Tuesday, 19 April 2011

ಅಂದದ ಗುಲಾಬಿಯಂಥಾ ತುಟಿಗೆ ಇಲ್ಲಿವೆ ಉಪಾಯ!


ಅಂದದ ತುಟಿ ಯಾರು ತಾನೇ ಬಯಸಲ್ಲ ಹೇಳಿ. ಗುಲಾಬಿಯ ಪಕಳೆಯಂತೆ ಪಿಂಕ್ ಆಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಸಾಮಾನ್ಯ. ಚಳಿಗಾಲದಲ್ಲಂತೂ, ತುಟಿ ಒಣಗಿ, ಒಡೆದು ರಕ್ತ ಸೋರುತ್ತಿದ್ದರೆ, ಮುಖ ತೋರಿಸಲು ನಾಚಿಕೆಯಾಗುವ ಅನುಭವ ಎಲ್ಲರಿಗೂ ಇದೆ. ಆದರೆ ಇದಕ್ಕಾಗಿ ಏನೆಲ್ಲಾ ಕಸರತ್ತು ಮಾಡಿದರೂ ಕೆಲವೊಮ್ಮೆ ಸಾಕಾಗುವುದಿಲ್ಲ. ಹಾಗಾಗಿ ನೈಸರ್ಗಿಕವಾಗಿಯೂ ನಿಮ್ಮ ತುಟಿಯನ್ನು ತಾಜಾ ಆಗಿ ಗುಲಾಬಿ ದಳದಂತೆ ಸುಂದರವಾಗಿ ಕಾಣಲು ನೀವು ಮನೆಯಲ್ಲೇ ಕೆಲವು ಉಪಾಯಗಳನ್ನು ಮಾಡಬಹುದು. ಅವುಗಳ ಒಂದು ಝಲಕ್ ಇಲ್ಲಿದೆ.
ತುಟಿ ನಯವಾಗಿ ಕಾಣಬೇಕಿದ್ದರೆ, ನೀವು ಹಲ್ಲುಜ್ಜುವ ಬ್ರಷ್‌ನಿಂದ ಮೆದುವಾಗಿ ವೃತ್ತಾಕಾರವಾಗಿ ನಿಮ್ ತುಟಿಯ ಮೇಲೆ ಉಜ್ಜಿ. ಇದರಿಂದ ತುಟಿಯ ಮೇಲ್ಮೈಯಲ್ಲಿನ ಒಣಗಿದ ಸತ್ತ ಚರ್ಮ ಮಾಯವಾಗುತ್ತದೆ. ನಂತರ ತುಟಿಯನ್ನು ತೊಳೆದು ಮಾಯ್‌ಶ್ಚರೈಸರ್ ತುಟಿಗೆ ಹಚ್ಚಿ. ತುಟಿ ನಯವಾಗಿ ಹೊಳೆಯುತ್ತದೆ.
ಪ್ರತಿ ರಾತ್ರಿಯೂ ಮಲಗುವ ಮುನ್ನ ತುಟಿಗೆ ಮಾಯ್‌ಶ್ಚರೈಸರ್ ಹಚ್ಚಿ ಮಲಗಿ. ಮೃದುವಾದ ನುಣುಪಾದ ತುಟಿಗಳು ನಿಮ್ಮದಾಗುತ್ತದೆ.
ರೋಸ್ ವಾಟರ್ ಹಾಗೂ ಸಕ್ಕರೆ ಸೇರಿಸಿ ತುಟಿಗೆ ಪ್ರತಿದಿನವೂ ಮಸಾಜ್ ಮಾಡಿ. ಇದು ನಿಮ್ಮ ತುಟಿಯನ್ನು ಗುಲಾಬಿ ದಳದಷ್ಟೇ ಮೃದು, ನಯ ಹಾಗೂ ಹೊಳೆಯುವಂತೆ ಮಾಡುತ್ತದೆ.
ಹೆಚ್ಚು ಕಾಫಿ, ಟೀ ಕುಡಿಯುವುದರಿಂದ ಹಾಗೂ ಸಿಗರೇಟು ಸೇದುವುದರಿಂದ ತುಟಿಗಳು ಕಪ್ಪಾಗುತ್ತದೆ. ಹಾಗಾಗಿ ಯಾವತ್ತೂ ಧೂಮಪಾನ ಮಾಡಬೇಡಿ. ಧೂಮಪಾನ ನಿಮ್ಮ ತುಟಿಯನ್ನು ಕಪ್ಪಾಗಿಸುವ ಜೊತೆಗೆ, ಹೀಗಾಗಿ ತುಟಿ ಒಣಗಿದಂತೆ ಕಳಾಹೀನವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಇಂಥ ತುಟಿಯನ್ನು ಸೂರ್ಯದ ಕಿರಣಗಳು ಬಹುಬೇಗನೆ ಘಾಸಿ ಮಾಡುತ್ತದೆ. ಹೀಗಾಗಿ ಧೂಮಪಾನಿಗಳು ನೀವಾಗಿದ್ದರೆ ಹೊರಗೆ ಸಂಚರಿಸುವಾಗ ನಿಮ್ಮ ತುಟಿಗೆ ಸನ್‌ಸ್ಕ್ರೀನ್ ಲೋಶನ್ ಹಚ್ಚಿ.
ಅಂದದ ತುಟಿಗೆ ನೈಸರ್ಗಿಕ ಉಪಾಯ: ನೈಸರ್ಗಿಕವಾಗಿ ನಿಮ್ಮ ತುಟಿಯನ್ನು ತಾಜಾ, ಪಿಂಕ್ ಹಾಗೂ ಆರೋಗ್ಯಕರವಾಗಿ ಕಾಣಿಸಲು ನಿಮ್ಮ ಅಡುಗೆ ಮನೆಯಲ್ಲೇ ಹಲವು ಉಪಾಯಗಳಿವೆ. ಅದಕ್ಕಾಗಿ ನೀವು ಮೊದಲು ತುಂಬ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ತುಟಿಯನ್ನು ಒಡೆಯಲು, ರಕ್ತ ಸೋರಲು ಅಥವಾ ಒಣಗಲು ಬಿಡಬೇಡಿ. ಮಾಯ್‌ಶ್ಚರೈಸರ್ ಸದಾ ಬಳಸುತ್ತಿದ್ದರೆ ತುಟಿ ಹೀಗಾಗುವುದನ್ನು ತಪ್ಪಿಸಬಹುದು.
ಹೆಚ್ಚು ಹೆಚ್ಚು ಹಸಿರು ತರಕಾರಿ, ಹಣ್ಣು ಹಂಪಲು ತಿನ್ನಿ. ಸಲಾಡ್, ಹಣ್ಣುಗಳ ಜ್ಯೂಸ್ ಸೇವಿಸುತ್ತಾ ಇರಿ. ಇದು ನಿಮ್ಮ ತುಟಿಯನ್ನು ತಾಜಾ ಆಗಿರಿಸುತ್ತದೆ. ಅಲ್ಲದೆ, ನಯವಾಗಿ ಹೊಳೆಯುವ ಆರೋಗ್ಯಭರಿತ ತುಟಿ ಕಂಗೊಳಿಸುವಂತೆಯೂ ಮಾಡುತ್ತದೆ.
ಹೆಚ್ಚು ಕ್ಯಾರೆಟ್ ಹಾಗೂ ಹಸಿ ಸೌತೆಕಾಯಿ ತಿನ್ನಿ. ಇದು ನಿಮ್ಮ ತುಟಿಗಳನ್ನು ಯಾವಾಗಲೂ ತಾಜಾತನದಿಂದ ಹೊಳೆಯವಂತೆ ಮಾಡುತ್ತದೆ.
ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಗಳು ಪಿಂಕ್ ಆಗಿ ಉಳಿಯುತ್ತದೆ. ನಿಂಬೆಹಣ್ಣಿನ ರಸದಿಂದ ತುಟಿಗಳನ್ನು ಮಸಾಜ್ ಮಾಡುತ್ತಿದ್ದರೆ, ತುಟಿಗಳು ಕಪ್ಪಾಗುವುದನ್ನು ತಡೆಯಬಹುದು.ನೈಸರ್ಗಿಕವಾಗಿ ಪಿಂಕ್ ಆಗಿರುವ ತುಟಿಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಬೀಟ್‌ರೂಟ್‌ನ್ನು ಲೇಪಿಸಿ ಮಲಗಿ.
ಲಿಪ್‌ಸ್ಟಿಕ್ ಟಿಪ್ಸ್: ಲಿಪ್‌ಸ್ಟಿಕ್ ದಿನವೂ ಬಳಸುವುದು ಒಳ್ಳೆಯದಲ್ಲ. ದಿನವೂ ಬಳಸಿದರೆ, ತುಟಿ ತನ್ನ ಎಂದಿನ ಕಳೆಯನ್ನು ಕಳೆದುಕೊಳ್ಳುತ್ತದೆ. ಆದರೂ ಹಲವರಿಗೆ ದಿನವೂ ಬಳಸುವುದು ಅನಿವಾರ್ಯವಾಗಿರುತ್ತದೆ. ಅದಕ್ಕಾಗಿ, ಪ್ರತಿಬಾರಿಯೂ ನೀವು ನೇರವಾಗಿ ತುಟಿಯ ಮೇಲೆ ಲಿಪ್‌ಸ್ಟಿಕ್ ಹಚ್ಚಬೇಡಿ. ಇದು ನಿಮ್ಮ ತುಟಿಯ ಚರ್ಮವನ್ನು ಹಾಳು ಮಾಡುತ್ತದೆ. ಹಾಗಾಗಿ ಮೊದಲು ತುಟಿಯ ಮೇಲೆ ಲಿಪ್ ಬಾಮ್ ಅನ್ನು ಹಚ್ಚಿ, ನಂತರ ಅದರ ಮೇಲೆ ಲಿಪ್‌ಸ್ಟಿಕ್ ಹಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಲಿಪ್‌ಸ್ಟಿಕ್ ದಿನವಿಡೀ ಫ್ರೆಶ್ ಆಗಿ ಕಾಣಿಸುತ್ತದೆ. ಜೊತೆಗೆ ತುಟಿಗೆ ನೇರ ಹಾನಿಯೂಗುವುದೂ ತಪ್ಪುತ್ತದೆ.
ಇನ್ನೂ ಕೆಲವರು ಲಿಪ್‌ಸ್ಟಿಕ್ ಬಳಸಿದರೂ ಬಳಸಲು ಸರಿಯಾದ ಕ್ರಮ ತಿಳಿದಿರುವುದಿಲ್ಲ. ಹಾಗಾಗಿ, ಅಂಥವರು ಮೊದಲು ಲಿಪ್ ಬಾಮ್ ಬಳಸಿ ಅದರ ಮೇಲೆ ಮೃದುವಾಗಿ ತೆಳುವಾಗಿ ಲಿಪ್‌ಸ್ಟಿ ಹಚ್ಚಿ. ನಂತರ ಲಿಪ್ ಲೈನರ್ ತೆಗೆದುಕೊಂಡು ತುಟಿಯ ಔಟ್‌ಲೈನ್‌ಗೆ ಪೂರ್ತಿಯಾಗಿ ಗೆರೆ ಎಳೆಯಿರಿ. ಈಗ ನಿಮ್ಮ ತುಟಿ ಸಂಪೂರ್ಣವಾಗಿ ಕಾಣುತ್ತದೆ. ಈ ಕ್ರಮ ಅನುಸರಿಸುವ ಮೊದಲು ಇನ್ನೊಂದು ಕ್ರಮವನ್ನೂ ಅನುಸರಿಸಬಹುದು. ಅದು, ಲಿಪ್ ಬಾಮ್ ಹಚ್ಚಿದ ಮೇಲೆ ಲಿಪ್ ಲೈನರ್‌ನಿಂದ ನಿಮ್ಮ ತುಟಿಯ ಔಟ್‌ಲೈನ್‌ಗೆ ಸರಿಯಾಗಿ ಗೆರೆ ಎಳೆದು ಆಮೇಲೆ ಲಿಪ್‌ಸ್ಟಿಕ್ ಹಚ್ಚಿ. ಈ ಕ್ರಮದಿಂದ ನಿಮ್ಮ ಲಿಪ್‌ಸ್ಟಿಕ್ ಹೆಚ್ಚು ಕಾಲ ಉಳಿಯುತ್ತದೆ,
ಕೆಲವರಿಗೆ ಕಡು (ಡಾರ್ಕ್) ಬಣ್ಣಗಳ ಲಿಪ್‌ಸ್ಟಿಕ್ ಇಷ್ಟವಿರುದಿಲ್ಲ ಹಾಗೂ ಲಿಪ್‌ಸ್ಟಿಕ್ ಹೆಚ್ಚು ಢಾಳಾಗಿ ಕಾಣಿಸಲು ಇಷ್ಟಪಡುವುದಿಲ್ಲ. ಅಂಥವರು ಮೊದಲು ಲಿಪ್‌ಲೈನರ್ ಬಳಸಿ ನಂತರ ಲಿಪ್‌ಸ್ಟಿಕ್ ಹಚ್ಚುವುದು ಒಳ್ಳೆಯದು. ಇದು ತುಟಿಯಲ್ಲಿ ಅಷ್ಟಾಗಿ ಎದ್ದು ಕಾಣುವುದಿಲ್ಲ.
ಲಿಪ್ ಸ್ಟಿಕ್ ಹಚ್ಚಿದ ಮೇಲೆ ಟಿಶ್ಯೂ ಪೇಪರನ್ನು ಮೆದುವಾಗಿ ತುಟಿಯಿಂದ ಪ್ರೆಸ್ ಮಾಡಿ. ಆಗ ಹೆಚ್ಚುವರಿ ಲಿಪ್‌ಸ್ಟಿಕ್ ಪೇಪರಿಗೆ ಅಂಟಿಕೊಳ್ಳುತ್ತದೆ.
ಇನ್ನು ಲಿಪ್ ಸ್ಟಿಕ್ ಆಯ್ಕೆಯ ಗೊಂದಲ ಹಲವರಲ್ಲಿರುತ್ತದೆ. ಹಾಗಾಗಿ ತಮಗೆ ಹೊಂದದ ಲಿಪ್‌ಸ್ಟಿಕ್ ಕೊಂಡು ಆಮೇಲೆ ಪೇಚಾಟ ಅನುಭವಿಸುವವರು ಹೆಚ್ಚು. ತೆಳು ಪಿಂಕ್ ಬಣ್ಣದ ಮುಖ ನಿಮ್ಮದಾಗಿದ್ದರೆ ಅಂಥವರು ಚೆರ್ರಿ ರೆಡ್ ಬಣ್ಣದ ಲಿಪ್‌ಸ್ಟಿಕ್ ಆರಿಸಬಹುದು. ಬೆಳ್ಳಗಿನ ಮೈಬಣ್ಣ ನಿಮ್ಮದಾಗಿದ್ದರೆ, ನೀವು ತೆಳು ಪಿಂಕ್, ತೆಳು ಹವಳದ ಬಣ್ಣ ಅಥವಾ ಆಪ್ರಿಕಾಟ್ ಬಣ್ಣದ ಲಿಪ್‌ಸ್ಟಿಕ್ ಆರಿಸಿ. ಗೋಧಿ ಬಣ್ಣದವರು ನೀವಾಗಿದ್ದರೆ ಸ್ವಲ್ಪ ಡಾರ್ಕ್ ಕಲರ್‌ಗಳ ಮೊರೆ ಹೋಗಬೇಕು. ನಿಮಗೆ, ಎಂಜಿನ್ ರೆಡ್ ಬಣ್ಣದ ಲಿಪ್‌ಸ್ಟಿಕ್ ಅಥವಾ, ರೋಸ್ ರೆಡ್, ಬೆರ್ರಿ ಕಲರ್‌ಗಳನ್ನು ಆರಿಸಬಹುದು. ಕಪ್ಪು ಬಣ್ಣದ ಚರ್ಮ ನಿಮ್ಮದಾಗಿದ್ದರೆ ಅಂಥವರು ಡೀಪ್ ರೆಡ್ ಬಣ್ಣದ ಅಥವಾ ಚಾಕೋಲೇಟ್ ಬಣ್ಣ, ಕಂದು ಕೆಂಪು ಬಣ್ಣವಿರುವ ಲಿಪ್ ಸ್ಟಿಕ್ ಆರಿಸಿ. ಕಪ್ಪು ಮೈಬಣ್ಣ ನಿಮ್ಮದಾಗಿದ್ದರೆ, ನೀವು ನಿಮ್ಮ ಅಂಗಿಯ ಬಣ್ಣಕ್ಕೆ ಲಿಪ್‌ಸ್ಟಿಕ್ ಮ್ಯಾಚ್ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ.

