Wednesday, 11 July 2012

ಕ್ರೇಜಿಲೋಕ ಸಿನಿಮಾ ಹೇಗಿದೆ

* ಶ್ರೀರಾಮ್ ಭಟ್
ಕವಿತಾ ಲಂಕೇಶ್ ನಿರ್ದೇಶನದ ಕ್ರೇಜಿಲೋಕ ಚಿತ್ರವು ಪ್ರೇಕ್ಷಕರ ನಿರೀಕ್ಷೆ ಮುಟ್ಟುವಲ್ಲಿ ಸೋತಿದೆ. ಚಿತ್ರವನ್ನು ಸಂಪೂರ್ಣವಾಗಿ ’ರವಿಚಂದ್ರನ್ ಮಯ’ ಮಾಡುವ ಜರೂರತ್ತು ಚಿತ್ರದ ಶೀರ್ಷಿಕೆಯಲ್ಲೇ ಎದ್ದು ಕಾಣುತ್ತಿದೆ. ಆದರೆ ಅದನ್ನು ಮಾಡುವಲ್ಲಿ ಕವಿತಾ ಯಶಸ್ವಿಯಾಗಿಲ್ಲ. ಏಕೆಂದರೆ, ಈ ಕ್ರೇಜಿಲೋಕದ ಜೊತೆ ಅವರು ತಮ್ಮದೇ ಹಿಂದಿನ ಚಿತ್ರ ’ಪ್ರೀತಿ ಪ್ರೇಮ ಪ್ರಣಯ’ ವನ್ನು ಹಿಂಬಾಗಿಲಿನಿಂದ ಮತ್ತೆ ತರುವ ಪ್ರಯತ್ನವನ್ನೂ ಮಾಡಿದ್ದಾರೆ.ಈ ಎರಡನ್ನೂ ಬೆರೆಸಲು ಮೊದಲು ಪ್ರಯತ್ನಿಸಿ ಆಮೇಲೆ ಬೇರ್ಪಡಿಸಲೂ ಪ್ರಯತ್ನಿಸಿ ಎರಡರಲ್ಲೂ ಗೊಂದಲ ಸೃಷ್ಟಿಸಿಕೊಂಡು ಸುಸ್ತಾಗಿದ್ದಾರೆ ಕವಿತಾ. ಈ ಮೊದಲು ಅವರು ’ದೇವೇರಿ’, ’ತನನಂ ತನನಂ,’ಹಾಗೂ ’ಪ್ರೀತಿ ಪ್ರೇಮ ಪ್ರಣಯ’ ದಂತಹ ಸದಭಿರುಚಿಯ ಚಿತ್ರ ಕೊಟ್ಟಿದ್ದರಿಂದ ಈ ಚಿತ್ರದಲ್ಲಿ ಇನ್ನೂ ಹೆಚ್ಚಿನದೇನನ್ನೋ ಮಾಡುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಪ್ರೇಕ್ಷಕರ ಈ ನಿರೀಕ್ಷೆ ಉಲ್ಟಾ ಆಗಿದೆ.
ಸಿನಿಮಾದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಎಲ್ಲವನ್ನೂ ಮಾಡಿರುವ ಕವಿತಾರಿಗೆ ಅದನ್ನು ಚೆನ್ನಾಗಿ ಮಾಡಲು ಸಾಧ್ಯವಾಗಿಲ್ಲ. ಇರುವುದರಲ್ಲಿ ಸಂಭಾಷಣೆಯೇ ’ದಿ ಬೆಸ್ಟ್’ ಅನ್ನಬಹುದು. ಚಿತ್ರದಲ್ಲಿ ಗಟ್ಟಿಯಾದ ಕಥೆಯನ್ನು ಹುಡುಕುವ ಮೂರ್ಖ ಪ್ರಯತ್ನವೇ ಬೇಡ. ಮೊದಲು ಸಂಭಾಷಣೆ ಬರೆದು, ಚಿತ್ರಕಥೆ ಬರೆದು ಆಮೇಲೆ ಕಥೆ ಬರೆಯಲು ಹೊರಟರೋ ಏನೋ, ಕಥೆ ಮಾಡಲು ಅವರಿಗೆ ಬಹುಶಃ ವೇಳೆಯೇ ಸಿಗಲಿಲ್ಲ ಎನ್ನಬಹುದು.
