Tuesday, 13 December 2011

ರೆಡ್ಡಿ ಬಗ್ಗೆ ರವಿ ಬೆಳಗೆರೆ ಏನು ಹೇಳ್ತಾರೆ?

 
  • ರವಿ ಬೆಳಗೆರೆ
ಸುದ್ದಿಗೆ ಪ್ರವಾಹ. ಕರ್ನಾಟಕ ಮತ್ತು ಇಡೀ ದೇಶ ಒಟ್ಟೊಟ್ಟಿಗೆ ಸುದ್ದಿಯ ಪ್ರವಾಹ ಎದುರಿಸುತ್ತಿವೆ. ಸ್ಪೆಕ್ಟ್ರಂ ಹಗರಣದಲ್ಲಿ ರಾಜಾ ಹಾಗೂ ಕನ್ನಿಮೋಳಿ ಆಟ ಕೆಡಿಸಿದ ಆಪಾದನೆಯ ಮೇಲೆ ಕಲ್ಮಾಡಿ , ಗಪ್ಪನೆ ಕೋರ್ಟಿನ ಕೈಗೆ ಸಿಕ್ಕು ಜೈಲು ಪಾಲಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಮತ್ತು ಆತನ ಮಗ, ಜೈಲಿನೆಡೆ ಮುಖ ಮಾಡಿಕೊಂಡೇ ನಿಂತಿರುವ ಯಡಿಯೂರಪ್ಪ, ಆತನ ಮಕ್ಕಳು, ಎಚ್. ಡಿ. ಕುಮಾರಸ್ವಾಮಿ ದಂಪತಿಗಳು, ಓಟಿಗಾಗಿ ನೋಟು ಪ್ರಕರಣದಲ್ಲಿ ಸಿಕ್ಕಿಬಿದ್ದ ಅಮರ್ ಸಿಂಗ್, ಶ್ರೀರಾಮುಲು ರಾಜಿನಾಮೆ ಪ್ರಹಸನ, ದಿಲ್ಲಿ ಹೈಕೋರ್ಟಿನ ಹತ್ಯಾಕಾಂಡ ಮತ್ತು ಜನಾರ್ದನ ರೆಡ್ಡಿಯ ಬಂಧನ...
ಒಂದೆರಡೇ? ಜನಾರ್ದನ ರೆಡ್ಡಿಯನ್ನು ಸಿಬಿಐ ಪೊಲೀಸರು ಹೆಚ್ಚಿನ fuss ಮಾಡದೇ ಬಳ್ಳಾರಿಯ ಕುಟೀರದಿಂದ ಎತ್ತಿಕೊಂಡು ಹೋಗುವುದರೊಂದಿಗೆ ಒಂದು ಆಟ ಮುಗಿದಿದೆ. ಖೇಲ್ ಖತಂ! ಆದರೆ ಇನ್ನೊಂದು ಆಟ ಆರಂಭವಾಗಿದೆ. ಬಳ್ಳಾರಿಯನ್ನು ಅಕ್ಷರಶಃ ಚಕ್ರಬಿಂಬ ಕೋಟೆಯಂತಾಗಿಸಿಕೊಂಡು ಆಳಿದವನು ಜನಾರ್ದನ ರೆಡ್ಡಿ. ಹಿಂದಾದರೂ ಅದು ಒಬ್ಬರಲ್ಲ ಒಬ್ಬರ ಕಪಿಮುಷ್ಟಿಯಲ್ಲಿದ್ದ ಕೋಟೆಯೇ. ಅಲ್ಲಿ ಪ್ರಜಾಪ್ರಭುತ್ವವೆಂಬುದು ಇವತ್ತಿಗೂ ಅಪರಿಚಿತ. ಹಿಂದಿದ್ದ ಪಾಳೇಗಾರರು ಮನುಷ್ಯನ ರುಂಡ ಕಡಿಯುತ್ತಿದ್ದರು. ಈಗಿನವರು ಬೆಟ್ಟ ಗುಡ್ಡಗಳ ರುಂಡ ಕಡಿದು, ಒಡಲು ಬಗೆದು, ಧೂಳು ಚಿಮ್ಮಿ, ದುಡ್ಡು ಚೆಲ್ಲಿ ಚಕ್ರಬಿಂಬನ ಕೋಟೆ ಆಳುತ್ತಾರೆ. ಇಷ್ಟೇ ವ್ಯತ್ಯಾಸ.