ನಿಮ್ಮ ಮುಖದ ಸಮಸ್ಯೆಗೆ ನಿಮ್ಮಲ್ಲೇ ಇದೆ ಸೂಕ್ತ ಪರಿಹಾರ!


ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳೋದು ರಗಳೆ ಕೆಲಸ, ಒಂದೋ ಅಲ್ಲಿ ಗಂಟೆ ಗಟ್ಟಲೆ ಕಾಯಬೇಕು ಇಲ್ಲವೇ, ಅವರ ಸಮಯಕ್ಕೆ ಸರಿಯಾಗಿ ನಾವು ಹೋಗಬೇಕು ಎಂದೆಲ್ಲ ನಿಮಗೆ ಅನಿಸುತ್ತಿದ್ದರೆ, ಯಾಕೆ ಬೇಸರ ಮಾಡಿಕೊಳ್ಳುತ್ತೀರಿ ಹೇಳಿ? ಅಡುಗೆ ಮನೆಯಲ್ಲೇ ಹಲವಾರು ನೈಸರ್ಗಿಕ ಕೊಡುಗೆಗಳು ನಿಮಗಾಗಿ ಕಾದಿವೆ. ಸ್ವಲ್ಪವೇ ಸ್ವಲ್ಪ ಬಿಡುವು ಮಾಡಿಕೊಂಡು, ನಿಮ್ಮ ಚರ್ಮ ಯಾವ ಮಾದರಿಯದ್ದು ಎಂದು ತಿಳಿದುಕೊಂಡು ಚರ್ಮಕ್ಕೆ ಹೊಂದುವಂಥ ಆಯ್ಕೆಯನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು.
ಸಾಮಾನ್ಯ ತ್ವಚೆಗೆ
1.
ಕಿತ್ತಳೆ ಹಾಗೂ ಟೊಮ್ಯಾಟೋ ಹಣ್ಣಿನ ಸ್ವಲ್ಪ ರಸ ತೆಗೆದು ಅದಕ್ಕೆ ಒಂದು ಚಮಚದಷ್ಟು ಮೊಸರು ಸೇರಿಸಿ. ಈ ಮಿಶ್ರಣದಿಂದ ಮೆತ್ತಗೆ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಹೊತ್ತು ಮುಖದಲ್ಲೇ ಒಣಗಲು ಬಿಡಿ. ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
2.
ಪಪ್ಪಾಯಿ ಹಣ್ಣನ್ನು ಕಿವುಚಿ ಮುಖಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದು ಮುಖಕ್ಕೆ ಹೊಸ ಹೊಳಪನ್ನು ನೀಡುತ್ತದೆ.
3.
ಕ್ಯಾಬೇಜನ್ನು ಅರೆದು ಅದರ ರಸವನ್ನು ಮುಖಕ್ಕೆ ಹಚ್ಚಿ. ಇದು ಸಡಿಲವಾದ ಚರ್ಮವನ್ನು ಟೈಟ್ ಮಾಡುವುದಲ್ಲದೆ, ಸುಕ್ಕುಗಳಿಂದಲೂ ಮುಕ್ತಿ ನೀಡುತ್ತದೆ.
4.
ಸ್ವಲ್ಪ ಕ್ಯಾರೇಟನ್ನು ತುರಿದು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದು ಮತ್ತೆ ಚರ್ಮಕ್ಕೆ ತಾಜಾತನವನ್ನು ನೀಡಿ ಸುಂದರವಾಗಿಸುತ್ತದೆ. ಇದು ಚರ್ಮಕ್ಕೆ ಟಾನಿಕ್ ಇದ್ದಂತೆ.
5.
ಪ್ರತಿ ಬಾರಿಯೂ ಆಪಲ್ ತಿನ್ನುವಾಗ ಅದರ ಸಿಪ್ಪೆಯನ್ನು ಬಿಸಾಡಬೇಡಿ. ಸಿಪ್ಪೆಯ ಒಳಭಾಗವನ್ನು ಮುಖಕ್ಕೆ ಉಜ್ಜಿ. ಇದು ಚರ್ಮವನ್ನು ಟೈಟ್ ಮಾಡುವುದಲ್ಲದೆ, ಪರಿಶುದ್ಧಗೊಳಿಸುತ್ತದೆ.
6.
ಪ್ರತಿದಿನವೂ ಮುಖ ತೊಳೆದ ನಂತರ ಐಸ್ ತುಂಡನ್ನು ಮುಖಕ್ಕೆ ವರ್ತುಲಾಕಾರದಲ್ಲಿ ಒತ್ತಿ ಉಜ್ಜಿ. ಇದು ಮುಖದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುವ ಮೂಲಕ ಮುಖಕ್ಕೆ ತಾಜಾ ರಕ್ತದ ಪೂರಣವಾಗುತ್ತದೆ. ಹಾಗಾಗಿ ಮುಖದ ಹೊಳಪು ಹೆಚ್ಚುತ್ತದೆ.
7.
ಸ್ವಲ್ಪ ನಿಂಬೆ ಹುಲ್ಲನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಆ ನೀರನ್ನು ಒಂದು ಟ್ರೇನಲ್ಲಿ ಹಾಕಿ ಫ್ರೀಜರ್‌ನಲ್ಲಿಟ್ಟು ಗಟ್ಟಿ ಮಾಡಿ. ಹೀಗೆ ಗಟ್ಟಿಯಾದ ಐಸ್ ತುಂಡನ್ನೂ ಮುಖಕ್ಕೆ ಉಜ್ಜಬಹುದು.
8.
ಮೊಟ್ಟೆಯ ಬಿಳಿ ಲೋಳೆಯನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದ ಚರ್ಮವನ್ನು ಟೈಟ್ ಮಾಡುತ್ತದೆ. ಅಲ್ಲದೆ ಸುಕ್ಕನ್ನೂ ತಡೆಗಟ್ಟುತ್ತದೆ.
ತೈಲಯುತ ತ್ವಚೆಗೆ
1.
ಗೋಧಿ ಹುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದಲ್ಲಿರುವ ಹೆಚ್ಚಿನ ಎಣ್ಣೆಯಂಶವನ್ನು ತೆಗೆದುಹಾಕಿ ಚರ್ಮವನ್ನು ಫ್ರೆಶ್ ಆಗಿಸುತ್ತದೆ.
2.
ಕುದಿಸದ ಹಸಿ ಹಾಲಿಗೆ ಅಷ್ಟೇ ಪ್ರಮಾಣದ ಸೌತೆಕಾಯಿ ರಸ ಸೇರಿಸಿ. ಇದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ. ಒಂದು ಹತ್ತಿಯ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಮುಖಕ್ಕೆ ಚೆನ್ನಾಗಿ ಹಚ್ಚಿ. ಒಣಗಲು ಬಿಟ್ಟು ಆಮೇಲೆ ತಣ್ಣೀರಿನಲ್ಲಿ ತೊಳೆಯಿರಿ.
3.
ಎರಡು ಚಮಚ ಮೆಂತೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಮೆಂತೆಯನ್ನು ಅರೆದು ಪೇಸ್ಟ್ ಮಾಡಿ. ಚೆನ್ನಾಗಿ ಈ ಪೇಸ್ಟಿನಿಂದ ಮುಖಕ್ಕೆ ಮಸಾಜ್ ಮಾಡಿ ಹಾಗೆಯೇ ಬಿಟ್ಟು ಒಣಗಿದ ಮೇಲೆ ತೊಳೆಯಿರಿ. ಪೇಸ್ಟ್ ಉಳಿದರೆ ಎಸೆಯದೆ ಹಾಗೆಯೇ ಫ್ರಿಜ್ಜಿನಲ್ಲಿ ಮುಚ್ಚಳವಿರುವ ಡಬ್ಬದಲ್ಲಿ ಹಾಕಿಡಿ. ಒಂದು ವಾರ ದಿನವೂ ಉಪಯೋಗಿಸುತ್ತಿರಬಹುದು.
4.
ಇಡೀ ತೊಗರಿಯನ್ನು ರಾತ್ರಿಯಿಡೀ ನೆನೆಹಾಕಿ ಬೆಳಿಗ್ಗೆ ತೆಗೆದು ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬಹುದು.
5.
ಸೌತೆಕಾಯಿಯನ್ನು ತುರಿದು ಅರೆದು ರಸ ತೆಗೆದು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆದರೆ ಮುಖ ಫ್ರೆಶ್ ಆಗುತ್ತದೆ. ಅಲ್ಲದೆ ಚರ್ಮವನ್ನೂ ಬಿಗಿಗೊಳಿಸುತ್ತದೆ. ಮುಖದ ಕಲೆಗಳನ್ನೂ ಇದು ತೊಡೆದುಹಾಕುತ್ತದೆ.
