಡಿಮೆಮಾಡಬಹುದು.
14. ವ್ಯಾಯಾಮ ಕೂಡ ತೂಕ ಕರಗಿಸುವುದರಲ್ಲಿ ಮುಖ್ಯಪಾತ್ರ ವಹಿಸುತ್ತದೆ. ವಾಕಿಂಗ್ ಕೂಡಾ ತುಂಬ ಉತ್ತಮ. ವ್ಯಾಯಾಮ ಮಾಡಲು ಸಾಧ್ಯವಾಗದವರು ವಾಕಿಂಗ್‌ನಿಂದ ಶುರುಮಾಡಿ ನಿಧಾನವಾಗಿ ಓಡಲು ಅಭ್ಯಾಸ ಮಾಡಬಹುದು. ನಿಗದಿತ ವ್ಯಾಯಾಮದ ಜತೆಗೆ ವಾಕಿಂಗ್ ಕೂಡಾ ಉತ್ತಮ.
15. ಆಹಾರದ ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಂಡು ಬಹುತೇಕರು ತೂಕ ಇಳಿಸಿದ ನಂತರ ಮತ್ತೆ ಹಳೆಯ ಆಹಾರಪದ್ಧತಿಗೇ ಮರಳುತ್ತಾರೆ. ಇದರಿಂದ ಮತ್ತೆ ಶರೀರ ದಪ್ಪವಾಗುತ್ತದೆ. ಇದಕ್ಕಾಗಿ ನಿಗದಿತ ಯೋಗಾಭ್ಯಾಸ ರೂಢಿಯಲ್ಲಿಟ್ಟರೆ, ಜೀವನವಿಡೀ ಆರೋಗ್ಯಯುತ ಕಾಂತಿಯುತ ಶಿಸ್ತಿನ ಜೀವನ ನಿಮ್ಮದಾಗುತ್ತದೆ. ಅಷ್ಟೇ ಅಲ್ಲ ತೆಳು ಮೈಕಟ್ಟು ಕೂಡಾ.

ಸೌಂದರ್ಯ ಚಿಕಿತ್ಸೆ ನಿಮ್ಮ ಪ್ರಾಣಕ್ಕೆ ಮುಳುವಾಗದಿರಲಿ!

ಇದಕ್ಕಿಂತಲೂ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಸೌಂದರ್ಯ ಚಿಕಿತ್ಸೆಯೆಂದರೆ ಬಟೋಕ್ಸ್ ಟ್ರೀಟ್‌ಮೆಂಟ್. ಸದಾ ಯೌವನಭರಿತರಾಗಿ ಕಾಣಲು ಅಪೇಕ್ಷೆಯಿರುವ ನಾರೀಮಣಿಯರು ಇಂತಹ ಚಿಕಿತ್ಸೆಯ ಮೊರೆಹೋಗುತ್ತಾರೆ. ಸುಕ್ಕುಗಟ್ಟಿರುವ ಚರ್ಮವನ್ನು ಯೌವನಭರಿತವಾಗಿ ಕಾಣಿಸಲು ಚರ್ಮದ ಆ ಭಾಗಕ್ಕೆ ಬಟೋಕ್ಸ್ ಇಂಜೆಕ್ಷನ್ ತೆಗೆದುಕೊಳ್ಳುವ ಮೂಲಕ ಸರಿಪಡಿಸುವ ಚಿಕಿತ್ಸೆಯಿದು. 1997ರಿಂದ ಈವರೆಗೆ ವಿಶ್ವದಾದ್ಯಂತ ಈ ಚಿಕಿತ್ಸೆ 2,400 ಶೇಕಡಾಗಳಷ್ಟು ಹೆಚ್ಚಿದೆಯೆಂದರೆ ಈ ಚಿಕಿತ್ಸೆಯ ಬೇಡಿಕೆಯನ್ನು ಊಹಿಸಿಕೊಳ್ಳಬಹುದು. ಟಿವಿ ವಾಹಿನಿಗಳಲ್ಲಿ ಸದಾ ಕ್ಯಾಮರಾ ಮುಂದೆ ನಿಲ್ಲುವ ನಿರೂಪಕಿಯರು, ಸೆಲೆಬ್ರಿಟಿಗಳು, ಫ್ಯಾಷನ್ ಲೋಕದ ಬೆಡಗಿಯರು, ನಟೀಮಣಿಯರು ಸೇರಿದಂತೆ ಈಗ ಸಾಮಾನ್ಯ ಮನುಷ್ಯವರೆಗೂ ತಲುಪಿರುವ ಚಿಕಿತ್ಸೆಯಿದು. ಇಂಟರ್‌ನ್ಯಾಷನಲ್ ಕಾನ್ಫೆಡರೇಶನ್ ಫಾರ್ ಪ್ಲಾಸ್ಟಿಕ್ ರಿಕನ್‌ಸ್ಟ್ರಕ್ಷನ್ ಅಂಡ್ ಏಸ್ತೆಟಿಕ್ ಸರ್ಜರಿಯ ಅಧ್ಯಕ್ಷ ರಾಜೀವ್ ಬಿ.ಅಹುಜಾ ಹೇಳುವಂತೆ, ಜಾಹಿರಾತುಗಳು ಪ್ರದರ್ಶಿಸುವ ಚಿತ್ರಗಳಿಂದ ಬಹುಬೇಗನೆ ಜನರ ಇಂತಹ ಸೌಂದರ್ಯ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವತ್ತ ಜನರು ವಾಲುತ್ತಾರೆ. ಸೌಂದರ್ಯ ಇಮ್ಮಡಿಗೊಳಿಸುವ ಬಲವಾದ ಆಸೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮನಸ್ಥಿತಿಯನ್ನೂ ತಲುಪುತ್ತಾರೆ. ಹಾಗಾಗಿ ಇಂತಹ ಒತ್ತಡ ಮನಸ್ಥಿತಿ ತಲುಪುವ ಸೌಂದರ್ಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರಿಗೆ ನಿಜವಾಗಿ ಮಾನಸಿಕ ವೈದ್ಯರ ಅಗತ್ಯವಿದೆ ಎಂದು ನನಗಿಸುತ್ತದೆ ಎನ್ನುತ್ತಾರೆ ಅಹುಜಾ.ಚೆಂದದ ಬಳುಕುವ ಸೊಂಟ, ಬೇಕಾದ ಆಕಾರದ ಮೂಗು, ಸುಂದರ ಪುಟಾಣಿ ಗಲ್ಲ, ಯೌವನಭರಿತವಾಗಿ ಕಾಣುವ ಚರ್ಮ, ಸೆಕ್ಸೀ ಫಿಗರ್... ಹೀಗೆ ನಾನಾ ಸೌಂದರ್ಯ ಚಿಕಿತ್ಸೆ ಮಾಡಿಸುತ್ತೇವೆಂಬ ಹಲವು ಜಾಹಿರಾತುಗಳೀಗ ಸರ್ವೇ ಸಾಮಾನ್ಯ. ಭಾರತದಲ್ಲಿ ಇಂತಹ ಸೌಂದರ್ಯ ಶಸ್ತ್ರಚಿಕಿತ್ಸೆಗಳ ಸಂಖ್ಯೆಯೂ, ಜಾಹಿರಾತುಗಳ ಮೋಡಿಗೊಳಗಾಗಿ ಮಾಡಿಸಿಕೊಳ್ಳುವವರ ಸಂಖ್ಯೆಯೂ ದಿನೇ ದಿನೇ ಜಾಸ್ತಿಯಾಗುತ್ತಲೇ ಇವೆ. ಆದರೆ, ಸೌಂದರ್ಯ ಶಸ್ತ್ರಚಿಕಿತ್ಸೆಗಳನ್ನಾಗಲೀ, ಕೃತಕ ಸೌಂದರ್ಯ ಚಿಕಿತ್ಸೆಯನ್ನಾಗಲೀ ಮಾಡಿಸುವ ಮೊದಲು ಒಂದು ಕ್ಷಣ ಯೋಚಿಸುವುದು ಒಳಿತು.
