Sunday, 10 April 2011

ಶೇವಿಂಗ್

ಪುರುಷರೇ , ನಿಮಗೆ ಶೇವಿಂಗ್ ಮಾಡೋದು ಗೊತ್ತಾ?
ಶೇವಿಂಗ್ ಗೊತ್ತಾ ಎಂಬ ಈ ಪ್ರಶ್ನೆ ಕೇಳಿದರಂತೂ ಗೊಳ್ಳನೆ ನಕ್ಕಾರು. ಮೀನಿಗೆ ಈಜು ಕಲಿಸಬೇಕೇ ಹೇಳಿ, ಹಾಗೆಯೇ ಪುರುಷರಿಗೂ ಶೇವಿಂಗ್ ಕಲಿಸಬೇಕಾಗಿಲ್ಲ ಬಿಡಿ ಎಂದು ಉಡಾಫೆ ಮಾಡಿಬಿಡಬಹುದು. ಆದರೆ ಇಲ್ಲಿ ಹೀಗೆ ಪ್ರಶ್ನೆ ಕೇಳಲೂ ಕೂಡಾ ಕಾರಣವಿದೆ.
ಬ್ಯೂಟಿ ಅರ್ಥಾತ್ ಸೌಂದರ್ಯ ಅನ್ನೋದು ಕೇವಲ ಸ್ತ್ರೀಯರ ಸೊತ್ತಲ್ಲ ಎಂಬುದು ಖಂಡಿತಾ ನಿಜ. ಪುರುಷರ ಸೌಂದರ್ಯಕ್ಕೂ ಅಷ್ಟೇ ಮಹತ್ವವಿದೆ. ಆದರೆ, ಸ್ತ್ರೀ ಹಾಗೂ ಸೌಂದರ್ಯ ಎರಡೂ ಶಬ್ದಗಳು ಒಂದಕ್ಕೊಂದು ಬೆಸೆದ ಸಮಾನಾರ್ಥಕ ಶಬ್ದಗಳೋ ಎಂಬಂತೆ ಮೇಳೈಸಿವೆ. ಹಾಗಾಗಿಯೋ ಏನೋ, ಬ್ಯೂಟಿ ಕಾಲಂಗಳು, ಜಾಹಿರಾತುಗಳು, ಲೇಖನಗಳು ಯಾವಾಗಲೂ ಸ್ತ್ರೀಯ ಜಗತ್ತಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಅದಕ್ಕಾಗಿ ಈ ಬಾರಿ ಈ ಕಾಲಂನಲ್ಲಿ ಪುರುಷರಿಗಾಗಿಯೇ ಸೌಂದರ್ಯ ಸಲಹೆಗಳು!
ಶೇವಿಂಗ್! ಇದು ಪುರುಷರ ದೊಡ್ಡ ಸಮಸ್ಯೆ. ಇದೇನು ಮಹಾ ಸಮಸ್ಯೆ ಎಂದು ನೀವು ಹೇಳಬಹುದು. ಆದರೆ ಶೇವ್ ಮಾಡುವುದಕ್ಕೂ ಒಂದು ಕ್ರಮವಿದೆ, ವಿಧಾನವಿದೆ. ಹಾಗೆ ನೋಡಿದರೆ ನೂರರಲ್ಲಿ ಶೇ.70ರಷ್ಟು ಪುರುಷರಿಗೆ ನಿಜವಾಗಿ ಶೇವ್ ಮಾಡುವ ವಿಧಾನವೇ ಗೊತ್ತಿರುವುದಿಲ್ಲ. ಮೀಸೆ, ಗಡ್ಡ ಮೂಡುವ ಹದಿಹರೆಯದಲ್ಲಂತೂ ಇದನ್ನು ಹೇಗೆ ಶೇವ್ ಮಾಡಲಿ ಎಂದೇ ಎಷ್ಟೋ ಹುಡುಗರು ಮುಜುಗರದಿಂದ ಪರದಾಡುತ್ತಿರುತ್ತಾರೆ  ಹೇಗ್ಹೇಗೋ ಗಡ್ಡ ಮೀಸೆಯನ್ನು ಬ್ಲೇಡಿನಲ್ಲಿ ತೆಗೆದು ಬಿಟ್ಟರೆ, ಕೂದಲು ಮತ್ತೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲ, ಹಲವರಿಗೆ ಶೇವ್ ಮಾಡಿದಲ್ಲಿ ಕೆಂಪು ಗುಳ್ಳೆಗಳೇಳಬಹುದು. ಬೆವರು ಸಾಲೆಯ ಮಾದರಿಯಲ್ಲಿ ಸಣ್ಣ ಕಜ್ಜಿಗಳು ಮೂಡಬಹುದು. ಇದು ಕೇವಲ ಗಡ್ಡ ಅಥವಾ ಮೀಸೆ ತೆಗೆದ ಜಾಗ ಮಾತ್ರವಲ್ಲ, ದೇಹದ ಇತರ ಕಡೆಗಳಲ್ಲಿಯೂ ಕಜ್ಜಿ ಮೂಡಲು ನಿಮ್ಮ ಶೇವಿಂಗ್ ಕ್ರಮ ಸರಿಯಾಗಿಲ್ಲದಿರುವುದೂ ಕಾರಣವಾಗಿರಬಹುದು ಎಂಬುದು ನಿಮಗೆ ಗೊತ್ತೇ?
ಹೌದು. ಅದಕ್ಕಾಗಿಯೇ ಕೆಲವೊಂದು ಸುಲಭವಾಗಿ ಅನುಸರಿಸಬಲ್ಲ ಶೇವಿಂಗ್ ಟಿಪ್ಸ್ ಇಲ್ಲಿದೆ.
ಶೇವ್ ಮಾಡುವ ಮೊದಲು:
ಮುಖವನ್ನು ಒದ್ದೆ ಮಾಡದೆ ಹಾಗೆಯೇ ಶೇವ್ ಮಾಡಿದರೆ ರೇಜರ್‌ನಿಂದ ನಿಮ್ಮ ಕೆನ್ನೆಯಲ್ಲಿ ಕೆಂಪು ಗುಳ್ಳೆಗಳು ಹಾಗೂ ಗೆರೆಗಳು ಮೂಡುತ್ತವೆ. ಹಾಗಾಗಿ ಶೇವ್ ಮಾಡುವ ಮೊದಲು ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಬಿಸಿ ನೀರಿನಿಂದ ಮೊದಲು ಒದ್ದೆ ಮಾಡುವುದರಿಂದ ಮುಖದ ಸೂಕ್ಷ್ಮರಂಧ್ರಗಳು ತೆರೆದುಕೊಳ್ಳುತ್ತದೆ. ಮೀಸೆ ಹಾಗೂ ಗಡ್ಡದ ಕೂದಲುಗಳು ಮೆತ್ತಗಾಗುತ್ತದೆ. ಹಾಗಾಗಿ ಶೇವ್ ಮಾಡಲು ಸುಲಭವಾಗುತ್ತದೆ. ಶೇವ್ ಮಾಡುವುದಕ್ಕಿಂತ ಕೊಂಚ ಮೊದಲು ಮಾಯ್‌ಶ್ಛರೈಸರನ್ನು ಶೇವ್ ಮಾಡಬೇಕಾದ ಜಾಗದಲ್ಲಿ ನಯವಾಗಿ ಹಚ್ಚುವುದೂ ಕೂಡಾ ಒಳ್ಳೆಯು. ಚಳಿಗಾಲದಲ್ಲಿ ಚರ್ಮ ಪೊರೆಗಳಂತೆ, ಹೊಟ್ಟು ಎದ್ದಂತೆ ಇರುವುದರಿಂದ ಹಾಗೂ ತುಂಬ ಒಣ ಇರುವುದರಿಂದ ಇಂಥ ಸಂದರ್ಭ ಶೇವ್ ಮಾಡುವಾಗ ಗಾಯಗಳಾಗುವುಗು ರಕ್ತ ಸೋರುವುದು ಆಗಬಹುದು. ಮಾಯ್‌ಶ್ಚರೈಸರ್ ಹಚ್ಚಿದರೆ ಗಾಯಗಳಾಗುವ ಸಾಧ್ಯತೆ ತುಂಬಾ ಕಡಿಮೆ.
-
ಶೇವ್ ಮಾಡುವ ಮೊದಲು ಮೆದುವಾದ ಶೇವಿಂಗ್ ಕ್ರೀಂ ಹಚ್ಚಿ. ಇದು ನಿಮ್ಮ ಶೇವಿಂಗನ್ನು ಸುಲಭವಾಗಿಸುತ್ತದೆ. ಶೇವಿಂಗ್ ಕ್ರೀಂ ಸಿಕ್ಕಸಿಕ್ಕವನ್ನೆಲ್ಲಾ ಆಯ್ದುಕೊಳ್ಳಬೇಡಿ. ಆಲ್ವಿರಾ ಇರುವಂಥ ಕ್ರೀಂ ಆಯ್ದುಕೊಳ್ಳಿ. ಇದು ಚರ್ಮಕ್ಕೆ ಹಿತವಾದ ಅನುಭವ ನೀಡುತ್ತದೆ.
-
ಶೇವಿಂಗ್ ಕ್ರೀಂ ಹಚ್ಚಿ ಲಗುಬಗೆಯಿಂದ ಶೇವ್ ಮಾಡಿ ಮುಗಿಸಬೇಡಿ. ಕ್ರೀಂ ಹಚ್ಚಿ ಕೆಲಕಾಲ ಮೆದುವಾಗಿ ಮಸಾಜ್ ಮಾಡಿ.
-
ತುಂಬಾ ನೊರೆ ಬರುವಂಥ ಜೆಲ್, ಕ್ರೀಂಗಳನ್ನು ಶೇವಿಂಗ್‌ಗಾಗಿ ಬಳಸಬೇಡಿ. ಮುಖ್ಯವಾಗಿ ಬೆನ್‌ಝೋಕೈನ್ ಅಥವಾ ಮೆಂಥಾಲ್ ಇರುವಂಥ ಕ್ರೀಂಗಳನ್ನು ಬಳಸಬೇಡಿ. ಇವು ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚಿಹಾಕುವುದಲ್ಲದೆ, ಚರ್ಮವನ್ನು ಒಣವಾಗಿಸುತ್ತದೆ.

