Wednesday 11 July 2012

’ಈಗ’ ಸಿನಿಮಾ ಹೇಗಿದೆ


’ನಮ್ಮೂರಲ್ಲಿ ಗಂಟೆ ಹೊಡೀಬೇಕು, ಪಕ್ಕದ ಊರಲ್ಲಿ ತಮಟೆನೂ ಹೊಡಿಬೇಕು’ ಎಂದು ಕನ್ನಡದ ಡೈಲಾಗ್ ಮೂಲಕ ಅಭಿನಯ ಚಕ್ರವರ್ತಿ ಸುದೀಪ್, ತೆರೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುತ್ತಾರೆ.ಸಾಮಾನ್ಯವಾಗಿ ಕನ್ನಡ ಚಿತ್ರಗಳಲ್ಲಿ ಹಿಂದಿ, ತಮಿಳು, ತೆಲುಗು ಇತರ ಭಾಷೆಗಳನ್ನು ಬಳಸುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ತೆಲುಗು ಚಿತ್ರದಲ್ಲಿ ಕನ್ನಡ ಪದ ಬಳಕೆ ಮಾಡಿಕೊಂಡಿರುವ ಉದಾಹರಣೆ ಎಲ್ಲೋ ಅಪರೂಪ.  ’ಈಗ’ ಚಿತ್ರದಲ್ಲಿ ಸುದೀಪ್ ಕನ್ನಡದಲ್ಲಿ ಕೆಲ ಡೈಲಾಗ್ ಗಳನ್ನು ಹೇಳಿ ಕನ್ನಡತನ ಮೆರೆದಿದ್ದಾರೆ.ಈಗ ಚಿತ್ರದ ಕಥೆ ಹೇಳಿದ್ದರೂ ಎರಡು ತಾಸು ಸೀಟಿನಲ್ಲಿ ಕೂರುವಂತೆ ಮಾಡಿದ್ದಾರೆ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ. ಇಬ್ಬರು ಪ್ರೇಮಿಗಳ ನಡುವೆ (ನಾಣಿ, ಸಮಂತಾ) ಖಳನಾಯಕ (ಸುದೀಪ್) ಎಂಟ್ರಿ ಕೊಡುತ್ತಾರೆ. ಮೊದಲಿಗೆ ಮೈಂಡ್ ಗೇಮ್ ನಿಂದ ಆಟವಾಡುವ ಸುದೀಪ್, ನಂತರ ಹುಡುಗನನ್ನು ಕೊಲ್ಲುತ್ತಾನೆ. ಹುಡುಗ ನೊಣವಾಗಿ ಹುಟ್ಟಿಬಂದು ವಿಲನ್ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ. ಇದು ಚಿತ್ರದ ಸ್ಟೋರಿ.ಚಿತ್ರ ಆರಂಭವಾದ ೨೦ ನಿಮಿಷದಲ್ಲೇ ಪ್ರೇಮಿಗಳ ಪ್ರೇಮಕಥೆ ಅಂತ್ಯಗೊಳ್ಳುತ್ತದೆ. ಅದರ ನಡುವೆಯೂ ಸುದೀಪ್ ಬರುತ್ತಾರೆ. ಸುದೀಪ್ ನಾಯಕನನ್ನು ಕೊಂದ ನಂತರ ಚಿತ್ರ ಮತ್ತಷ್ಟು ಇಂಟರೆಸ್ಟಿಂಗ್ ಆಗಿ ಸಾಗುತ್ತದೆ. ನಾಯಕ ಸತ್ತ ನಂತರ ಆತನ ಆತ್ಮ ನೊಣದ ರೂಪದಲ್ಲಿ ಬಂದು ಸುದೀಪ್ ರನ್ನು ಇನ್ನಿಲ್ಲದಂತೆ ಕಾಡತೊಡಗುತ್ತದೆ. ಕೊನಗೆ ಸುದೀಪ್ ರನ್ನು ಕೊಂದು ಸೇಡು ತೀರಿಸಿಕೊಳ್ಳುತ್ತದೆ.