ಇನ್ನು ಚಿತ್ರಕಥೆ ಸಿಗಬೇಕೆಂದರೆ ಪ್ರೇಕ್ಷಕರು ಅದಕ್ಕೂ ಮೊದಲು ತಾವು ತೆರೆಯಲ್ಲಿ ನೋಡಿದ ಎಲ್ಲಾ ದೃಶ್ಯಗಳನ್ನು ನೆನಪಿಸಿಕೊಂಡು ತಾವೇ ಜೋಡಿಸಿಕೊಳ್ಳಬೇಕು. ಅದನ್ನು ಚಿತ್ರಕಥೆಯೆಂದು ಕರೆದು ಅದನ್ನು ತೆರೆಯ ಮೇಲೆ ಓಡಾಡುವ ಪಾತ್ರಗಳು ಹಾಗೂ ಸಂಭಾಷಣೆಯ ಮೂಲಕ ಕಲ್ಪಿಸಿಕೊಂಡವರಿಗೆ ಅಲ್ಲೊಂದು ಸಿನಿಮಾ ಗೋಚರಿಸುತ್ತದೆ.
 
ಇದರಲ್ಲಿ ರವಿಚಂದ್ರನ್ ಒಬ್ಬ ಪಾತ್ರಧಾರಿಯಾದ್ದರಿಂದ, ಅವರ ಪರಿಚಯ ಎಲ್ಲರಿಗೂ ಇರುವುದರಿಂದ ಇದಕ್ಕೆ ’ಕ್ರೇಜಿಲೋಕ’ ಎಂಬ ಹೆಸರೇ ಸೂಕ್ತ ಎನ್ನುವಂತಿದೆ. ಬಹುಶಃ ರವಿಚಂದ್ರನ್ ಕಾಲ್ ಶೀಟ್ ಸಿಕ್ಕಮೇಲೆಯೇ ಕವಿತಾರಿಗೆ ’ಕ್ರೇಜಿಲೋಕ’ ಹೆಸರು ನೆನಪಾಗಿರಬೇಕು. ಅದಕ್ಕೂ ಮೊದಲು ಅವರು ತಮ್ಮ ಪ್ರೀತಿಯ ಪ್ರಾಜೆಕ್ಟ್ ಗೆ ಹೆಸರಿಡಲು ಅದೆಷ್ಟು ಒದ್ದಾಡಿರಬೇಕೆಂದರೆ ಅದೇ ಕಥೆಯನ್ನೇ ಎರಡು ಸಿನಿಮಾ ಮಾಡಬಹುದಿತ್ತೇನೋ!ಕಾನ್ಫಿಡೆಂಟ್ ಗ್ರೂಫ್ ನ ’ಡಾ ರಾಯ್ ಸಿಜೆ’ ಎಂಬ ನಿರ್ಮಾಪಕರು ನಿರ್ಮಿಸಿದ ಈ ಚಿತ್ರ, ಅವರಿಗೆ ಸಿನಿಮಾ ಒಂದು ಬಿಸಿನೆಸ್ ಅಷ್ಟೇ ಎಂಬುದನ್ನು ಸೂಚಿಸುವಂತಿದೆ. ಹೋಗಲಿ, ಕವಿತಾ ಅವರಿಗಾದರೂ ಈ ಮೊದಲು ಇದ್ದ ಸಿನಿಮಾ ಪ್ರೀತಿ ಮಾಯವಾಗಿದ್ದು ಯಾಕೆ ಎಂಬುದೇ ಯಕ್ಷ ಪ್ರಶ್ನೆ!ಈ ಮೊದಲು ಬಂದಿದ್ದ ತಮ್ಮ ’ಪ್ರೀತಿ ಪ್ರೇಮ ಪ್ರಣಯ’ ಚಿತ್ರದಂತೆ ಇಲ್ಲೂ ಕೆಲವು ಒಳ್ಳೆಯ ಮೆಸೇಜ್ ಗಳನ್ನು ಕೊಡುವ ಯೋಚನೆ ಅವರಿಗಿತ್ತೇನೋ! ಆದರೆ ಅದು ಈ ಕ್ರೇಜಿಲೋಕದ ಮೂಲಕ ಈಡೇರಿಲ್ಲ. ಕವಿತಾ ಲಂಕೇಶ್ ಅವರು ಇದಕ್ಕಿಂತ ಬಹಳಷ್ಟು ಒಳ್ಳೆಯ ಚಿತ್ರಗಳನ್ನು ನೀಡುವ ಸಾಮರ್ಥ್ಯವುಳ್ಳವರು. ಆದರೂ ’ಏಕೆ ಹೀಗಾಯ್ತೋ.... ಪ್ರೇಕ್ಷಕರು ಕಾಣರು!