ಇತ್ತೀಚೆಗೆ ಕೆಲ ದಿನಗಳ ಹಿಂದಷ್ಟೇ, ಅರ್ಜೆಂಟೈನಾದ ಮಾಜಿ ಸುಂದರಿ ಗುಡಾಲುಪೆ ಮ್ಯಾಗ್‌ನ್ಯಾನೋ ತನ್ನ ಸುಂದರ ಸೆಕ್ಸೀ ಹಿಂಭಾಗಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾದವಳು ಮತ್ತೆ ಮರಳಿ ಜೀವ ಪಡೆಯಲಿಲ್ಲ. ತನ್ನ ಸೌಂದರ್ಯ ಇಮ್ಮಡಿಗೊಳಿಸಿ ಪ್ರಪಂಚಕ್ಕೇ ತನ್ನ ಸುಂದರ ಹಿಂಭಾಗ ಪ್ರದರ್ಶಿಸುವ ಯೋಚನೆಯಿಂದ ಶಸ್ತ್ರಚಿಕಿತ್ಸೆಗೆ ಹೊರಟ ಈ ಸುಂದರಿ ಇಹಲೋಕ ತ್ಯಜಿಸಿದಳು. ಇದು ಕೇವಲ ಒಬ್ಬರ ಕಥೆಯಲ್ಲ. ಇಂತಹ ಎಷ್ಟೋ ಪ್ರಕರಣಗಳು ನಡೆಯುತ್ತವೆ. ಸೌಂದರ್ಯಕ್ಕೇ ಪ್ರಾಣವನ್ನೇ ಒತ್ತೆಯಿಟ್ಟ ಪ್ರಕರಣಗಳು ಅದೆಷ್ಟೋ ಇವೆ. ಆದರೆ ಬೆಳಕಿಗೆ ಬರೋದು ಕಡಿಮೆಯಷ್ಟೆ.
ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಪ್ಲಾಸ್ಟಿಕ್ ಹಾಗೂ ಕಾಸ್ಮೆಟಿಕ್ ಸರ್ಜರಿ ವಿಭಾಗದ ಹಿರಿಯ ವೈದ್ಯ ರಾಕೇಶ್ ಖಜಾಂಚಿ ಹೇಳುವ ಪ್ರಕಾರ, ಕಳೆದೈದು ವರ್ಷಗಳಿಂದ ಕಾಸ್ಮೆಟಿಕ್ ಸರ್ಜರಿಗಳಾದ ರಿನೋಪ್ಲಾಸ್ಟಿ (ಸುಂದರ ಮೂಗಿಗಾಗಿ ಇರುವ ಶಸ್ತ್ರಚಿಕಿತ್ಸೆ), ಲಿಪೋಸಕ್ಷನ್ (ತುಟಿಗಳ ಶಸ್ತ್ರಚಿಕಿತ್ಸೆ), ಮೇಲ್ ಬ್ರೆಸ್ಟ್ ರಿಡಕ್ಷನ್ (ಪುರುಷರ ಎದೆ ಸರಿಪಡಿಸುವ ಶಸ್ತ್ರಚಿಕಿತ್ಸೆ), ಫೀಮೇಲ್ ಬ್ರೆಸ್ಟ್ ಎನ್‌ಹ್ಯಾನ್ಸ್‌ಮೆಂಟ್ (ಮಹಿಳೆಯರ ಎದೆಯುಬ್ಬಿಸುವ ಶಸ್ತ್ರಚಿಕಿತ್ಸೆ), ಅಬ್ಡಮಿನೋಪ್ಲಾಸ್ಟಿ (ಹೊಟ್ಟೆಯನ್ನು ತೆಳ್ಳಗಾಗಿಸಿ ಆಕಾರ ಸರಿಪಡಿಸುವ ಶಸ್ತ್ರಚಿಕಿತ್ಸೆ) ಮುಂತಾದ ಶಸ್ತ್ರಚಿಕಿತ್ಸೆಗಳು ಶೇ.150ರಷ್ಟು ಹೆಚ್ಚಾಗಿವೆ. ಸರ್ಜಿಕಲ್ ಸಾಧನಗಳನ್ನು ಬಳಸದೆ ಮಾಡುವಂಥ ಸೌಂದರ್ಯ ಚಿಕಿತ್ಸೆಗಳಾದ ಬಟೋಕ್ಸ್ ಟ್ರೀಟ್‌ಮೆಂಟ್‌ಗಳಂತೂ ತೀರಾ ಹೆಚ್ಚಿವೆ. ಇಂಥವುಗಳನ್ನು ಸಾಮಾನ್ಯರೂ ಮಾಡಿಸಿಕೊಳ್ಳುವುದು ತೀರಾ ಸಾಮಾನ್ಯವಾಗಿದೆ ಎನ್ನುತ್ತಾರೆ ಅವರು.