"ನೀವು ಮುಂಡ್ಳೂರು ಧಣಿಗಳನ್ನು ರಾಜಕೀಯವಾಗಿ ಹಣಿಯುವುದಕ್ಕಾಗಿ ರೆಡ್ಡಿಗಳಿಗೆ ಒಂದು ಸೋಷಿಯಲ್ acceptance ಕೊಡಿಸಿದಿರಿ. ಅದು ನೀವು ಮಾಡಿದ ತಪ್ಪು" ಎಂಬುದಾಗಿ ನನ್ನ ಓದುಗ ಮಿತ್ರ ಆದಿತ್ಯ ಭಾರದ್ವಾಜ್ ಆರೋಪಿಸುತ್ತಾರೆ. ಇದು ನನ್ನ ಮೇಲಿರುವ ಆಪಾದನೆ. ಮತ್ತು ಇದು ನಿಜವೂ ಹೌದು. ಮುಂಡ್ಳೂರು ಮನೆತನದವರ ಆಳ್ವಿಕೆಯ ವಿರುದ್ಧ ನಾನು 1983ರಿಂದಲೇ ದನಿಯೆತ್ತಿದವನು. ಅಲ್ಲಿ ಬೀದಿಗಳಲ್ಲಿ ನಿಂತು ಹೋರಾಡಿದ್ದೇನೆ. ಪೊಲೀಸರು, ಲಾಕಪ್ಪು, ನ್ಯಾಯಾಲಯ ಎಲ್ಲದರಿಂದ ಶಿಕ್ಷೆಯೂ ಆಗಿದೆ. ನೋಡನೋಡುತ್ತ ನನ್ನ ಕಣ್ಣೆದುರಿನಲ್ಲೇ ಅನೇಕ ಮಿತ್ರರು, ಪರಿಚಿತರು, ಕಡೆಗೆ ನನ್ನ ವಿದ್ಯಾರ್ಥಿಯೂ ಕೊಲೆಯಾಗಿ ಹೋದ. ನನ್ನೊಂದಿಗೆ ಹತ್ಯೆ ರಾಜಕೀಯದ ವಿರುದ್ಧ ಹೋರಾಡುತ್ತಿದ್ಧ ಕೆಲವರ ಕ್ರಮೇಣ ಮುಂಡ್ಳೂರು ಪಾಲಿಟಿಕ್ಸೊಳಕ್ಕೇ ಲೀನವಾಗಿ ಬಿಟ್ಟರು. ಅವರ ಪೈಕಿ ಪ್ರಮುಖನಾದ ಯರ್ರಿಸ್ವಾಮಿ ತೀರಿಕೊಂಡೂ ಬಿಟ್ಟ. ತೋಳ್ಬಲದಲ್ಲಿ ನಮಗೆ ಸಮರಿಲ್ಲ ಎಂದು ಬೀಗುತ್ತಿದ್ದ ಧಣಿಗಳ ಜೊತೆಗೆ ಸಂಡೂರಿನ ಮಹಾ ಕುಬೇರ ಅನಿಲ್ ಲಾಡ್ ಸೇರಿಕೊಂಡು ಬಿಟ್ಟ.