ಒಣ ತ್ವಚೆಗೆ
1.
ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ.
2.
ಗಸಗಸೆಯನ್ನು ರಾತ್ರಿಯಿಡೀ ನೆನೆ ಹಾಕಿ ಬೆಳಿಗ್ಗೆ ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ಗಸಗಸೆಯಲ್ಲಿರುವ ನೈಸರ್ಗಿಕ ತೈಲ ಮುಖಕ್ಕೆ ಬೇಕಾಗಿರುವ ತೈಲಾಂಶ ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
3.
ಹಾಲು ಕುದಿಯುತ್ತಿರುವಾಗಲೇ ಎರಡು ಚಮಚ ತೆಗೆದುಕೊಂಡು ಅದು ತುಸು ಬೆಚ್ಚಗಿರುವಾಗಲೇ ಮುಖಕ್ಕೆ ಹಚ್ಚಿ ಮೇಲ್ಮುಖವಾಗಿ ಮಸಾಜ್ ಮಾಡಿ. ಇದು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಒಣ ತ್ವಚೆಯನ್ನು ತೊಡೆಹಾಕುತ್ತದೆ. ನಿಮ್ಮ ಮುಖದಲ್ಲಿ ಮೊಡವೆಯಿದ್ದರೆ, ಹಾಲಿಗೆ ಸ್ವಲ್ಪ ಉಪ್ಪು ಸೇರಿಸಿ ಮಸಾಜ್ ಮಾಡಬಹುದು.
4.
ಮೂರ್ನಾಲ್ಕು ಹಸಿ ನೆಲಗಡಲೆಯನ್ನು ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ತೊಳೆದರೆ ಇದು ಕೂಡಾ ಮುಖಕ್ಕೆ ಬೇಕಾದ ತೈಲಾಂಶವನ್ನು ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
5.
ಹಾಲಿನ ದಪ್ಪ ಕೆನೆಗೆ ಸ್ವಲ್ಪ ಅರಿಶಿನ ಪುಡಿ ಹಾಗೂ ಆಲಿವ್ ಎಣ್ಣೆ ಸೇರಿಸಿ ಮುಖಕ್ಕೆ ಹಚ್ಚಿ. ಇದೂ ಕೂಡಾ ಮುಖಕ್ಕೆ ಬೇಕಾದ ಎಣ್ಣೆಯಂಶ ನೀಡಿ ಮುಖವನ್ನು ತಾಜಾ ಆಗಿಸುತ್ತದೆ.
ಮಿಶ್ರ ಚರ್ಮ (ಒಣ ಹಾಗೂ ತೈಲಯುಕ್ತ ಮಿಶ್ರ ಮಾದರಿಯ ಚರ್ಮ)
1.
ಸ್ವಲ್ಪ ಮುಲ್ತಾನಿ ಮಿಟ್ಟಿಗೆ ಪುದಿನ ಎಲೆ ಸೇರಿಸಿ ಅರೆದು ಪೇಸ್ಟ್ ಮಾಡಿ ಫ್ರಿಜ್ಜಿನಲ್ಲಿಡಿ. ರಾತ್ರಿ ಕಳೆದು ಬೆಳಗಾದ ಮೇಲೆ ಫ್ರಿಜ್ಜಿನಿಂದ ಹೊರತೆಗೆದು ಇದನ್ನು ಮುಖಕ್ಕೆ ಹಚ್ಚಿ.
2.
ನಿಂಬೆ ಹುಲ್ಲನ್ನು ನೀರಿಗೆ ಹಾಕಿ ಪರಿಮಳ ಹೊರಬರುವವರೆಗೆ ಚೆನ್ನಾಗಿ ಕುದಿಸಿ ಆ ನೀರನ್ನು ಟ್ರೇಯಲ್ಲಿ ಹಾಕಿ ಫ್ರೀಜರಿನಲ್ಲಿಟ್ಟು ಗಟ್ಟಿ ಮಾಡಿ. ಪ್ರತಿ ದಿನ ಕೆಲಸಕ್ಕೆ ಅಥವಾ ಹೊರಗೆ ಹೋಗಿ ಬಂದ ಮೇಲೆ ಮುಖ ತೊಳೆದು ನಿಂಬೆ ಹುಲ್ಲಿನ ನೀರಿನ ಐಸ್ ತುಂಡಿನಿಂದ ಮುಖವನ್ನು ಉಜ್ಜಿ. ಇದು ನಿಮ್ಮ ಚರ್ಮವನ್ನು ತಾಜಾ ಆಗಿಸಿ ಎಲ್ಲಾ ಕೊಳೆಯನ್ನೂ ತೊಡೆದುಹಾಕುತ್ತದೆ.
ಮೊಡವೆಯುಕ್ತ ಚರ್ಮಕ್ಕೆ
1.
ಸ್ವಲ್ಪ ಜಾಯಿಕಾಯಿಯನ್ನು ರೋಸ್ ವಾಟರ್ ಅಥವಾ ನೀರಿನಲ್ಲಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆಯಿರಿ. ಇದು ಮೊಡವೆ, ಕಪ್ಪು ಕಲೆಗಳನ್ನು ತೆಗೆಯುತ್ತದೆ.
2.
ರಾತ್ರಿ ಮಲಗುವ ಮುನ್ನ ಪ್ರತಿ ದಿನ ಅರ್ಧ ತುಂಡು ಫ್ರೆಶ್ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಕುದಿಸಿದ ತಾಜಾ ಒಂದು ಲೋಟ ಹಾಲಿಗೆ ಹಿಂಡಿ ಅರ್ಧ ಗಂಟೆ ಬಿಟ್ಟ ಮೇಲೆ ಅದರಿಂದ ಮುಖ ತೊಳೆದು ಮುಖಕ್ಕೆ ಹಚ್ಚಿದರೆ ಮೊಡವೆ ಪರಿಹಾರ ಕಾಣುತ್ತದೆ.
3.
ಮುಕ್ಕಾಲು ಕಪ್ ಟೊಮ್ಯಾಟೋ ರಸಕ್ಕೆ ಅರ್ಧ ತುಂಡು ನಿಂಬೆಯನ್ನು ಹಿಂಡಿ ಅದಕ್ಕೆ ನಾಲ್ಕೈದು ಪುದಿನ ಸೊಪ್ಪಿನ ಪೇಸ್ಟನ್ನು ಸೇರಿಸಿ. ಬೇಕಿದ್ದರೆ ರುಚಿಗಾಗಿ ಸ್ವಲ್ಪ ಉಪ್ಪನ್ನು ಹಾಕಿ ಒಂದು ವಾರ ಬೆಳಿಗ್ಗೆ ಹಾಗೂ ರಾತ್ರಿ ಕುಡಿದರೆ ಮುಖದ ಚರ್ಮದ ತೊಂದರೆಗಳು ನೀಗುತ್ತದೆ. ಇದು ಚರ್ಮದೊಳಗಿನ ವಿಷಕಾರಕಗಳನ್ನು ತೊಡೆದುಹಾಕಿ ಚರ್ಮವನ್ನು ಒಳಗಿನಿಂದ ಪರಿಶುದ್ಧಗೊಳಿಸುತ್ತದೆ. ಮಲಬದ್ಧತೆ, ಹೊಟ್ಟೆ ಹುಳುಗಳ, ಜಂತುಗಳ ತೊಂದರೆಗೂ ಇದು ಮುಕ್ತಿ ನೀಡುತ್ತದೆ.
4.
ನಿಂಬೆಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿ ರಾತ್ರಿ ಮಲಗಿ ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ತೊಳೆದರೆ ಮುಖಕ್ಕೆ ತಾಜಾ ಹೊಳಪು ಬರುವುದಲ್ಲದೆ, ಚರ್ಮ ಮೃದುವಾಯಿ ನಯವಾಗುತ್ತದೆ.
5.
ಪ್ರತಿ ದಿನ 12ರಿಂದ 14 ಲೋಟ ನೀರು ಕುಡಿಯಿರಿ. ಕರಿದ ತಿಂಡಿಗಳನ್ನು ಬಿಟ್ಟು ತಾಜಾ ಹಸಿ ತರಕಾರಿಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳಿ. ದಿನಕ್ಕೆ ಕನಿಷ್ಟ ಎಂಟು ಗಂಟೆಗಳ ಕಾಲ ಸುಖ ನಿದ್ದೆ ಮಾಡಿ.
6.
ಆಯಾ ಕಾಲಕ್ಕೆ ತಕ್ಕಂತೆ ಸಿಗುವ ಹಣ್ಣುಗಳು ಹಾಗೂ ತರಕಾರಿಗಳನ್ನು ಹಾಗೆಯೇ ಹಸಿಯಾಗಿಯೇ ಹೆಚ್ಚು ತಿನ್ನಿ. ಮಾವಿನ ಹಣ್ಣು ಹಾಗೂ ಸ್ಟ್ರಾಬೆರಿಯನ್ನು ಹೆಚ್ಚು ತಿನ್ನಬೇಡಿ. ಇವುಗಳ ಹೆಚ್ಚಿನ ಸೇವನೆಯಿಂದ ಮುಖದಲ್ಲಿ ಮೊಡವೆಗಳೇಳುವ ಸಂಭವವಿದೆ.

ಉದುರುವ ಕೂದಲು, ಬಕ್ಕತಲೆಗೆ 34 ಪರಿಹಾರ!