ನೊಣವನ್ನು ಇಟ್ಟುಕೊಂಡು ಇಂಥ ಅಪರೂಪದ ಚಿತ್ರವನ್ನು ನಿರ್ಮಿಸಿದ ನಿರ್ದೇಶಕ ರಾಜಮೌಳಿ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಚಿತ್ರದ ಕಥೆ ಮೊದಲೇ ಗೊತ್ತಿದ್ದರೂ ಸೀಟಿನ ಎಡ್ಜ್ ನಲ್ಲಿ ಕೂರುವಂತೆ ಮಾಡಿದ್ದಾರೆ ನಿರ್ದೇಶಕರು.ಚಿತ್ರದಲ್ಲಿರುವ ಎರಡು ಹಾಡುಗಳು ಮನ ಮುಟ್ಟುವಂತಿದೆ. ಹಿನ್ನಲೆ ಸಂಗೀತದಲ್ಲಿ ಕೀರವಾಣಿ ಕೆಲಸ ಜೋರಾಗಿದೆ. ಸುದೀಪ್ ಮತ್ತು ನೊಣ ಚಿತ್ರದ ಹೀರೋಗಳೆಂದರೆ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಸುದೀಪ್ ಮತ್ತು ನೊಣ ಚಿತ್ರವನ್ನು ಆವರಿಸಿಕೊಂಡಿದ್ದಾರೆ.ನಾಯಕ ನಾಣಿ ಪಾತ್ರ ಚಿಕ್ಕದಾದರೂ ಚೊಕ್ಕದಾಗಿದೆ. ನಾಯಕಿ ಸುಮಂತಾ ನಟನೆ ತಂಪಾದ ಗಾಳಿಯಂತೆ ಮುದ ನೀಡುತ್ತದೆ. ಸುಮಾರು ಮೂವತ್ತು ಕೋಟಿ ರೂಪಾಯಿ ವೆಚ್ಚದ ಈ ಚಿತ್ರದ ಗ್ರಾಫಿಕ್ಸ್ ಕೆಲಸವೂ ಮಿಳಿತ ಗೊಂಡಿರುವುದರಿಂದ ಚಿತ್ರ ಅದ್ದೂರಿಯಾಗಿದೆ.ಸುದೀಪ್ ಒನ್ ಮ್ಯಾನ್ ಶೋ ಎಂದು ಹೇಳಬಹುದಾದ ಚಿತ್ರದಲ್ಲಿನ ಸುದೀಪ್ ನಟನೆ ಸೂಪರ್. ಚಿತ್ರದಲ್ಲಿನ ಅವರ ನೋಟ, ಡೈಲಾಗ್ ಡೆಲಿವರಿ, ಬಾಡಿ ಲಾಂಗ್ವೇಜ್ ಮೂಲಕ ಅವರ ಅಮೋಘ ಅಭಿನಯವನ್ನು ನೋಡಿದರೆ,  ಆ ಜಾಗದಲ್ಲಿ ಸುದೀಪ್ ಹೊರತಾಗಿ ಬೇರೊಬ್ಬರನ್ನು ಕಲ್ಪಿಸಿ ಕೊಳ್ಳಲಾಗದಷ್ಟು ಅವರು ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸುದೀಪ್ ಈ ಪಾತ್ರದಲ್ಲಿ ನಟಿಸಲು ಒಪ್ಪದಿದ್ದರೆ ಚಿತ್ರವನ್ನೇ ಕೈಬಿಡಲು ನಿರ್ಧರಿಸಿದ್ದ ರಾಜಮೌಳಿ ಅವರ ಬೆಟ್ಟದಷ್ಟು ನಿರೀಕ್ಷೆಗೆ ಮೀರಿ ಅಭಿನಯಿಸಿದ ಸುದೀಪ್ ನಿರ್ದೇಶಕರಿಗೆ ಒಳ್ಳೆ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಬಹಳಷ್ಟು ದೃಶ್ಯಗಳಲ್ಲಿ ಸುದೀಪ್ ಕನ್ನಡದಲ್ಲೇ ಗೊಣಗುವ ದೃಶ್ಯಗಳಿವೆ.

No comments:

Post a Comment