ಆಗಲೇ ನಾನು ದಿಗಿಲಿಗೆ ಬಿದ್ದು ಬಳ್ಳಾರಿಗೆ ಹೋದದ್ದು. ಎಂದೂ ಒಬ್ಬರ ಪರವಾಗಿ, ಒಂದು ಪಕ್ಷದ ಪರವಾಗಿ ಓಟು ಕೇಳದಿದ್ದವನು 'ಬಳ್ಳಾರಿಯಲ್ಲಿ ಅನಿಲ್ ಲಾಡ್ ನನ್ನು ಸೋಲಿಸಿ' ಅಂತ ಪ್ರಚಾರ ಮಾಡಿದೆ. ಆಗ ಸೋಮಶೇಖರ ರೆಡ್ಡಿ ಗೆದ್ದು ಬಂದ. ನಾನೊಬ್ಬನೇ ಅಲ್ಲ; ಹತ್ಯಾ ರಾಜಕೀಯದ ವಿರುದ್ಧ ಬೇಸತ್ತ ಬಳ್ಳಾರಿಯ ಸಮಸ್ತರೂ ರೆಡ್ಡಿಗಳು ಗೆಲ್ಲಲಿ ಎಂದು ಬಯಸಿದ್ದರು. ನಿಮಗೆ ಗೊತ್ತಿರಲಿ, ಇದೇ ಶ್ರೀರಾಮುಲು ಮತ್ತು ರೆಡ್ಡಿ ಸಹೋದರರು ಬೈಕುಗಳಲ್ಲಿ ಹೋಗಿ ಆವತ್ತಿನದವತ್ತಿನ ಖರ್ಚಿಗಾಗಿ ಬಳ್ಳಾರಿಯಲ್ಲಿ ಕೆಲವು ಮಿತ್ರರಿಂದ ಸಾವಿರ-ಎರಡು ಸಾವಿರ ರೂಪಾಯಿಗಳ ಕೈಗಡ ತಂದುಕೊಳ್ಳುತ್ತಿದ್ದರು. ಅದು ನಿಜಕ್ಕೂ ಬದಲಾಗಿ ಒಂದೇ ಸಲಕ್ಕೆ ಮೈನಿಂಗ್ ಮತ್ತು ಅಧಿಕಾರ ರೆಡ್ಡಿಗಳ ಕೈಸೇರಿದ್ದು ಇಡೀ ನಕಾಶೇಯನ್ನೇ ಬದಲಿಸಿಬಿಟ್ಟಿತು. ಅನಿಲ್ ಲಾಡ್ ನಂಥ ಕೆಲವೇ ಕುಬೇರರ ಕೈಲಿದ್ದ ತಿಜೋರಿಯ ಬೀಗದ ಕೈ ರೆಡ್ಡಿಯ ಕೈಗೆ ಸಿಕ್ಕು ಬಿಟ್ಟಿತು. 1999 ಸುಮಾರಿನಲ್ಲಿ ಸಿಕ್ಕ ತಿಜೋರಿಯ ಬೀಗ ಜನಾರ್ದನ ರೆಡ್ಡಿಯನ್ನು 2011 ಒಂಬತ್ತನೇ ತಿಂಗಳ ಹೊತ್ತಿಗೆ ಹೈದಾರಾಬಾದಿನ ಚಂಚಲಗೂಡು ಬಂಧೀಖಾನೆಯಲ್ಲಿ ಕೂಡಿಸಿ, ಹೊರಗಿನಿಂದ ಕೀಲಿ ಹಾಕಿಕೊಂಡಿದೆ. ಇನ್ನು ಹೊರಬರುವುದು ಯಾವಾಗಲೋ?