ಮೈಕ್ರೋಡರ್ಮಾಬ್ರೇಶನ್ ಕೂಡಾ ಸದ್ಯ ಅತ್ಯಂತ ಪ್ರಚಾರದಲ್ಲಿರುವ ಕಾಸ್ಮೆಟಿಕ್ ಚಿಕಿತ್ಸೆ. ಈ ಚಿಕಿತ್ಸೆ ಮೂಲಕ ಚರ್ಮದ ಸತ್ತ ಹೊರಪದರ ಹಾಗೂ ಒಣಗಿರುವಂಥ ಕಳಾಹೀನ ಪದರವನ್ನು ತೆಗೆದು ಹಾಕಿ ಒಳಚರ್ಮ ಕಾಣುವಂತೆ ಮಾಡಲಾಗುತ್ತದೆ. ಇದರಿಂದ ಇನ್ನೂ ಯೌವನಭರಿತರಾಗಿ ಕಾಣುವಂತಾಗುತ್ತದೆ. ಇದಲ್ಲದೆ, ಕೊಲಾಜೆನ್ ಇಂಜೆಕ್ಷನ್, ಲೇಜರ್ ಹೇರ್ ರಿಮೂವಲ್ (ಶಾಶ್ವತವಾಗಿ ಬೇಡದ ಕೂದಲುಗಳನ್ನು ತೆಗೆಯುವ ಚಿಕಿತ್ಸೆ), ಕೆಮಿಕಲ್ ಪೀಲ್ (ರಸಾಯನಿಕಗಳನ್ನು ಉಪಯೋಗಿಸಿ ಮುಖದ ಹಳೆ ಚರ್ಮ ತೆಗೆದು ಆ ಜಾಗದಲ್ಲಿ ಹೊಸ ಚರ್ಮ ಬೆಳೆಯುವಂತೆ ಮಾಡಿ ಯೌವನಭರಿತರಾಗಿಸುವ ಚಿಕಿತ್ಸೆ) ಮುಂತಾದ ಚಿಕಿತ್ಸೆಗಳಿಗೆ ಈಗ ಭಾರೀ ಬೇಡಿಕೆಯಿದೆ ಎನ್ನುತ್ತಾರೆ ಅವರು.
ಜಾಹಿರಾತುಗಳಲ್ಲಿ ಶೇ.100ರಷ್ಟು ಅಡ್ಡಪರಿಣಾಮಗಳಿಲ್ಲದ ಶಸ್ತ್ರಚಿಕಿತ್ಸೆ ಎಂದು ಬರೆಯುತ್ತಾರಾದರೂ, ಹಲವು ಪ್ರಕರಣಗಳಲ್ಲಿ ಅತಿ ರಕ್ತಸ್ರಾವ, ಭಯ ಹೊಂದುವಂತಹ ಮಾನಸಿಕ ದಗುಡ ಹೆಚ್ಚಾಗುವಿಕೆ, ನರ ದೌರ್ಬಲ್ಯ, ಹೊಸ ಚರ್ಮ ಬೆಳೆಯುವ ಮೊದಲೇ ಚರ್ಮ ಸತ್ತುಹೋಗುವುದು ಮುಂತಾಹ ರೋಗಗಳಿಗೂ ಕಾರಣವಾಗುತ್ತದೆ. ಹಲವು ಸಂದರ್ಭಗಳಲ್ಲಿ ಪಾರ್ಶ್ವವಾಯುವಿನಂಥ ಕಾಯಿಲೆಗಳೂ ಇಂಥ ಚಿಕಿತ್ಸೆಗಳಿಂದ ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಅವರು.