ಚಿತ್ರಕ್ಕೆ ಗಟ್ಟಿಯಾದ ಕಥೆಯೇ ಇಲ್ಲ ಎಂದಮೇಲೆ ಹೇಳುವುದೇನನ್ನು? ’ಪ್ರೇಮಿಸಲು ಹಾಗೂ ವಿದ್ಯೆ ಕಲಿಯಲು ವಯಸ್ಸಿನ ಹಂಗಿಲ್ಲ’ ಎಂಬುದು ಚಿತ್ರದ ಮೆಸೇಜು ಹಾಗೂ ಒನ್ ಲೈನ್ ಸ್ಟೋರಿಯ ತಿರುಳು. ಪಾತ್ರಗಳ ಬಗ್ಗೆ, ಪಾತ್ರಧಾರಿಗಳ ಆಯ್ಕೆ ಬಗ್ಗೆ ಕವಿತಾರನ್ನು ದೂರುವಂತಿಲ್ಲ. ಅವರ ಚಿತ್ರದ ಶೀರ್ಷಿಕೆಗೆ, ಪಾತ್ರಗಳಿಗೆ ಸೂಕ್ತವಾದವರನ್ನೇ ಆಯ್ಕೆ ಮಾಡಿದ್ದಾರೆ. ಹಿಂದಿನ ಚಿತ್ರದ ನಂಟಿಗೆ ಉದಾಹರಣೆ ಎಂಬಂತೆ ಕ್ರೇಜಿಲೋಕದಲ್ಲಿ ಭಾರತಿ ವಿಷ್ಣುವರ್ಧನ್ ಇದ್ದಾರೆ.ಇನ್ನು ಅಭಿನಯದ ಬಗ್ಗೆ ಹೇಳುವುದಾದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅವರ ಜೋಡಿಯಾಗಿ ನಟಿಸಿರುವ ಡೈಸಿ ಬೋಪಣ್ಣ (ಸ್ಪೈಸಿ ಬೋಪಣ್ಣ..!) ಇಬ್ಬರೂ ತಮಗೊಪ್ಪುವ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಭಾರತಿಯವರ ಪಾತ್ರವೇ ವಿಚಿತ್ರ, ಅದಕ್ಕೆ ತಕ್ಕ ಅಭಿನಯ ಅವರದು. ಅವಿನಾಶ್ ಹಾಗೂ ನೀನಾಸಂ ಅಶ್ವಥ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಮ್ಯಾ ಒಂದು ಹಾಡಿಗೆ ಮಾತ್ರ ಸೀಮಿತ. ಅದನ್ನು ಚಿತ್ರಕ್ಕೆ ಅನಾವಶ್ಯಕವಾಗಿ ಎಳೆದುತಂದಂತಿದೆ.

ಸೀನಿಯರ್ ನಟ-ನಟಿಯರ ಮಧ್ಯೆ ಯುವಜೋಡಿಯಾಗಿ ನಟಿಸಿರುವ ನವನಟ ಸೂರ್ಯ ಹಾಗೂ ಹರ್ಷಿಕಾ ಪೂಣಚ್ಚ ಇಬ್ಬರೂ ಸಖತ್ ಆಕ್ಟೀವ್. ಆದರೆ ಅಭಿನಯವೇನೆಂಬುದು ಗೊತ್ತಿಲ್ಲ. ಕೆಲವು ಬಾರಿ ಕೈ-ಕಾಲು, ಹಲವು ಬಾರಿ ದೇಹವನ್ನು ಅಲ್ಲಾಡಿಸಿಬಿಟ್ಟರೆ ಅದನ್ನು ’ಅಭಿನಯ’ ಎಂದು ಅವರಿಗೆ ಹೇಳಿದವರ್ಯಾರೋ! ಇಬ್ಬರೂ ತಮಗೆ ಕಣ್ಣು ಇರುವುದನ್ನೇ ಮರೆತಿದ್ದಾರೆ. ಬಾಯಿಯನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡು ಸುತ್ತಲೂ ತಿರುಗಿಸುತ್ತಾರೆ.ಮಣಿಕಾಂತ್ ಕದ್ರಿ ಸಂಗೀತ, ಕೆಂಪರಾಜು ಸಂಕಲನ ಹಾಗೂ ಎಸಿ ಮಹೇಂದ್ರನ್ ಕ್ಯಾಮರಾ ಕೆಲಸವನ್ನು ’ಫಿಪ್ಟಿ-ಫಿಪ್ಟಿ’ ಎನ್ನಬಹುದು. ಎ ಹರ್ಷ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಚೆನ್ನಾಗಿದೆ. ಕ್ರೇಜಿಲೋಕದ ನಿರ್ಮಾಣ ಮಾಡಿರುವುದು ’ಕಾನ್ಫಿಡೆಂಟ್ ಗ್ರೂಫ್’ ಆಗಿದ್ದರೂ ದೃಶ್ಯವೈಭವ ಅಷ್ಟಕಷ್ಟೇ. ನಿರ್ಮಾಪಕರು ಹಾಗೂ ನಿರ್ದೇಶಕರು ಇಡೀ ಚಿತ್ರವನ್ನು ಅವರಿಗಿದ್ದ ಸಾಮರ್ಥ್ಯ ಬಳಸಿಕೊಂಡು ಬಹಳಷ್ಟು ಚೆನ್ನಾಗಿ ಮಾಡಬಹುದಿತ್ತು ಎಂದೆನಿಸದಿರದು. ಹೇಳಲೇಬೇಕಾಗಿರುವ ವಿಷಯವೆಂದರೆ ಈ ಮೊದಲು ಕ್ರೇಜಿಲೋಕ ಬಾಲಿವುಡ್ ಚಿತ್ರವೊಂದರ ಸ್ಪೂರ್ತಿ ಎನ್ನಲಾಗಿತ್ತು. ಆದರೆ ಶಾರುಖ್ ಖಾನ್ ’ಮೈ ಹೂಂ ನಾ’ ಚಿತ್ರದ ಛಾಯೆ ಅಲ್ಲಲ್ಲಿ ಕಂಡುಬರುತ್ತದೆ ಎಂಬುದನ್ನು ಬಿಟ್ಟರೆ ಬಾಲಿವುಡ್ ನಲ್ಲಿ ಇಂಥಹ ಒಂದು ಚಿತ್ರವೂ ಇರಬಹುದೆಂಬ ಯಾವ ಸಂಶಯಕ್ಕೂ ಆಸ್ಪದವಿಲ್ಲ. ಕವಿತಾ ಲಂಕೇಶ್ ಕಲ್ಪನೆ ಈ ಬಾರಿ ಅವರಿಗೆ ಕೈಕೊಟ್ಟಿದೆ. ಒಳ್ಳೆಯ, ಮುಂದಿನ ಚಿತ್ರವನ್ನು ಶೀಘ್ರವೇ ಅವರಿಂದ ನಿರೀಕ್ಷಿಸಬಹುದೇನೋ...!

No comments:

Post a Comment