 ಕೋಟಿ ತಿಂದವರೇ ರೆಡ್ಡಿಯನ್ನು ಹೂತು ಹಾಕಿದರು
ಸಿಬಿಐ ಎಂಬುದು ಕೆಲವು ಅಪರೂಪದ ಬುದ್ದಿವಂತರ, ಹಣಕಾಸಿನ ವಿಚಾರದಲ್ಲಿ ನಿಷ್ಠಾವಂತರಾದ ಅಧಿಕಾರಿಗಳನ್ನು ಹೊಂದಿರುವ ಅತ್ಯಂತ ಚುರುಕಾದ ಸಂಸ್ಥೆ. ಒಂದು ರೇಡ್ ಮಾಡಿದರೆ ಕನಿಷ್ಠ ಮುನ್ನೂರು ಜನರನ್ನು ಅದಕ್ಕಾಗಿ ಕಣಕ್ಕಿಳಿಸುವ, ಚಿಕ್ಕದೊಂದು ಕಲ್ಲನ್ನೂ ತಿರುಗಿಸದೇ ಬಿಡದ, ಎಲ್ಲಿಂದ ಬೇಕಾದರೂ ಎವಿಡೆನ್ಸು ಕಲೆಹಾಕಬಲ್ಲ, ಯಾವ ಆಳವನ್ನೂ ಅಗೆದು ತಲಾಷು ಮಾಡಬಲ್ಲ ಸಮರ್ಥ ಸಂಘಟನೆ. ಅಂಥ ಸಂಸ್ಥೆಯೊಂದಿಗೆ ಜನಾರ್ಧನ ರೆಡ್ಡಿಯೇ ಮೊದಲಬಾರಿಗೆ ಚಲಗಾಟ ಆರಂಭಸಿದ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ನೂರೈವತ್ತು ಕೋಟಿ ಗಣಿ ಕಪ್ಪದ ಆರಂಭದೊಂದಿಗೇ ರೆಡ್ಡಿ ಸೋದರರ ಅಸಲಿ ಚಲಗಾಟ ಆರಂಭವಾಯಿತು. ರೆಡ್ಡಿಗಳಿಂದ ಕೆಲಸ ಮಾಡಿಸಿದ್ದು, ಅಂದು ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ. ಇಪ್ಪತ್ತು ತಿಂಗಳನಂತರ ಅಧಿಕಾರ ಬಿಟ್ಟುಕೊಡದೆ ಬಹುದೊಡ್ಡ ರಾಜಕೀಯ ತಪ್ಪು ಮಾಡಿದ ಕುಮಾರಸ್ವಾಮಿ ಕೈಲಿ ಕೆಲಸ ಮಾಡಿಸಿದ್ದು ದೇವೇಗೌಡರು.ಎಂಥ ಪರಿಸ್ಥಿತಿ ನಿರ್ಮಾಣವಾಯಿತೆಂದರೆ, ರಾಜ್ಯದ ಇಡೀ ಲಿಂಗಾಯತ ಸಮೂಹ ಬಿಜಿಪಿಗೆ ಅಧಿಕಾರ ಕೈಯೆತ್ತಿ ಕೊಡಲು ಸಿದ್ಧವಾಗಿತ್ತು. ಧಾರಾಳವಾಗಿ ದುಡ್ಡು ಚೆಲ್ಲಲು ರೆಡ್ಡಿಗಳು ಸಿದ್ಧವಾಗಿದ್ದರು. ಅವರಿಂದ ಸಾವಿರಾರು ಕೋಟಿ ತಂದುಕೊಂಡು ಸಿಂಹಾಸನವೇರಲು ಯಡಿಯೂರಪ್ಪ ತಹತಹಿಸುತ್ತಿದ್ದ. ಅದೆಲ್ಲದರ ಅಂತಿಮ ಪರಿಣಾಮವೆಂದರೆ-ಯಡಿಯೂರಪ್ಪನಿಗೆ ಕುರ್ಚಿ, ಕುಮಾರಸ್ವಾಮಿಗೆ ಕಸದ ಬುಟ್ಟಿ, ಕಾಂಗ್ರೆಸ್ಸಿಗೆ ದೈನೇಸಿ ಸ್ಥಿತಿ ಮತ್ತು ರೆಡ್ಡಿಗೆ ಕುಬೇರನ ತಿಜೋರಿಯ ಕೀಲಿ ಕೈ ಸಂದಾಯವಾದವು. ಬಳ್ಳಾರಿ ಜಿಲ್ಲೆಯನ್ನು ತುಂಡು ಗುತ್ತಿಗೆ ಆಧಾರದ ಮೇಲೆ ಜನಾರ್ದನ ರೆಡ್ಡಿಯ ಕೈಗೆ ಬಿಟ್ಟು ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅದರಿಂದ ಕೋಟ್ಯಾಂತರ ರೂಪಾಯಿ ಗೋರಿಕೊಂಡ. ಅಷ್ಟೇ ಅಲ್ಲ; ಆತ ರೆಡ್ಡಿಗಳಿಂದ ಹೊಸ ರಾಜಕೀಯ ಪಾಠ ಕಲಿತುಕೊಂಡ. ಪಾಠದ ಹೆಸರೇ ದುಡ್ಡು. ದುಡ್ಡಿದ್ದರೆ ಮಾತ್ರ ರಾಜಕಾರಣ ಮಾಡಬಹುದು ಮತ್ತು ದುಡ್ಡೊಂದಿದ್ದರೆ ಏನು ಬೇಕಾದರೂ ಮಾಡಬಹುದು! ಹಾಗಂತ ರೆಡ್ಡಿಗಳೇ ತೋರಿಸಿ ಕೊಟ್ಟಿದ್ದರು.
ತಮಾಷೆ ಕೇಳಿ : ಇವತ್ತು ಲೋಕಾಯುಕ್ತರು ಯು.ವಿ.ಸಿಂಗ್ ಅಥವಾ ಸಿ.ಬಿ. ಅಧಿಕಾರಿಗಳು ಏನೇನು ಸಾಕ್ಷ್ಯ ಸಂಗ್ರಹಿಸಿದ್ದೇವೆ ಅಂತ ಹೇಳಿಕೊಳ್ಳುತ್ತಿದ್ದಾರೋ, ಅವೆಲ್ಲವನ್ನೂ ಮೊದಲಬಾರಿಗೆ ಸಂಪಾದಿಸಿದ್ದು ಇನ್ ಕಮ್ ಟ್ಯಾಕ್ಸ್ ಇಂಟಲಿಜೆನ್ಸ್ ವಿಭಾಗದ ಒಬ್ಬ ನಿಸ್ಪೃಹ ಅಧಿಕಾರಿ ಗುರುಪ್ರಸಾದ್ ಎಂಬವರು. ರೆಡ್ಡಿ ಮತ್ತು ಅವರ ಆಸುಪಾಸಿನವರ ವಿರುದ್ಧ ತನಕ ನಡೆಯುತ್ತಿರುವ ತನಿಖೆಯ ಬೇರುಗಳಿರುವುದೇ ಟ್ಯಾಕ್ಸ್ ಅಧಿಕಾರಿ ಗುರುಪ್ರಸಾದ್ ನಡೆಸಿದ ದಾಳಿ ಮತ್ತು ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ. ಜನಾರ್ದನ ರೆಡ್ಡಿಯನ್ನು ಹಣಿಯಲಿಕ್ಕಾಗಿ ಸಲೀಸಾಗಿ ಸಿಕ್ಕಿರುವ ಎರಡು ಆಯುಧಗಳೆಂದರೆ ರೆಡ್ಡಿಯ ಆಪ್ತ ಸಿಬ್ಬಂದಿಯವನೇ ಆದ ಅಲೀಖಾನ್ ಮತ್ತು ಹೊಸಪೇಟೆಯ ಪರಮ ಕುಖ್ಯಾತ ಟ್ರಾನ್ಸ್ ಪೋರ್ಟರ್ ಖಾರಪುಡಿ ಮಹೇಶ. ಇವರಿಬ್ಬರವೂ ಕಂತೆ ಕಂತೆ ದಾಖಲೆಗಳು, ಹಣದ ವಹಿವಾಟಿನ ವಿವರಗಳು ಸಿಕ್ಕುಬಿದ್ದಿವೆ. ಇವರಿಗಿಂತ ದೊಡ್ಡಮಟ್ಟದಲ್ಲಿ ಗಾಲಿ ಜನಾರ್ದನ ರೆಡ್ಡಿಯ ವಿರುದ್ಧ ಸಾಕ್ಷ್ಯ ದೊರಕಿರುವುದು ಕೂಡ್ಲಗಿಯ ಶಾಸಕ ಗುಮ್ಮನೂರು ನಾಗೇಂದ್ರನ ಬ್ಯಾಂಕ್ ವಹಿವಾಟಿನಲ್ಲಿ. ಕೊನೆಯದಾಗಿ ಜನಾರ್ದನ ರೆಡ್ಡಿಯನ್ನು ಸಿಕ್ಕಿ ಹಾಕಿಸಬಲ್ಲ ಹುಡುಗನೆಂದರೆ, ಕಂಪ್ಲಿಯ ಶಾಸಕ ಸುರೇಶ್ ಬಾಬು. ಬೆರಳೆಣಿಕೆಯಷ್ಟೇ ಜನರಿರುವ ಒಂದು ಪಟಾಲಂ ಜನಾರ್ದನ ರೆಡ್ಡಿಯನ್ನು ಕಾನೂನಿನ ಚಕ್ರಸುಳಿಗೆ ಸಿಲುಕಿಸಿ ಮುಳುಗಿಸಲಿದೆ.ನಿಮಗೆ ಆಶ್ಚರ್ಯವೆನ್ನಿಸಬಹುದು. ಗಣಿಗಾರಿಕೆಯ ವ್ಯವಹಾರದಲ್ಲಿ ಜನಾರ್ದನ ರೆಡ್ಡಿ ತುಂಬ ಹಿಂದೆಯೇ ತನ್ನ ಸೋದರರಾದ ಸೋಮಶೇಖರ ರೆಡ್ಡಿ ಹಾಗೂ ಕರುಣಾಕರ ರೆಡ್ಡಿಯನ್ನು ದೂರವಿರಿಸಿದ್ದ. ಸೋದರರು ಅಕ್ಷರಶಃ ಕುಟುಂಬದ ಆಸ್ತಿ ಪಾಲುಮಾಡಿಕೊಂಡು ವ್ಯವಹಾರಿಕವಾಗಿ ದೂರವಾಗಿದ್ದಾರೆ. ರಾಜಕೀಯದ ವಿಷಯಕ್ಕೆ ಬಂದರೆ ಶ್ರೀರಾಮುಲುವೂ ಸೇರಿದಂತೆ ಎಲ್ಲರೂ ಬಳ್ಳಾರಿ ಬ್ರದರ್ಸ್ ಅಥವಾ ರೆಡ್ಡಿ ಬ್ರದರ್ಸ್ ಅಂತಲೇ ಗುರುತಿಸಲ್ಪಡುತ್ತಾರೆ. ಮಾನಸಿಕವಾಗಿ ಅವರು ಒಟ್ಟಿಗಿದ್ದಾರೆಯೇ ಗೊತ್ತಿಲ್ಲ. ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ ಎಂಬುದಂತೂ ನಿಜ.
 ರೆಡ್ಡಿ ಎಲ್ಲರನ್ನೂ ಎಳೆದುಕೊಂಡೇ ಹಳ್ಳಕ್ಕೆ ಬಿದ್ದ!