ಕೂದಲು ಉದುರುವುದು! ಬಹಳಷ್ಟು ಮಂದಿಗೆ ಇದೊಂದು ಗಂಭೀರ ಸಮಸ್ಯೆ. ಕೂದಲು ಉದುರುತ್ತಿರುವ ಬಗ್ಗೆ ತಲೆ ಬಿಸಿ ಮಾಡಿಯೇ ಇನ್ನಷ್ಟು ಕೂದಲು ಉದುರಿಸಿಕೊಳ್ಳಬೇಕಾದ ಅನಿವಾರ್ಯತೆ ಅವರದ್ದು. ವಂಶಪಾರಂಪರ್ಯದ ಬೋಳುತಲೆಯ ಶಾಪ ಕೆಲವರಿಗಾದರೆ, ಬಹಳಷ್ಟು ಮಂದಿಗೆ ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮದಿಂದಾಗಿಯೇ ಕೂದಲು ಉದುರುವ ಸಮಸ್ಯೆ ಶಾಪವಾಗಿ ಕಾಡುತ್ತದೆ ಎಂಬುದೂ ಸತ್ಯ. ಹೆಚ್ಚಿನ ಪ್ರಮಾಣದಲ್ಲಿ ಟೀ, ಕಾಫಿ, ಆಲ್ಕೋಹಾಲ್, ಮಾಂಸ ಸೇವನೆ, ಸಿಗರೇಟು ಸೇದುವುದು, ಹೆಚ್ಚು ಜಂಕ್ ಫುಡ್ ಆಹಾರ ವ್ಯವಸ್ಥೆಗೇ ಮಾರು ಹೋಗಿರುವುದು ಕೂಡಾ ಕೂದಲುದುರುವಿಕೆಗೆ ಕಾರಣ. ಇದಲ್ಲದೆ ಒತ್ತಡ ಕಡಿಮೆ ಮಾಡಲು ಅನಾವಶ್ಯಕವಾಗಿ ಮಾತ್ರೆ ಸೇವನೆ, ಬಿಪಿ, ಮಾನಸಿಕ ಟೆನ್ಶನ್, ಸುಸ್ತು ಮತ್ತಿತರ ಕಾಯಿಲೆಗಳಿಗಾಗಿ ಹೆಚ್ಚು ಮಾತ್ರೆ ಸೇವಿಸುವುದರಿಂದಲೂ ಕೂದಲು ಉದುರಬಹುದು. ಹಾಗಾದರೆ ಕೂದಲನ್ನು ಹೇಗೆ ಸಂರಕ್ಷಿಸಬಹುದು ಅಥವಾ ಬಕ್ಕ (ಬೋಳು)ತಲೆಯಲ್ಲಿ ಮತ್ತೆ ಕೂದಲು ಚಿಗುರಿಸುವುದು ಹೇಗೆ ಎಂಬ ನಿಮ್ಮಲ್ಲೇ ಎದ್ದ ಪ್ರಶ್ನೆಗೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕೆಲವು ಪರಿಹಾರ ಉಪಾಯಗಳು ಇಲ್ಲಿವೆ. ಸ್ವೀಕರಿಸುವುದು ನಿಮಗೆ ಬಿಟ್ಟಿದ್ದು.

1. ಯಾವಾಗಲೂ ತಲೆಕೂದಲನ್ನು ಸ್ವಚ್ಛವಾಗಿಡಿ. ಕೂದಲು ಸ್ವಚ್ಛವಾಗಿಟ್ಟರೆ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲುದುರುವುದೂ ಕೂಡಾ ಕಡಿಮೆಯಾಗುತ್ತದೆ.
2. ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಳಸಬಹುದು.
3. ತಲೆಯಲ್ಲಿ ಹೊಟ್ಟು ಏಳುತ್ತಿದ್ದರೆ ಮಸಾಜ್ ಮಾಡುವ ಎಣ್ಣೆಗೆ ಸ್ವಲ್ಪ ಕರ್ಪೂರದ ಚೂರುಗಳನ್ನು ಹಾಕಿ. ಇದು ಹೊಟ್ಟನ್ನು ಕಡಿಮೆ ಮಾಡುತ್ತದೆ
4. ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಸ್ನಾನ ಮಾಡಿದ ಮೇಲೆ ಸ್ವಚ್ಛ ಬಟ್ಟೆಯಲ್ಲಿ ತಲೆಕೂದಲನ್ನು ಕಟ್ಟಿ ಸ್ವಲ್ಪ ಹೊತ್ತಿನ ಮೇಲೆ ಅದನ್ನು ಬಿಚ್ಚಿ, ಸಹಜವಾಗಿಯೇ ಅದು ಒಣಗಲಿ.
5. ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ.

6. ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಬಹುದು. ಮಸಾಜ್‌ಗಾಗಿಯೂ ಬಳಸಬಹುದು.
7. ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಪ್ರತಿನಿತ್ಯ ಬಳಸಬಹುದು.
8. ತಿಂಗಳಿಗೊಮ್ಮೆಯಾದರೂ ಹೇರ್ ಪ್ಯಾಕ್ ಹಚ್ಚಿ. ಮೆಹೆಂದಿ ಸೊಪ್ಪು, ಮೊಸರು ಅಥವಾ ಮೊಟ್ಟೆ ಯಾವುದನ್ನೂ ಹೇರ್ ಪ್ಯಾಕ್ ಆಗಿ ಬಳಸಬಹುದು.
9. ಕೂದಲನ್ನು ಸ್ಟೈಲಿಶ್ ಆಗಿ ಕಾಣಿಸಲಿಕ್ಕಾಗಿ ಹೇರ್ ಜೆಲ್, ಕ್ರೀಂ, ಸ್ಪ್ರೇ ಅಥವಾ ಲೋಷನ್‌ಗಳನ್ನು ಬಳಸಬೇಡಿ. ಇಂಥ ರಾಸಾಯನಿಕಗಳು ಕೂದಲಿಗೆ ಹಾನಿಕಾರಕ.
10. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಸ್ವಲ್ಪ ಮೆಂತ್ಯವನ್ನು ಹಾಕಿ ಕುದಿಸಿ. ನಂತರ ಸೋಸಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಬಳಸಿ.
11. ಯಾವಾಗಲೂ ನೈಸರ್ಗಿಕ ಶಾಂಪೂವನ್ನೇ ತಲೆ ತೊಳೆಯಲು ಬಳಸಿ. ಆದರೂ ಬಹಳಷ್ಟು ಶಾಂಪೂಗಳು ರಾಸಾಯನಿಕವನ್ನೇ ಹೊಂದಿರುತ್ತದೆ. ಇದು ನಿಮ್ಮ ಕೂದಲ ಮೇಲೆ ಕೆಟ್ಟ ಪರಿಣಾಮ ಬೀರಲೂ ಬಹುದು. ರಾಸಾಯನಿಕಗಳು ತಲೆಯ ಉಷ್ಣವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವೇ ಪಿತ್ತ. ಹಾಗಾಗಿ ಸೀಗೆಕಾಯಿ, ನೆಲ್ಲಿಕಾಯಿ ಪುಡಿಯನ್ನು ತಲೆ ತೊಳೆಯಲು ಬಳಸುವುದು ಉತ್ತಮ.
12. ತಲೆಗೆ ಎಣ್ಣೆ ಹಚ್ಚುವುದು ತುಂಬ ಅಗತ್ಯ. ಕೂದಲು ಉದುರುವುದಕ್ಕೆ ತಲೆಗೆ ಎಣ್ಣೆ ಹಚ್ಚದಿರುವುದೂ ಪ್ರಮುಖ ಕಾರಣ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ತಲೆಕೂದಲ ಬುಡಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ. ಇದಲ್ಲದೆ ಕೆಲವು ಆಯುರ್ವೇದದ ಎಣ್ಣೆಗಳಾದ ಮಹಾಭೃಂಗರಾಜ ತೈಲ, ಆಮ್ಲಾ ಆಯಿಲ್ ಅಥವಾ ಅರ್ನಿಕಾ ಆಯಿಲ್‌ಗಳನ್ನೂ ಬಳಸಿದರೆ ಉತ್ತಮ. ಎಣ್ಣೆ ತಲೆಕೂದಲ ಬೇರುಗಳಿಗೆ ಇಳಿಯುವಂತೆ ಬುಡಕ್ಕೆ ಹಚ್ಚಬೇಕು.
13. ಮಲಬದ್ಧತೆ ಅಥವಾ ಅಜೀರ್ಣ ಆಗದಂತೆ ಯಾವಾಗಲೂ ನೋಡಿಕೊಳ್ಳಬೇಕು. ಮಲಬದ್ಧತೆ ಇದ್ದರೆ ಸುಮ್ಮನೆ ಕೂರದೆ ಯಾವುದಾದರೂ ಮೆದು ಮನೆ ಔಷಧಿಯ ಮೂಲಕ ಸರಿಪಡಿಸಿಕೊಳ್ಳಿ. ಇದಕ್ಕೆ ಆಯುರ್ವೇದದ ತ್ರಿಫಲಾ ಪುಡಿ ಕೂಡಾ ಬಳಸಬಹುದು.
14. ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿ ಹೇರಳವಾಗಿರಲಿ. ಸಲಾಡ್, ಹಾಲು, ಹಣ್ಣು, ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಿ. ಹೆಚ್ಚು ಪ್ರೋಟೀನ್, ವಿಟಮಿನ್ ಎ ಇರುವ ಆಹಾರಗಳನ್ನು ತಿನ್ನಿ.
15. ಭೃಂಗರಾಜ ಎಲೆ, ನೆಲ್ಲಿಕಾಯಿ, ಕಪ್ಪು ಎಳ್ಳು ಮತ್ತಿತರ ವಸ್ತುಗಳನ್ನು ಸೇರಿಸಿ ಮನೆಯಲ್ಲೇ ಎಣ್ಣೆ ಮಾಡಿ ನಿತ್ಯ ತಲೆಗೆ ಹಚ್ಚುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬಹುದು.

16. ತಲೆಗೆ ಸ್ನಾನ ಮಾಡಿದ ಮೇಲೆ ತಲೆ ಬುಡವನ್ನು ಚೆನ್ನಾಗಿ ಮಸಾಜ್ ಮಾಡುವಂತೆ ಉಜ್ಜಿ. ಇದು ನಿಮ್ಮ ತಲೆಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗೂ ಕೂದಲನ್ನು ದೃಢವಾಗಿಸುತ್ತದೆ.
17. ಬಸಳೆ ಸೊಪ್ಪಿನ ಹಸಿಯಾದ ಜ್ಯೂಸ್ ಮಾಡಿ ಕುಡಿಯಿರಿ. ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಕೂಡಾ ಉತ್ತಮ.
18. ಪ್ರತಿದಿನವೂ ತೆಂಗಿನೆಣ್ಣೆ ಹಾಗೂ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಉತ್ತಮ ಫಲ ಕಾಣುತ್ತದೆ.
19. ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ಉತ್ತಮ ಫಲ ಕಾಣುತ್ತದೆ. ಬೋಳಾದ ತಲೆಗೂ ಇದು ಉತ್ತಮ.
20. ಬೇಯಿಸಿದ ಉದ್ದಿನ ಬೇಳೆಯ ಪೇಸ್ಟ್ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯದು.

21. ಮೆಂತೆ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಧಾನವಾಗಿ ಕಡಿಮೆಯಾಗುತ್ತದೆ. ಮೆಂತೆ ಸೊಪ್ಪಿನ ಬದಲಾಗಿ ಮೆಂತ್ಯವನ್ನೂ ಬಳಸಬಹುದು.
22. ಯಷ್ಟಿಮಧುವನ್ನು ಹಾಲಿನಲ್ಲಿ ಅರೆದು ಬೋಳಾದ ಭಾಗಕ್ಕೆ ಹಚ್ಚಿದರೆ ಅಲ್ಲಿ ಕೂದಲು ಹುಟ್ಟಲು ಆರಂಭವಾಗುತ್ತದೆ.
23. ನಿಂಬೆಹಣ್ಣಿನ ಬೀಜ ಹಾಗೂ ಕರಿಮೆಣಸನ್ನು ಚೆನ್ನಾಗಿ ಅರೆದು ಬೋಳಾದ ಜಾಗಕ್ಕೆ ಹಚ್ಚಿದರೆ ಹೊಸ ಕೂದಲು ಹುಟ್ಟಿ ಬೆಳೆಯಲು ಆರಂಭವಾಗುತ್ತದೆ.
24. ನೆಲ್ಲಿಕಾಯಿಯನ್ನು ತಿನ್ನುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.
25. ಒಂದು ಕಪ್ ಸಾಸಿವೆ ಎಣ್ಣೆಯನ್ನು ನಾಲ್ಕು ಚಮಚ ಮೆಹೆಂದಿ ಸೊಪ್ಪಿನ ಜತೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ಒಂದು ಬಾಟಲಿಯಲ್ಲಿ ಹಾಕಿಟ್ಟು ದಿನವೂ ಬೋಳಾದ ತಲೆಯ ಭಾಗಕ್ಕೆ ಲೇಪಿಸಿ. ಇದು ಕೂದಲು ಮತ್ತೆ ಹುಟ್ಟಲು ಸಹಾಯ ಮಾಡುತ್ತದೆ.
26. ಜೇನಿನೊಂದಿಗೆ ಮೊಟ್ಟೆಯ ಹಳದಿ ಭಾಗವನ್ನು ಕಲಸಿ ಚೆನ್ನಾಗಿ ತಲೆಬುಡಕ್ಕೆ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ತಲೆ ತೊಳೆಯಿರಿ.
27. ಪ್ರತಿ ದಿನವೂ ಮೆಹೆಂದಿ ಎಲೆಯನ್ನು ಎರೆದು ತಲೆಗೆ ಹಚ್ಚುತ್ತಾ ಬಂದಂಲ್ಲಿ ಕೂದಲು ಉದುರುವುದು ನಿಲ್ಲುತ್ತದೆ. ಹಾಗೂ ಹೊಸ ಕೂದಲು ಮೊಳೆಯಲು ಶುರುವಾಗುತ್ತದೆ.
28. ರಾತ್ರಿ ಮಲಗುವ ಮೊದಲು ಹರಳೆಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಕೂದಲಿಗೆ ಹಚ್ಚಬೇಡಿ. ನಂತರ ತಲೆಯನ್ನು ಬಟ್ಟೆಯಲ್ಲಿ ಸುತ್ತಿ ಮಲಗಿ ಬೆಳಗ್ಗೆ ಎದ್ದು ತಲೆಗೆ ಸ್ನಾನ ಮಾಡಿ. ಕನಿಷ್ಟ 15 ದಿನವಾದರೂ ಹೀಗೆ ಮಾಡಿ.
29. ಒಂದು ಚಮಚ ಸಾಸಿವೆಯನ್ನು ಒಂದು ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ತಣಿದ ಮೇಲೆ ಇದನ್ನು ಸೋಸಿ, ಕೇವಲ ನೀರನ್ನು ಮಾತ್ರ ಕುಡಿಯಿರಿ.
30. ಎರಡು ಚಮಚಗಳಷ್ಟು ಆಲಿವ್ ಎಣ್ಣೆ, ರೋಸ್‌ಮೆರಿ, ಒಂದು ನಿಂಬೆಹಣ್ಣಿನ ರಸ, ಹಾಗೂ ಒಂದು ಮೊಟ್ಟೆಯ ಹಳದಿ ಲೋಳೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ. ಇದು ತಲೆಕೂದಲಿಗೆ ಉತ್ತಮ ಟಾನಿಕ್.

31. ಅರ್ಧ ಕಪ್ ಆಲಿವ್ ಎಣ್ಣೆಗೆ ಒಂದು ಚಮಚ ಜೀರಿಗೆ ಪುಡಿಯನ್ನು ಮಿಕ್ಸ್ ಮಾಡಿ ಚೆನ್ನಾಗಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ.
32. ಅರ್ಧ ಕಪ್ ತೆಂಗಿನ ಎಣ್ಣೆಗೆ ಸ್ವಲ್ಪ ಒಣಗಿದ ನೆಲ್ಲಿಕಾಯಿ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ತಲೆಯ ಬುಡಕ್ಕೆ ಹಚ್ಚಿ. ಇದು ಕೂದಲುದುರುವುದನ್ನು ತಡೆಯಲು ಸೂಕ್ತ.
33. ತೆಂಗಿನ ಕಾಯಿಯನ್ನು ತುರಿದು ಅದರ ಹಾಲನ್ನು ತೆಗೆದು ತಲೆಗೆ ಹಚ್ಚಿ ಮಸಾಜ್ ಮಾಡಿ ನಂತರ ಒಂದು ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
34. ತೆಂಗಿನ ಕಾಯಿಯ ನೀರನ್ನು ಕುಡಿಯುವುದರಿಂದಲೂ ತಲೆಕೂದಲು ಉದುರುವುದನ್ನು ಕಡಿಮೆ ಮಾಡಬಹುದು.

Naa Baredaa Kavitegalu




Sunday, 10 April 2011

ಶೇವಿಂಗ್

ಪುರುಷರೇ , ನಿಮಗೆ ಶೇವಿಂಗ್ ಮಾಡೋದು ಗೊತ್ತಾ?
ಶೇವಿಂಗ್ ಗೊತ್ತಾ ಎಂಬ ಈ ಪ್ರಶ್ನೆ ಕೇಳಿದರಂತೂ ಗೊಳ್ಳನೆ ನಕ್ಕಾರು. ಮೀನಿಗೆ ಈಜು ಕಲಿಸಬೇಕೇ ಹೇಳಿ, ಹಾಗೆಯೇ ಪುರುಷರಿಗೂ ಶೇವಿಂಗ್ ಕಲಿಸಬೇಕಾಗಿಲ್ಲ ಬಿಡಿ ಎಂದು ಉಡಾಫೆ ಮಾಡಿಬಿಡಬಹುದು. ಆದರೆ ಇಲ್ಲಿ ಹೀಗೆ ಪ್ರಶ್ನೆ ಕೇಳಲೂ ಕೂಡಾ ಕಾರಣವಿದೆ.
ಬ್ಯೂಟಿ ಅರ್ಥಾತ್ ಸೌಂದರ್ಯ ಅನ್ನೋದು ಕೇವಲ ಸ್ತ್ರೀಯರ ಸೊತ್ತಲ್ಲ ಎಂಬುದು ಖಂಡಿತಾ ನಿಜ. ಪುರುಷರ ಸೌಂದರ್ಯಕ್ಕೂ ಅಷ್ಟೇ ಮಹತ್ವವಿದೆ. ಆದರೆ, ಸ್ತ್ರೀ ಹಾಗೂ ಸೌಂದರ್ಯ ಎರಡೂ ಶಬ್ದಗಳು ಒಂದಕ್ಕೊಂದು ಬೆಸೆದ ಸಮಾನಾರ್ಥಕ ಶಬ್ದಗಳೋ ಎಂಬಂತೆ ಮೇಳೈಸಿವೆ. ಹಾಗಾಗಿಯೋ ಏನೋ, ಬ್ಯೂಟಿ ಕಾಲಂಗಳು, ಜಾಹಿರಾತುಗಳು, ಲೇಖನಗಳು ಯಾವಾಗಲೂ ಸ್ತ್ರೀಯ ಜಗತ್ತಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಅದಕ್ಕಾಗಿ ಈ ಬಾರಿ ಈ ಕಾಲಂನಲ್ಲಿ ಪುರುಷರಿಗಾಗಿಯೇ ಸೌಂದರ್ಯ ಸಲಹೆಗಳು!
ಶೇವಿಂಗ್! ಇದು ಪುರುಷರ ದೊಡ್ಡ ಸಮಸ್ಯೆ. ಇದೇನು ಮಹಾ ಸಮಸ್ಯೆ ಎಂದು ನೀವು ಹೇಳಬಹುದು. ಆದರೆ ಶೇವ್ ಮಾಡುವುದಕ್ಕೂ ಒಂದು ಕ್ರಮವಿದೆ, ವಿಧಾನವಿದೆ. ಹಾಗೆ ನೋಡಿದರೆ ನೂರರಲ್ಲಿ ಶೇ.70ರಷ್ಟು ಪುರುಷರಿಗೆ ನಿಜವಾಗಿ ಶೇವ್ ಮಾಡುವ ವಿಧಾನವೇ ಗೊತ್ತಿರುವುದಿಲ್ಲ. ಮೀಸೆ, ಗಡ್ಡ ಮೂಡುವ ಹದಿಹರೆಯದಲ್ಲಂತೂ ಇದನ್ನು ಹೇಗೆ ಶೇವ್ ಮಾಡಲಿ ಎಂದೇ ಎಷ್ಟೋ ಹುಡುಗರು ಮುಜುಗರದಿಂದ ಪರದಾಡುತ್ತಿರುತ್ತಾರೆ  ಹೇಗ್ಹೇಗೋ ಗಡ್ಡ ಮೀಸೆಯನ್ನು ಬ್ಲೇಡಿನಲ್ಲಿ ತೆಗೆದು ಬಿಟ್ಟರೆ, ಕೂದಲು ಮತ್ತೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲ, ಹಲವರಿಗೆ ಶೇವ್ ಮಾಡಿದಲ್ಲಿ ಕೆಂಪು ಗುಳ್ಳೆಗಳೇಳಬಹುದು. ಬೆವರು ಸಾಲೆಯ ಮಾದರಿಯಲ್ಲಿ ಸಣ್ಣ ಕಜ್ಜಿಗಳು ಮೂಡಬಹುದು. ಇದು ಕೇವಲ ಗಡ್ಡ ಅಥವಾ ಮೀಸೆ ತೆಗೆದ ಜಾಗ ಮಾತ್ರವಲ್ಲ, ದೇಹದ ಇತರ ಕಡೆಗಳಲ್ಲಿಯೂ ಕಜ್ಜಿ ಮೂಡಲು ನಿಮ್ಮ ಶೇವಿಂಗ್ ಕ್ರಮ ಸರಿಯಾಗಿಲ್ಲದಿರುವುದೂ ಕಾರಣವಾಗಿರಬಹುದು ಎಂಬುದು ನಿಮಗೆ ಗೊತ್ತೇ?
ಹೌದು. ಅದಕ್ಕಾಗಿಯೇ ಕೆಲವೊಂದು ಸುಲಭವಾಗಿ ಅನುಸರಿಸಬಲ್ಲ ಶೇವಿಂಗ್ ಟಿಪ್ಸ್ ಇಲ್ಲಿದೆ.
ಶೇವ್ ಮಾಡುವ ಮೊದಲು:
ಮುಖವನ್ನು ಒದ್ದೆ ಮಾಡದೆ ಹಾಗೆಯೇ ಶೇವ್ ಮಾಡಿದರೆ ರೇಜರ್‌ನಿಂದ ನಿಮ್ಮ ಕೆನ್ನೆಯಲ್ಲಿ ಕೆಂಪು ಗುಳ್ಳೆಗಳು ಹಾಗೂ ಗೆರೆಗಳು ಮೂಡುತ್ತವೆ. ಹಾಗಾಗಿ ಶೇವ್ ಮಾಡುವ ಮೊದಲು ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಬಿಸಿ ನೀರಿನಿಂದ ಮೊದಲು ಒದ್ದೆ ಮಾಡುವುದರಿಂದ ಮುಖದ ಸೂಕ್ಷ್ಮರಂಧ್ರಗಳು ತೆರೆದುಕೊಳ್ಳುತ್ತದೆ. ಮೀಸೆ ಹಾಗೂ ಗಡ್ಡದ ಕೂದಲುಗಳು ಮೆತ್ತಗಾಗುತ್ತದೆ. ಹಾಗಾಗಿ ಶೇವ್ ಮಾಡಲು ಸುಲಭವಾಗುತ್ತದೆ. ಶೇವ್ ಮಾಡುವುದಕ್ಕಿಂತ ಕೊಂಚ ಮೊದಲು ಮಾಯ್‌ಶ್ಛರೈಸರನ್ನು ಶೇವ್ ಮಾಡಬೇಕಾದ ಜಾಗದಲ್ಲಿ ನಯವಾಗಿ ಹಚ್ಚುವುದೂ ಕೂಡಾ ಒಳ್ಳೆಯು. ಚಳಿಗಾಲದಲ್ಲಿ ಚರ್ಮ ಪೊರೆಗಳಂತೆ, ಹೊಟ್ಟು ಎದ್ದಂತೆ ಇರುವುದರಿಂದ ಹಾಗೂ ತುಂಬ ಒಣ ಇರುವುದರಿಂದ ಇಂಥ ಸಂದರ್ಭ ಶೇವ್ ಮಾಡುವಾಗ ಗಾಯಗಳಾಗುವುಗು ರಕ್ತ ಸೋರುವುದು ಆಗಬಹುದು. ಮಾಯ್‌ಶ್ಚರೈಸರ್ ಹಚ್ಚಿದರೆ ಗಾಯಗಳಾಗುವ ಸಾಧ್ಯತೆ ತುಂಬಾ ಕಡಿಮೆ.
-
ಶೇವ್ ಮಾಡುವ ಮೊದಲು ಮೆದುವಾದ ಶೇವಿಂಗ್ ಕ್ರೀಂ ಹಚ್ಚಿ. ಇದು ನಿಮ್ಮ ಶೇವಿಂಗನ್ನು ಸುಲಭವಾಗಿಸುತ್ತದೆ. ಶೇವಿಂಗ್ ಕ್ರೀಂ ಸಿಕ್ಕಸಿಕ್ಕವನ್ನೆಲ್ಲಾ ಆಯ್ದುಕೊಳ್ಳಬೇಡಿ. ಆಲ್ವಿರಾ ಇರುವಂಥ ಕ್ರೀಂ ಆಯ್ದುಕೊಳ್ಳಿ. ಇದು ಚರ್ಮಕ್ಕೆ ಹಿತವಾದ ಅನುಭವ ನೀಡುತ್ತದೆ.
-
ಶೇವಿಂಗ್ ಕ್ರೀಂ ಹಚ್ಚಿ ಲಗುಬಗೆಯಿಂದ ಶೇವ್ ಮಾಡಿ ಮುಗಿಸಬೇಡಿ. ಕ್ರೀಂ ಹಚ್ಚಿ ಕೆಲಕಾಲ ಮೆದುವಾಗಿ ಮಸಾಜ್ ಮಾಡಿ.
-
ತುಂಬಾ ನೊರೆ ಬರುವಂಥ ಜೆಲ್, ಕ್ರೀಂಗಳನ್ನು ಶೇವಿಂಗ್‌ಗಾಗಿ ಬಳಸಬೇಡಿ. ಮುಖ್ಯವಾಗಿ ಬೆನ್‌ಝೋಕೈನ್ ಅಥವಾ ಮೆಂಥಾಲ್ ಇರುವಂಥ ಕ್ರೀಂಗಳನ್ನು ಬಳಸಬೇಡಿ. ಇವು ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚಿಹಾಕುವುದಲ್ಲದೆ, ಚರ್ಮವನ್ನು ಒಣವಾಗಿಸುತ್ತದೆ.