ಮಹಿಳೆಯರು ಇಂಥ ಸೌಂದರ್ಯ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವುದು ತೀರಾ ಸಾಮಾನ್ಯ. ಪುರುಷರೂ ಇಂಥ ಚಿಕಿತ್ಸೆಗಳತ್ತ ಇತ್ತೀಚೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದಾರೆ ಅನ್ನೋದು ಕೂಡಾ ಅಷ್ಟೇ ಸತ್ಯ. ಇವರೆಲ್ಲಾ, ಇಂಥ ಎಷ್ಟೋ ಸಂಗತಿಗಳು ಗೊತ್ತಿದ್ದೂ ಗೊತ್ತಿದ್ದೂ ಶಸ್ತ್ರಚಿಕಿತ್ಸೆಯಡಿ ತಮ್ಮನ್ನು ಒಡ್ಡಿಕೊಳ್ಳುವ ಪ್ರಜ್ಞಾವಂತ ಮಂದಿ! ಬಾಲಿವುಡ್ ಬೆಡಗಿಯರಾದ ಪ್ರಿಯಾಂಕಾ ಛೋಪ್ರಾ, ಕಂಗನಾ ರಾಣಾವತ್, ಕೊಯಿನಾ ಮಿತ್ರಾ ಮತ್ತಿತರರು ತಮ್ಮ ತುಟಿಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ಮಾಡಿಕೊಂಡರೆ, ಶಿಲ್ಪಾ ಶೆಟ್ಟಿ ಮೂಗು ಸರಿಪಡಿಸುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದಲ್ಲದೆ, ಶೆರ್ಲಿನ್ ಛೋಪ್ರಾರಂತಹ ಹಲವು ಬಿಚ್ಚಮ್ಮ ನಟಿಯರು ಸೆಕ್ಸೀಯಾಗಿ ಕಾಣಲು ಬ್ರೆಸ್ಟ್ ಎನ್‌ಹ್ಯಾನ್ಸ್‌ಮೆಂಟ್ ಕೂಡಾ ಮಾಡಿಸಿಕೊಂಡಿದ್ದು ಸುದ್ದಿಯಾಗಿವೆ.
ದುಬಾರಿಯಾಗಿರುವ ಇಂಥ ಚಿಕಿತ್ಸೆಗಳೀಗ ಸಾಕಷ್ಟು ಕೈಗೆಟಕುವ ಕಡಿಮೆ ಬೆಲೆಗೂ ಬರುತ್ತಿವೆ. ಅಡ್ಡಪರಿಣಾಮಗಳಿಲ್ಲದೆ ಎಷ್ಟೋ ಮಂದಿ ಇಂತಹ ಕೃತಕ ವಿಧಾನಗಳಿಂದ ಜಗತ್ತಿಗೇ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ ಎಂಬುದೂ ಕೂಡಾ ಅಷ್ಟೇ ಸತ್ಯ. ಆದರೂ, ಅದೇನೇ ಇರಲಿ, ಸೌಂದರ್ಯ ಪ್ರಾಕೃತಿಕವಾದುದು ಎಂಬುದಂತೂ ಸಾರ್ವಕಾಲಿಕ ಸತ್ಯ. ಅದನ್ನು ಹೆಚ್ಚಿಸಲು ಎಷ್ಟೇ ಕೃತಕ ಉಪಾಯಗಳನ್ನು ಮಾಡಿದರೂ ಅದು ನೈಸರ್ಗಿಕ ಸೌಂದರ್ಯವಾಗಲಾರದು. ಬಾಹ್ಯ ಸೌಂದರ್ಯಕ್ಕಿಂತಲೂ ಆಂತರಿಕ ಸೌಂದರ್ಯದತ್ತ ಹೆಚ್ಚು ಗಮನ ನೀಡಿದರೆ, ಬಾಹ್ಯ ಸೌಂದರ್ಯ ತನ್ನಿಂದ ತಾನೇ ಇಮ್ಮಡಿಗೊಳ್ಳುತ್ತದೆ. ನೈಸರ್ಗಿಕ ವಿಧಾನಗಳಿಂದಲೇ ಸೌಂದರ್ಯ ಹೆಚ್ಚಿಸಲು ಪ್ರಯತ್ನಿಸಲು ಅಂದಿನಿಂದಲೂ ತಲೆತಲಾಂತರಗಳಿಂದ ಹಿರಿಯರು ಬೋಧಿಸುತ್ತಲೇ ಬಂದುದು ಬಹುಶಃ ಇದಕ್ಕೇ ಇರಬೇಕು ಅಲ್ಲವೇ?