ಇಂಥದೊಂದು ಕುಬೇರ ಮೂಲೆ ಹಿಡಿದು ಕುಳಿತ ಜನಾರ್ದನ ರೆಡ್ಡಿಯಿಂದ ಕಾಲಕಾಲಕ್ಕೆ ಸಾವಿರಾರು ಕೋಟಿ ರೂಪಾಯಿ ಪಡೆದ ಯಡಿಯೂರಪ್ಪ ಇನ್ನೊಂದೆಡೆ, ಮುಖ್ಯಮಂತ್ರಿಯಾಗಿ ಕುಳಿತು ತಮ್ಮ ವರಮಾನಕ್ಕಾಗಿ ಸಾಕಷ್ಟು ದಾರಿ ಮಾಡಿಕೊಂಡಿದ್ದರು. ಅವರು ಮಕ್ಕಳು ಆಸೆಗೆ ಬಿದ್ದು ಅವಸರಗೇಡಿಗಳಾದರು. ಅದೇ ಗಣಿ ದುಕಾನದೊಳಕ್ಕೆ ಕಳ್ಳ ಕೈ ಇರಿಸಿ ಜಿಂದಾಲ್ ಸಂಸ್ಥೆಯ ಬಹುದೊಡ್ಡ ಕಳ್ಳರಿಂದ ನಲವತ್ತು ಕೋಟಿ ರೂಪಾಯಿ ಹರಕೊಂಡು ತಿಂದು ಬಿಟ್ಟರು. ಅದೇ ಪ್ರೇರಣಾ ಟ್ರಸ್ಟ್ ಮಾನಗೇಡಿ ಹಗರಣ. ಪ್ರೇರಣಾ ಟ್ರಸ್ಟ್ ಹಗರಣವನ್ನು ರಹಸ್ಯವಾಗಿ ಬಯಲು ಮಾಡಿದ್ದೇ ಜನಾರೆಡ್ಡಿ!ಅದೇ ತರಹದ ಕೆಲಸ ಮಾಡಿ ಕುಮಾರಸ್ವಾಮಿ ಸಿಕ್ಕು ಬಿದ್ದಿರುವುದು ವಿನೋದ್ ಗೋಯಲ್ 'ಜಂತಕಲ್ ಮೈನ್ಸ್ ಪರವಾನಗಿ' ಹಗರಣದಲ್ಲಿ. ಅಕ್ರಮ ಗಣಿಗಾರಿಕೆ ಹಾಗೂ ಅದಿರು ಕಳ್ಳ ಸಾಗಾಣಿಕೆ ಹಗರಣದಲ್ಲಿ ಜನಾರ್ದನ ರೆಡ್ಡಿ ಜೈಲು ಸೇರಿರುವುದು ಹೌದಾದರೆ, ಆತನ ಪಕ್ಕದ ಬ್ಯಾರಕ್ ಗಳಲ್ಲಿ ಸಾಲುಸಾಲಾಗಿ ಯಡಿಯೂರಪ್ಪ, ಅನಿಲ್ ಲಾಡ್, ಕುಮಾರಸ್ವಾಮಿ, ವಿಜಯೇಂದ್ರ, ರಾಘವೇಂದ್ರ, ಗುಮ್ಮನೂರು ನಾಗೇಂದ್ರ... ಹೀಗೆ ಅನೇಕರು ಹೋಗಿ ಕೂಡುತ್ತಾರೆ. ಕೂಡ ಬೇಕು.ಗಣಿ ದುಡ್ಡು ಎಂಬುದು ಇಡೀ ರಾಜ್ಯ ರಾಜಕಾರಣವನ್ನೇ ಬದಲಿಸಿತು, ದಿಕ್ಕು ತಪ್ಪಿಸಿತು. ಜನಾರ್ದನ ರೆಡ್ಡಿಯ 'ಸಿರಿವಂತಿಕೆ'ಯಲ್ಲಿ ಪಾಲು ತಿನ್ನಲು ಹೋಗಿ ಅನೇಕರು ಸಿಕ್ಕು ಬಿದ್ದರು. ಗಾಲಿ ಜನಾರ್ದನ ರೆಡ್ಡಿ ಎಲ್ಲರನ್ನೂ ಎಳೆದುಕೊಂಡೇ ಹಳ್ಳಕ್ಕೆ ಬಿದ್ದ. ಇವತ್ತು ಬಳ್ಳಾರಿ ಜಿಲ್ಲೆಯ ಗಣಿ ಮಾಲೀಕರು ಜನಾರ್ದನ ರೆಡ್ಡಿಯನ್ನು ಎಲ್ಲವುದಕ್ಕೂ ಕಾರಣ ಎಂದು ದೂಷಿಸಿ ನಿಟ್ಟುಸಿರಾಗುತ್ತಿದ್ದಾರೆ. ಆತನ ಶಿಷ್ಯರಾದ ಗುಮ್ಮನೂರು ನಾಗೇಂದ್ರ, ಸುರೇಶ್ ಬಾಬು, ಅಲೀಖಾನ್, ಖಾರಪುಡಿ ಮಹೇಶರಂಥವರಿಂದಾಗಿ ಕೆಲವು ಅಮಾಯಕರ ಬಾಯಿಗೂ ಮೊಸರನ್ನ ಮೆತ್ತಿಕೊಂಡಿದೆ.

ರಾಜಕಾರಣ ಬಲ್ಲ ಎಲ್ಲರೂ ಅಂದುಕೊಂಡಿದ್ದೆಂದರೆ, ಸಿಬಿಐ ಎಂಬ ಸಶಕ್ತ ಖಡ್ಗವನ್ನು ಬಳಸುವ ಮೂಲಕ ಸೋನಿಯಾ ಗಾಂಧಿ ಮೊದಲು ಜಗನ್ ಮೋಹನ ರೆಡ್ಡಿಯನ್ನು ಹಣಿಯುತ್ತಾಳೆ, ನಂತರ ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿಯನ್ನು ಮುಟ್ಟುತ್ತಾರೆ. ಹಾಗಂತಲೇ ಬಹುಶಃ ಜನಾರ್ದನ ರೆಡ್ಡಿಯೂ ಅಂದುಕೊಂಡಿದ್ದಿರಬೇಕು. ಆದರೆ ಮೊದಲ ಬೀಸು ಆತನಿಗೇ ಬಿದ್ದಿದೆ. ಇದು ಮುಂದೆ ಜರುಗಲಿರುವ 'ಜಗನ್ ಪರಾಭವ' ಪರ್ವದ ಮುನ್ನುಡಿಯಷ್ಟೇ.ಇನ್ನು ರೆಡ್ಡಿ ತಂಡ ರಾಜಕೀಯವಾಗಿ, ನೈತಿಕವಾಗಿ, ಕಾನೂನು ರೀತ್ಯಾ ಬಳ್ಳಾರಿಯಲ್ಲಿ ಚೇತರಿಸಿಕೊಳ್ಳುವುದು ಕಷ್ಟವಿದೆ. ಸದ್ಯದಲ್ಲೇ ಚುನಾವಣಾ ನಿಯಮಗಳೂ ಬಿಗಿಯಾಗಿ ಬಿಟ್ಟರೆ ಅಲ್ಲಿಗೆ ಹಣ ಚೆಲ್ಲುವುದೂ ನಿಂತು ಹೋಗಿ ಗಣಿ ಸಾಮ್ರಾಜ್ಯ ಧೂಳು ಪಾಲಾಗಲಿದೆ. ಇಂದು ನಾಳೆಯೊಳಗಾಗಿ ಜನಾರೆಡ್ಡಿ ಜಾಮೀನು ಪಡೆದು ಹೊರಬರುವುದೂ ಅನುಮಾನವೇ. ಇನ್ನು ಬಳ್ಳಾರಿಯಲ್ಲಿ ಹಳೆಯ ಹಂತಕರನ್ನೂ, ಹೊಸ ಕಳ್ಳರನ್ನೂ ವಿರೋಧಿಸುವಂಥ ಮೂರನೆಯ ಶಕ್ತಿಯೊಂದು ಹೊರ ಹೊಮ್ಮಬೇಕಿದೆ. ಅದು ಸಾಧ್ಯವೇ? [ಸ್ನೇಹಸೇತು : ಹಾಯ್ ಬೆಂಗಳೂರು]

No comments:

Post a Comment