ಶೇವ್ ಮಾಡುವ ಟಿಪ್ಸ್:

ಶೇವ್ ಮಾಡಿದ ನಂತರ:

-
ಶೇವ್ ಮಾಡಿದ ಮೇಲೆ ತುಂಪು ನೀರಿನಲ್ಲಿ ಮುಖ ಸ್ವಚ್ಛಗೊಳಿಸಿ.
-
ನಂತರ ಶೇವ್ ಮಾಡಿದ ಜಾಗಕ್ಕೆ ಸ್ಕಿನ್ ಟೋನರ್ ಹಚ್ಚಿ. ಇದು ನಿಮ್ಮ ಚರ್ಮ ರಂಧ್ರಗಳನ್ನು ಮುಚ್ಚಿಸಿ ಸುಸ್ಥಿತಿಯಲ್ಲಿಡುತ್ತದೆ. ತಾಜಾ ಆಗಿಸುತ್ತದೆ.
-
ನಂತರ ಮಾಯ್‌ಶ್ಚರೈಸಿಂಗ್ ಆಫ್ಟರ್ ಶೇವ್ ಕ್ರೀಮನ್ನು ಶೇವ್ ಮಾಡಿದ ಜಾಗಕ್ಕೆ ಹಚ್ಚಿ ಮೆತ್ತಗೆ ಮಸಾಜ್ ಮಾಡಿ. ಆಲ್ಕೋಹಾಲ್ ಕಂಟೆಂಟ್ ಇರುವ ಆಫ್ಟರ್ ಶೇವ್ ಕ್ರೀಮ್ ಒಳ್ಳೆಯದಲ್ಲ.
-
ಆಫ್ಟರ್ ಶೇವ್ ಕ್ರೀಂ ಹಚ್ಚುವ ಬದಲು ಮಾಯ್‌ಶ್ಚರೈಸರ್ ಕೂಡಾ ಬಳಸಬಹುದು.








-
ನಿಮ್ಮ ರೇಝರ್ ಹರಿತವಾಗಿದೆಯೇ ಎಂದು ಪರೀಕ್ಷಿಸಿ. ಹಳೆಯ ಬಾಗಿದ ಬ್ಲೇಡ್‌ಗಳನ್ನು ಬಳಸಬೇಡಿ.
-
ಅತ್ಯುತ್ತಮ ಕ್ಲೀನ್ ಶೇವ್‌ಗಾಗಿ ರೇಝರ್ ಆಯ್ಯೆಯೂ ಬಹುಮುಖ್ಯ. ಹಿಡಿ ಭಾರವಾಗಿರುವಂಥ ರೇಝರನ್ನು ಆಯ್ಕೆ ಮಾಡಿಕೊಳ್ಳಿ.
-
ಯಾವಾಗಲೂ ಮೊದಲು ಯಾವ ದಿಕ್ಕಿನಿಂದ ಕೂದಲು ಹುಟ್ಟಿದೆಯೋ ಅದೇ ದಿಕ್ಕಿನಿಂದ ಶೇವಿಂಗ್ ಮಾಡಿ. ಹೀಗೆ ಮಾಡಿದ ನಂತರ ಮತ್ತೆ ಸ್ವಲ್ಪ ಕ್ರೀಂ ಹಚ್ಚಿ ವಿರುದ್ಧ ದಿಕ್ಕಿನಿಂದ ಶೇವ್ ಮಾಡಿ. ಆಗ ಕ್ಲೀನ್ ಶೇವ್ ನಿಮ್ಮದಾಗುತ್ತದೆ.
-
ರೇಝರ್ ಮೇಲೆ ತುಂಬಾ ಒತ್ತಡ ಹಾಕಿ ಶೇವ್ ಮಾಡಬೇಡಿ. ಇದು ನಿಮ್ಮ ಚರ್ಮಕ್ಕೆ ಹಾನಿ ಮಾಡಬಹುದು.
-
ಆಗಾಗ ನಿಮ್ಮ ರೇಝರನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ.

ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್ಸ್!

ಇವು ಸೌಂದರ್ಯದ ಗಣಿ ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್ಸ್!