ಶೇವ್ ಮಾಡುವ ಟಿಪ್ಸ್:

ಶೇವ್ ಮಾಡಿದ ನಂತರ:

-
ಶೇವ್ ಮಾಡಿದ ಮೇಲೆ ತುಂಪು ನೀರಿನಲ್ಲಿ ಮುಖ ಸ್ವಚ್ಛಗೊಳಿಸಿ.
-
ನಂತರ ಶೇವ್ ಮಾಡಿದ ಜಾಗಕ್ಕೆ ಸ್ಕಿನ್ ಟೋನರ್ ಹಚ್ಚಿ. ಇದು ನಿಮ್ಮ ಚರ್ಮ ರಂಧ್ರಗಳನ್ನು ಮುಚ್ಚಿಸಿ ಸುಸ್ಥಿತಿಯಲ್ಲಿಡುತ್ತದೆ. ತಾಜಾ ಆಗಿಸುತ್ತದೆ.
-
ನಂತರ ಮಾಯ್‌ಶ್ಚರೈಸಿಂಗ್ ಆಫ್ಟರ್ ಶೇವ್ ಕ್ರೀಮನ್ನು ಶೇವ್ ಮಾಡಿದ ಜಾಗಕ್ಕೆ ಹಚ್ಚಿ ಮೆತ್ತಗೆ ಮಸಾಜ್ ಮಾಡಿ. ಆಲ್ಕೋಹಾಲ್ ಕಂಟೆಂಟ್ ಇರುವ ಆಫ್ಟರ್ ಶೇವ್ ಕ್ರೀಮ್ ಒಳ್ಳೆಯದಲ್ಲ.
-
ಆಫ್ಟರ್ ಶೇವ್ ಕ್ರೀಂ ಹಚ್ಚುವ ಬದಲು ಮಾಯ್‌ಶ್ಚರೈಸರ್ ಕೂಡಾ ಬಳಸಬಹುದು.
-
ನಿಮ್ಮ ರೇಝರ್ ಹರಿತವಾಗಿದೆಯೇ ಎಂದು ಪರೀಕ್ಷಿಸಿ. ಹಳೆಯ ಬಾಗಿದ ಬ್ಲೇಡ್‌ಗಳನ್ನು ಬಳಸಬೇಡಿ.
-
ಅತ್ಯುತ್ತಮ ಕ್ಲೀನ್ ಶೇವ್‌ಗಾಗಿ ರೇಝರ್ ಆಯ್ಯೆಯೂ ಬಹುಮುಖ್ಯ. ಹಿಡಿ ಭಾರವಾಗಿರುವಂಥ ರೇಝರನ್ನು ಆಯ್ಕೆ ಮಾಡಿಕೊಳ್ಳಿ.
-
ಯಾವಾಗಲೂ ಮೊದಲು ಯಾವ ದಿಕ್ಕಿನಿಂದ ಕೂದಲು ಹುಟ್ಟಿದೆಯೋ ಅದೇ ದಿಕ್ಕಿನಿಂದ ಶೇವಿಂಗ್ ಮಾಡಿ. ಹೀಗೆ ಮಾಡಿದ ನಂತರ ಮತ್ತೆ ಸ್ವಲ್ಪ ಕ್ರೀಂ ಹಚ್ಚಿ ವಿರುದ್ಧ ದಿಕ್ಕಿನಿಂದ ಶೇವ್ ಮಾಡಿ. ಆಗ ಕ್ಲೀನ್ ಶೇವ್ ನಿಮ್ಮದಾಗುತ್ತದೆ.
-
ರೇಝರ್ ಮೇಲೆ ತುಂಬಾ ಒತ್ತಡ ಹಾಕಿ ಶೇವ್ ಮಾಡಬೇಡಿ. ಇದು ನಿಮ್ಮ ಚರ್ಮಕ್ಕೆ ಹಾನಿ ಮಾಡಬಹುದು.
-
ಆಗಾಗ ನಿಮ್ಮ ರೇಝರನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ.

No comments:

Post a Comment