ಐಶ್ವರ್ಯಾ ರೈ! ಈ ಹೆಸರೇ ಹಾಗೆ. ಸೌಂದರ್ಯಕ್ಕೆ ಮತ್ತೊಂದು ಹೆಸರು ಎಂಬುದು ಜಗಜ್ಜಾಹೀರು. ವಯಸ್ಸು 35 ದಾಟಿದರೂ ಇಂದಿಗೂ ತನ್ನ ರೂಪ ಪ್ರತಿಭೆಯಿಂದಾಗಿ ಮುಂಚೂಣಿಯಲ್ಲಿರುವ ನಟಿ. ವಿಶ್ವಸುಂದರಿಯಾಗಿ ಬದುಕನ್ನು ತಾನು ಬಯಸಿದ ಹಾಗೆ ಕಟ್ಟಿಕೊಂಡ ಜಾಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಪ್ರಚುರ ಪಡಿಸಿದ ಬೆಡಗಿ. ಐಶ್ ಮಾದಕವಾಗಿಯೂ ಕಾಣಬಲ್ಲ ಚತುರೆ. ಅಪ್ಪಟ ಭಾರತೀಯ ನಾರಿಯಾಗಿಯೂ ಕಂಗೊಳಿಸಬಲ್ಲ ಮಂಗಳೂರಿನ ಚೆಲುವೆ. ಈ ತುಳುನಾಡ ಬೆಡಗಿ ತನ್ನ ಜೀವನದ ಒಂದೊಂದೇ ಮೆಟ್ಟಿಲನ್ನೂ ಏರಿ ಬೆಳೆದದ್ದೇ ಒಂದು ಯಶೋಗಾಥೆ. ಸೊಸೆಯಾಗಿ, ಹೆಂಡತಿಯಾಗಿ, ಮಗಳಾಗಿ ತನ್ನ ವೃತ್ತಿ ಬದುಕಿನಲ್ಲೂ ಅಷ್ಟೇ ಮಟ್ಟಿನ ಸ್ಪಷ್ಟತೆಯನ್ನು, ಯಶಸ್ಸನ್ನೂ ಕಾಯ್ದುಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ. ಆದರೆ ಈ ಐಶ್ ಅವೆಲ್ಲವೂಗಳನ್ನೂ ಸಮರ್ಥವಾಗಿ ನಿಭಾಯಿಸಿದವಳು. ಈ ಐಶ್ವರ್ಯಾ ಎಂಬ ಸೌಂದರ್ಯದ ಖನಿಯ ಬ್ಯೂಟಿ ಸೀಕ್ರೆಟ್ ನಿಮಗೆ ಗೊತ್ತೇನು? ತುಂಬಾ ಸಿಂಪಲ್. ಆಕೆಯೇ ಹೇಳಿಕೊಂಡಂತೆ, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಕೆ ಅನುಸರಿಸುವ ದಿನನಿತ್ಯದ ಅಭ್ಯಾಸಗಳು ಇಲ್ಲಿವೆ.
ಪಕ್ಕಾ ನ್ಯಾಚುರಲ್ ವಸ್ತುಗಳ ಬಳಕೆ ಐಶ್ವರ್ಯಾದು. ಕೆಮಿಕಲ್ ಬ್ಯೂಟಿ ಪ್ರಾಡಕ್ಟ್‌ಗಳಿಗಿಂತಲೂ ನ್ಯಾಚುರಲ್ ಬ್ಯೂಟಿ ಪ್ರಾಡೆಕ್ಟ್‌ಗಳೆಡೆಗೆ ಹೆಚ್ಚು ಮಹತ್ವ. ರಾಸಾಯನಿಕ ಸೌಂದರ್ಯವರ್ಧಕಗಳಿಂದ ಮಾರು ದೂರ. ಕಳಾಹೀನವಾದ ಕೂದಲಿಗೆ ದಿನವೂ ಪ್ರಾಕೃತಿಕವಾಗಿಯೇ ಪೋಷಣೆ ನೀಡುವ ಐಶ್ ಭಾರತದ ಪುರಾತನ ಸೌಂದರ್ಯ ವರ್ಧನೆಯ ಟಿಪ್ಸ್‌ಗಳನ್ನು ಪಾಲಿಸುತ್ತಾ ಬಂದವರು.
ಶೂಟಿಂಗ್ ಮುಗಿಸಿ ಮನೆಗೆ ಬಂದ ಮೇಲೆ, ಚರ್ಮವನ್ನು ಪ್ರತಿದಿನವೂ ಮೃದುವಾಗಿ ತಿಳಿಯಾಗಿಸಲು ಸೌತೆಕಾಯಿ ಬಳಕೆ. ಪ್ರತಿದಿನವೂ ಶೂಟಿಂಗ್ ಮುಗಿಸಿದ ಮೇಲೆ ಕ್ಲೀನಾಗಿ ಮುಖ ತೊಳೆದು, ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಮುಖಕ್ಕೆ ವರ್ತುಲವಾಗಿ ಉಜ್ಜುವುದು.
ಕಡಲೇ ಹಿಟ್ಟಿನ ಪೇಸ್ಟಿನಿಂದ ಚರ್ಮ ಶುದ್ಧಿಗೊಳಿಸುವುದು. ನಂತರ ಹಾಲು ಹಾಗೂ ಮೊಸರಿನ ಪ್ಯಾಕ್ ಲೇಪಿಸಿ ಚರ್ಮವನ್ನು ಮಾಯ್ಸ್‌ಶ್ಚರೈಸ್ ಮಾಡುವುದು.
ಆಗಾಗ ಮುಖಕ್ಕೆ ಫೇಸ್ ಪ್ಯಾಕ್ ಹಚ್ಚುವುದು. ಭಾರತದಲ್ಲಿ ಬಹು ಪ್ರಸಿದ್ಧವಾದ ಕಡಲೇಹಿಟ್ಟಿನ ಫೇಸ್ ಪ್ಯಾಕ್ ಐಶ್‌ರ ದಿನನಿತ್ಯದ ಹವ್ಯಾಸ. ಸ್ವಲ್ಪ ಕಡಲೇಹಿಟ್ಟಿಗೆ ಸ್ವಲ್ಪ ಅರಿಶಿನ ಸೇರಿಸಿ ಅದಕ್ಕೆ ಮೊಸರು ಹಾಗೂ ಹಾಲು ಸೇರಿಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯುವುದು. ಅಥವಾ, ಶ್ರೀಗಂಧ, ಮುಲ್ತಾನಿ ಮಿಟ್ಟಿ, ಅರಿಶಿನ ಪುಡಿ ಮಿಕ್ಸ್ ಮಾಡಿ ಅದಕ್ಕೆ ಕೊಂಚ ಮೊಸರು ಹಾಗೂ ಹಾಲು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯುವುದು.
ಮನೆಯಲ್ಲಿರುವಷ್ಟೂ ಹೊತ್ತು ಮೇಕಪ್ ರಹಿತಾಗಿದ್ದು, ಚರ್ಮವನ್ನು ಉಸಿರಾಡಲು ಬಿಡುವುದು.
ಕಠಿಣ ಆಹಾರ ಕ್ರಮ ಪಾಲಿಸುವುದು ಕೂಡಾ ಆಕೆಯ ದಿನಚರಿ. ಕರಿದ, ಎಣ್ಣೆ ಹೆಚ್ಚಿರುವ ತಿನಸುಗಳು, ಜಂಕ್ ಫುಡ್‌ಗಳಿಂದ ಐಶ್ ಸದಾ ದೂರ, ಬಹುದೂರ!
ಧೂಮಪಾನ, ಮದ್ಯಪಾನಗಳಿಂದಲೂ ಸದಾ ದೂರವಿರುವುದು.
ಯಾವತ್ತೂ ಹೊಟ್ಟೆ ತುಂಬಿ ತುಳುಕುವಷ್ಟು ತಿನ್ನುವುದರಿಂದ ದೂರವಿರುವುದು ಹಾಗೂ ಹಿತವಾಗಿ ಮಿತವಾಗಿ ಉಣ್ಣುವುದು.
ಪ್ರತಿದಿನವೂ 8 ಲೋಟಗಳಿಗಿಂತಲೂ ಹೆಚ್ಚು ನೀರು ಕುಡಿಯುವ ಮೂಲಕ ಮುಖದ ಚರ್ಮವನ್ನು ಸದಾ ತಿಳಿಯಾಗಿಸಿಕೊಳ್ಳುವುದು. ಬೆಳಿಗ್ಗೆ ಎದ್ದ ತಕ್ಷಣ ಎರಡು ಮೂರು ಲೋಟ ನೀರು ಕುಡಿಯುವುದು.
ಕೆಲಸ ಎಷ್ಟೇ ಕಠಿಣವಿರಲಿ, ಎಷ್ಟೇ ಸುಸ್ತಾಗಲಿ, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವ ಕಾರ್ಯಕ್ಕೆ ಅದರದ್ದೇ ಆದ ಪ್ರಾಧಾನ್ಯತೆ ನೀಡುವುದು ಐಶ್ ದಿನಚರಿ.
ಸದಾ ತನಗೊಪ್ಪುವ ಬಣ್ಣ ಹಾಗೂ ಡಿಸೈನ್‌ನ ಬಟ್ಟೆಗಳನ್ನು ಧರಿಸುವ ಮೂಲಕ ಇನ್ನೂ ಆಕರ್ಷಕವಾಗಿ ಕಾಣಿಸಿಕೊಳ್ಳುವುದು.
ಕೊಂಚ ಯೋಗ, ಧ್ಯಾನ, ದೇವರೆಡೆಗೆ ಭಕ್ತಿ ಇವೆಲ್ಲವೂ ಐಶ್ ದಿನಚರಿ. ಪ್ರತಿದಿನವೂ ನಗುಮೊಗದಿಂದಲೇ ದಿನದಾರಂಭ. ಪಾಸಿಟಿವ್ ಥಿಂಕಿಂಗ್, ಮುಖದಲ್ಲಿ ನಗು ಇವೆಲ್ಲವೂ ನಿಜವಾದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂಬುದರಲ್ಲಿ ಐಶ್ವರ್ಯಾಗೆ ಅಚಲವಾದ ನಂಬಿಕೆಯಂತೆ.

ದಪ್ಪಗಾಗಬೇಕೆ? ಹಾಗಾದರೆ ಇಲ್ಲಿ ಕೇಳಿ!

ದಪ್ಪಗಾಗಬೇಕೆ? ಹಾಗಾದರೆ ಇಲ್ಲಿ ಕೇಳಿ! 
ತೆಳ್ಳಗಾಗುವುದು ಹೇಗೆ ಕಷ್ಟವೋ ಹಾಗೆಯೇ ದಪ್ಪಗಾಗುವುದೂ ಕೂಡಾ. ಬಹಳಷ್ಟು ಮಂದಿ ದಪ್ಪಗಾಗಬೇಕು ಎಂದು ಏನೆಲ್ಲಾ ಸರ್ಕಸ್ ಮಾಡಿದರೂ ದಪ್ಪಗಾಗಲು ಸಾಧ್ಯವಾಗುವುದಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ. ಮನಸ್ಸು ಮಾಡಿದರೆ ಖಂಡಿತ ದಪ್ಪಗಾಗಲು ಸಾಧ್ಯವಿದೆ. ಆದರೆ ದಪ್ಪಗಾಗಲು ಯಾವುದೇ ಶಾರ್ಟ್‌ಕಟ್ ಮಾರ್ಗಗಳಿಲ್ಲ ಎಂಬುದನ್ನು ಮೊದಲು ನೆನಪಿಟ್ಟುಕೊಳ್ಳಬೇಕು. ಅಷ್ಟೇ ಅಲ್ಲ, ಅಷ್ಟೇ ಕಾಳಜಿ ಹಾಗೂ ತಾಳ್ಮೆಯೂ ಬೇಕು.

ಸರಿಯಾಗಿ ತಿನ್ನಿ: ದಪ್ಪಗಾಗುವವರು ಮೊದಲು ಗಮನ ಹರಿಸಬೇಕಾಗಿದ್ದು ತಿನ್ನುವುದರ ಮೇಲೆ. ದಿನವೂ ಆರೋಗ್ಯಕರ ಆಹಾರವನ್ನೇ ಸೇವಿಸಿ. ದಿನಕ್ಕೆ ಮೂರು ಪರಿಪೂರ್ಣ ಊಟ ಹಾಗೂ ಮೂರು ಉಪಹಾರದ ಮೂಲಕ ಹೊಟ್ಟೆ ತುಂಬಿಸಿಕೊಳ್ಳಬೇಕು. ಆದರೆ ಊಟ ಹಾಗೂ ಇನ್ನೊಂದು ಉಪಹಾರ (ತಿಂಡಿ)ಯ ನಡುವೆ ಮೂರು ಗಂಟೆಗಳ ಅಂತರವಿರುವಂತೆ ನೋಡಿಕೊಳ್ಳಿ. ಆಗ ನೀವು ತಿಂದ ಆಹಾರ ಸಂಪೂರ್ಣ ಕರಗಲು ಅವಕಾಶ ನೀಡಿದಂತಾಗುತ್ತದೆ. ಆದರೆ 5-6 ಗಂಟೆಗಳ ಕಾಲ ಆಹಾರವೇ ಇಲ್ಲದೆ ಖಾಲಿ ಹೊಟ್ಟೆಯಲ್ಲಿ ಇರಬೇಡಿ.

ವ್ಯಾಯಾಮ ಮಾಡಿ: ಪ್ರತಿದಿನವೂ ವ್ಯಾಯಾಮ ಮಾಡಿ. ತೆಳ್ಳಗಾಗಲು ಹೇಗೆ ವ್ಯಾಯಾಮ ಮುಖ್ಯವೋ ಹಾಗೆಯೇ ದಪ್ಪಗಾಗಲು ಕೂಡಾ. ತೆಳ್ಳಗಿರುವವರು ಯಾವಾಗಲೂ ವ್ಯಾಯಾಮ ಅವರಿಗೆ ಒಳ್ಳೆಯದಲ್ಲ ಎಂದು ತಿಳಿದಿರುತ್ತಾರೆ. ಆದರೆ ಇದು ಶುದ್ಧ ಸುಳ್ಳು. ಬರೀ ತಿನ್ನುತ್ತಾ ಕೂತರೆ ಖಂಡಿತಾ ಸಾಲದು. ನೀವು ದಪ್ಪಗಾಗಬೇಕು, ಆದರೆ ಬೊಜ್ಜು ಬರಬಾರದು ಎಂಬ ಆಸೆ ನಿಮಗಿದ್ದರೆ ಖಂಡಿತಾ ವ್ಯಾಯಾಮ ಮಾಡಿ. ಆದರೆ, ತೂಕ ಹೆಚ್ಚಿಸಿಕೊಳ್ಳುವ ವ್ಯಾಯಾಮ, ತೂಕ ಕಳೆದುಕೊಳ್ಳುವ ವ್ಯಾಯಾಮ ಎಂದು ಎರಡು ವರ್ಗೀಕರಣವಿದೆ. ನೀವು ಮಾಡಿಕೊಳ್ಳಬೇಕಾದ್ದು ತೂಕ ಹೆಚ್ಚಿಸಿಕೊಳ್ಳುವ ವ್ಯಾಯಾಮ. ಅದಕ್ಕಾಗಿ ತಜ್ಞರನ್ನು ಸಂಪರ್ಕಿಸಿ. ಅಥವಾ ವ್ಯಾಯಾಮ ಶಾಲೆಗಳನ್ನು ಸಂಪರ್ಕಿಸಿ.

ಪ್ರೊಟೀನ್ ಯುಕ್ತ ಆಹಾರ: ನೀವು ವ್ಯಾಯಾಮ ಮಾಡುವಾಗ ನಿಮ್ಮ ದೇಹದಲ್ಲಿ ಸಾಕಷ್ಟು ಅಮೈನೋ ಆಸಿಡ್ ಇರಬೇಕು. ಇಲ್ಲವಾದರೆ ಮೂಳೆಗಳಿಗೆ ಪೆಟ್ಟಾಗುವ ಸಂಭವವಿದೆ. ಅಮೈನೋ ಆಸಿಡ್ ನಿಮ್ಮ ದೇಹದಲ್ಲಿ ಸಂಗ್ರಹವಾಗಬೇಕೆಂದರೆ ನೀವು ಉತ್ತಮ ಪ್ರೋಟೀನ್ ಯುಕ್ತ ಆಹಾರ ಪ್ರತಿನಿತ್ಯ ಸೇವಿಸಬೇಕು.

ದೇಹದಲ್ಲಿ ಉತ್ತಮ ಮಾಂಸಖಂಡಗಳು ವೃದ್ಧಿಯಾಗಬೇಕೆಂದರೆ ಪ್ರೋಟೀನ್ ಯುಕ್ತ ಆಹಾರ ಮುಖ್ಯ. ನೀವು ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ಪ್ರೊಟೀನ್‌ಯುಕ್ತ ಆಹಾರ ಸೇವಿಸದಿದ್ದರೆ ನೀವು ವ್ಯಾಯಾಮ ಮಾಡಿದರೂ ಪ್ರಯೋಜನವಾಗುವುದಿಲ್ಲ. ಹಾಗಾಗಿ ನಿಮ್ಮ ದೇಹಕ್ಕೆ ಎಷ್ಟು ಪ್ರೊಟೀನ್ ಬೇಕು ಎಂಬುದನ್ನು ನೀವೇ ಲೆಕ್ಕಾಚಾರ ಹಾಕಿಗೊಳ್ಳಬೇಕು. ನೀವು ಪ್ರತಿದಿನ 2.2 ಗ್ರಾಂ/ಕೆಜಿ ಪ್ರೊಟೀನ್ ಸೇವಿಸಬೇಕು. ಅರ್ಥಾತ್, ನೀವು 50 ಕೆಜಿ ತೂಕವಿದ್ದರೆ, ನೀವು ಸೇವಿಸಬೇಕಾದ ಪ್ರೊಟೀನ್ ಕಂಡುಹಿಡಿಯಲು 2.2 ಗ್ರಾಂ ಜತೆಗೆ ನಿಮ್ಮ ತೂಕದಿಂದ ಗುಣಿಸಬೇಕು. ( ಉದಾ- 50x2.2=111) ಹಾಗಾಗಿ 50 ಕೆಜಿ ತೂಕವಿದ್ದವರು ಪ್ರತಿದಿನ ಸೇವಿಸಬೇಕಾದ ಪ್ರೊಟೀನ್ ಪ್ರಮಾಣ 111ಗ್ರಾಂ. ಮೀನು, ಡೈರಿ ಉತ್ಪನ್ನಗಳು (ಕಡಿಮೆ ಕೊಬ್ಬು ಇರುವ ಪದಾರ್ಥಗಳು), ಮಾಂಸ, ರೋಸ್ಟ್ ಮಾಡದ ನಟ್ಸ್ (ಗೋಡಂಬಿ, ಬಾದಾಮಿ, ಪಿಸ್ತಾ, ವಾಲ್ನಟ್) ಚೀನಿಕಾಯಿ ಬೀಜ, ಕುಂಬಳಕಾಯಿ ಬೀಜ, ಯೂರ್ಯಕಾಂತಿ ಬೀಜ ಇತ್ಯಾದಿಗಳೆಲ್ಲವುಗಳಲ್ಲಿ ಪ್ರೊಟೀನ್ ಇರುತ್ತದೆ.

ಹಾಲು ತುಂಬ ಪ್ರೊಟೀನ್ ಹೊಂದಿರುವ ಆಹಾರ. ಹಾಲು ಕುಡಿದ ಮೇಲೆ ಅದು ದೇಹಕ್ಕೆ ಬೇಕಾದ ಸೂಕ್ತ ಅಮೈನೋ ಆಸಿಡ್ ಅಂಶವನ್ನೂ ನೀಡುತ್ತದೆ. ಹಾಗಾಗಿ ಹಾಲು ತುಂಬಾ ಉತ್ತಮ. ಆದರೆ, ಹಾಲಿನಲ್ಲಿ ತುಪ್ಪ ಮಿಕ್ಸ್ ಮಾಡಿ ಕುಡಿಯುವುದು ಒಳ್ಳೆಯದಲ್ಲ.
ಜಂಕ್ ಫುಡ್ ಬೇಡ: ದಪ್ಪಗಾಗುವುದು ಎಂದರೆ ಜಂಕ್ ಫುಡ್ ತಿಂದು ಕೊಬ್ಬು ಬೆಳೆಸಿಕೊಳ್ಳುವುದಂತೂ ಖಂಡಿತ ಅಲ್ಲ. ದಪ್ಪಗಾಗಲು ಫಾಸ್ಟ್ ಫುಡ್, ಜಂಕ್ ಫುಡ್ ಮೊರೆ ಹೋಗಿ ಶಾರ್ಟ್ ಕಟ್ ಮೂಲಕ ದಪ್ಪಗಾಗುವುದು ಆರೋಗ್ಯಕರವಲ್ಲ. ಪೋಷಕಾಂಶಯುಕ್ತ ಹೆಚ್ಚು ಕ್ಯಾಲೊರಿಯಿರುವ ಆರೋಗ್ಯಕರ ಆಹಾರವನ್ನೇ ಸೇವಿಸಿದರೆ ಉತ್ತಮ. ಹೆಚ್ಚು ಪ್ರೋಟೀನ್ ಇರುವ ಆಹಾರ, ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಹಾಗೂ ಆರೋಗ್ಯಕರ ಕೊಬ್ಬು ಮಾತ್ರ ಸೇವಿಸಬಹುದು.
ಬಹಳಷ್ಟು ಜನ ತುಪ್ಪ ಹಾಗೂ ಬೆಣ್ಣೆ ತಿಂದರೆ ಬೇಗ ದಪ್ಪಗಾಗುತ್ತಾರೆ ಎಂದು ತಿಳಿದಿರುತ್ತಾರೆ. ಆದರೆ ಇದು ಖಂಡಿತ ತಪ್ಪು. ತುಪ್ಪ ಅಥವಾ ಬೆಣ್ಣೆ ಆರೋಗ್ಯಕ್ಕೆ ಹಿತಕರವಾದ ಕೊಬ್ಬಲ್ಲ. ಇದು ಬೊಜ್ಜು ಬೆಳೆಸುತ್ತದೆ. ಹಾಗಾಗಿ ಇದರ ಹೆಚ್ಚು ಸೇವನೆ ಒಳ್ಳೆಯದೂ ಅಲ್ಲ. ಆಲಿವ್ ಎಣ್ಣೆ, ಸನ್‌ಫ್ಲವರ್ ಎಣ್ಣೆ, ಕ್ಯಾನೋಲಾ, ಲಿನ್ಸೀಡ್ ಎಣ್ಣೆಗಳು ಆಹಾರದಲ್ಲಿ ಬಳಕೆ ಆರೋಗ್ಯಕರ.

ಇನ್ನೂ ಕೆಲವರು ಬೀರ್ ಕುಡಿದರೆ ದಪ್ಪಗಾಗಬಹುದು ಎಂದು ಬೀರ್ ಕುಡಿಯುವ ಶಾರ್ಟ್ ಕಟ್ ಮಾರ್ಗವನ್ನು ಹಿಡಿಯುತ್ತಾರೆ. ಇದೂ ಕೂಡಾ ಖಂಡಿತ ತಪ್ಪು. ಅದು ನಿಮ್ಮನ್ನು ದಪ್ಪಗಾಗಿಸಿವುದಿಲ್ಲ, ಬದಲಾಗಿ ಹೆಚ್ಚು ಕೊಬ್ಬು ತುಂಬುವಂತೆ ಮಾಡಿ ಅನಾರೋಗ್ಯಕರ ದಪ್ಪವನ್ನು ನಿಮಗೆ ನೀಡುತ್ತದೆ.

ಮಾತ್ರೆ ಬೇಡ: ಪ್ರೊಟೀನ್ ನಿಮ್ಮ ಆಹಾರದಿಂದಲೇ ಬರುವಂತಿದ್ದರೆ ಆರೋಗ್ಯಕ್ಕೆ ಒಳ್ಳೆಯದು. ಪ್ರೊಟೀನ್ ಮಾತ್ರೆಗಳು ಆರೋಗ್ಯಕ್ಕೆ ಹಿತಕಾರಿಯಲ್ಲ. ಪ್ರೋಟೀನ್ ಮಾತ್ರೆಗಳು, ಅಥವಾ ಇನ್ನಾವುದೇ ಅಂಗಡಿಗಳಲ್ಲಿ ಸಿಗುವ ದಪ್ಪಗಾಗುವ ಸೂತ್ರಗಳಿಗೆ ಕಟ್ಟುಬಿದ್ದು ಮನೆಗೆ ಒಯ್ದು ಪ್ರಯೋಗ ಮಾಡಬೇಡಿ. ಅದರ ಬದಲು ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆಯಿರಿ.

ಬೆಳಿಗ್ಗೆ ಬಾಳೆಹಣ್ಣು ಹಾಗೂ ಹಾಲು ಕುಡಿಯಿರಿ. ಅಥವಾ ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಿ ಕುಡಿಯಿರಿ. ಉಪಹಾರದ ಜತೆಗೆ ಹೋಲ್‌ಗ್ರೈನ್ ಟೋಸ್ಟ್, ಹಣ್ಣುಗಳು, ನಟ್ಸ್ (ಪಿಸ್ತಾ, ವಾಲ್ನಟ್, ಗೋಡಂಬಿ ಇತ್ಯಾದಿ) ತಿನ್ನಬಹುದು.

ಮಧ್ಯಾಹ್ನ ಊಟದ ಜತೆ, ರೋಟಿ, ಚಪಾತಿ, ಹೋಲ್‌ಗ್ರೈನ್ ಬ್ರೆಡ್, ಹಸಿ ತರಕಾರಿಗಳು, ಪನೀರ್, ದಾಲ್, ರಾಜ್ಮಾ ಮತ್ತಿತರ ಆಹಾರಗಳನ್ನೂ ತೆಗೆದುಕೊಳ್ಳಬಹುದು. ಊಟದ ನಂತರ ಸಂಜೆ, ಹಣ್ಣುಗಳು, ಸ್ಯಾಂಡ್‌ವಿಚ್, ಮೊಸರು, ಚೀಸ್, ಸಲಾಡ್ ತೆಗೆದುಕೊಳ್ಳಬಹುದು. ಎಣ್ಣೆಯಲ್ಲಿ ಕರಿದ ತಿಂಡಿಗಳಾದ ಸಮೋಸಾ, ಪಕೋಡಾ ಬಜ್ಜಿ, ಬೋಂಡಾಗಳು ಒಳ್ಳೆಯದಲ್ಲ.
ಆರೋಗ್ಯಕರ ಕೊಬ್ಬು: