Tuesday, 19 April 2011

ಮೂವತ್ತಾಯಿತೇ? ಮಧುಮೇಹ ಪರೀಕ್ಷೆ ಮಾಡಿಸ್ಕೊಳ್ಳಿ...

ಮೊದಲೆಲ್ಲಾ ಅರುವತ್ತಕ್ಕೇ ಅರಳು ಮರಳು ಅನ್ನುವಂತಹಾ ಪರಿಸ್ಥಿತಿಯೂ, ಅರುವತ್ತು ವರ್ಷ ದಾಟಿದರೆ ಒಂದಿಲ್ಲೊಂದು ವೃದ್ಧಾಪ್ಯದ ಕಾಯಿಲೆ ಅಂಟಿಕೊಳ್ಳಲು ಶುರು ಹಚ್ಚಿಕೊಳ್ಳುತ್ತದೆ ಎಂಬ ಪರಿಸ್ಥಿತಿ ಇತ್ತು. ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ. ವರುಷ ಮೂವತ್ತು ದಾಟಿತೋ, ಬೀಪಿ, ಶುಗರ್, ಬೊಜ್ಜು, ಹಾರ್ಟ್ ಪ್ರಾಬ್ಲಂ ಒಂದಿಲ್ಲೊಂದು ಮುತ್ತಿಕ್ಕಿಕೊಂಡು ಬಿಡಲಾರಂಭಿಸಿದೆ.
ಪ್ರಕೃತಿಯನ್ನು, ವಾತಾವರಣವನ್ನು ನಾವು ಅಷ್ಟರ ಮಟ್ಟಿಗೆ ಹಾಳು ಮಾಡಿಕೊಂಡಿದ್ದೇವೆ. ಹೀಗಾಗಿ ಇದ್ದುದರಲ್ಲೇ ಬದುಕಬೇಕಾದ ಅನಿವಾರ್ಯತೆ. ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ (ಐಡಿಎಫ್)ದ ವರದಿ ಪ್ರಕಾರ, ಭಾರತದಲ್ಲಿ ಮಧುಮೇಹ, ಸಕ್ಕರೆ ಕಾಯಿಲೆ, ಸಿಹಿಮೂತ್ರ ರೋಗ ಎಂದೆಲ್ಲಾ ಕರೆಯಲ್ಪಡುವ ಡಯಾಬಿಟೀಸ್‌ನಿಂದ ಬಳಲುತ್ತಿರುವವರ ಸಂಖ್ಯೆ 4.09 ಕೋಟಿ. ಇದು ಹೀಗೆಯೇ ಮುಂದುವರಿದರೆ, 2030ರ ವೇಳೆಗೆ ಜಗತ್ತಿನ ಐವರು ಮಧುಮೇಹಿಗಳಲ್ಲಿ ಒಬ್ಬ ಭಾರತೀಯ ಇರುವಷ್ಟರ ಮಟ್ಟಕ್ಕೆ ಮುಟ್ಟುತ್ತದೆಯಂತೆ!
ಹಾಗಿದ್ದರೆ, ಮಧುಮೇಹಕ್ಕೆ ಕಾರಣಗಳೇನು? ನಮ್ಮ ಬದಲಾಗಿರುವ ಜೀವನ ಶೈಲಿಯೇ? ಮಾನಸಿಕ ಒತ್ತಡವೇ? ನಮ್ಮ ಜೀನ್‌ಗಳೇ? ಈ ತೊಂದರೆ ಬಾರದಂತೆ, ಬಂದಿದ್ದನ್ನು ನಿಯಂತ್ರಿಸುವಂತೆ ಏನಾದರೂ ಉಪಾಯಗಳಿವೆಯೇ?
ಹೌದು, ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ನಮ್ಮ ಜೀವನ ಶೈಲಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಜೀವನ ಶೈಲಿಯಲ್ಲಿ ಮಧುಮೇಹಕ್ಕೆ ಪೂರಕವಾಗುವಂಥವುಗಳ ಬಗ್ಗೆ ಒಂದಿಷ್ಟು ಗಮನ ಹರಿಸೋಣ:
ಕೂತಲ್ಲೇ ಕೆಲಸ...
ಮುಖ್ಯವಾಗಿ, ಇದು ಕುಳಿತು ತಿನ್ನುವ ಕಾಲ. ಅಂದರೆ ಒಂದು ಬೆಳಿಗ್ಗೆ ಕಂಪ್ಯೂಟರ್ ಎದುರು ಕುಳಿತರೆ ಏಳೋದು ರಾತ್ರೀನೇ. ಬರೇ ಕೈಬೆರಳುಗಳಿಗೆ ಮಾತ್ರವೇ ಒಂದಿಷ್ಟು ವ್ಯಾಯಾಮ ದೊರೆತರೆ ಸಾಕೇ? ದೇಹವೂ ಒಂದಿಷ್ಟು ಅಲುಗಾಡಬೇಡವೇ? ಕುಳಿತುಕೊಂಡೇ ಮಾಡುವ ಕೆಲಸ ಇರುವವರಿಗೆ ವಾಕಿಂಗ್ ಅಥವಾ ಮೆಟ್ಟಿಲೇರುವುದು... ಇಂಥವೆಲ್ಲ ಬೇಕೇ ಬೇಕು. ಕುಳಿತೇ ಕೆಲಸ ಮಾಡುವವರು ಒಂದು ಗಂಟೆಗೊಮ್ಮೆಯಾದರೂ ಎದ್ದು ಅತ್ತಿತ್ತ ಹೋಗಿ, ನೀರು ಕುಡಿದು ಬಂದರೆ ಒಳಿತು. ಕೂತಲ್ಲೇ ಕೆಲಸ ಮಾಡುವುದು ಬೊಜ್ಜು ಹೆಚ್ಚಿಸಬಹುದು, ಇದರಿಂದ ಡಯಾಬಿಟೀಸ್ ಚಿಗಿತುಕೊಳ್ಳಲೂ ಕಾರಣವಾಗಬಹುದು.
ಒತ್ತಡ...
ಡೆಡ್‌ಲೈನುಗಳನ್ನು ಮೀಟ್ ಮಾಡುವ ಸಾಹಸ, ಮಾರಾಟದಲ್ಲಿ ಇಂತಿಷ್ಟು ಗುರಿ ಸಾಧಿಸಬೇಕೆಂಬ ಒತ್ತಡ, ಇಷ್ಟು ಗಂಟೆಯೊಳಗೆ ಇಷ್ಟು ಕೆಲಸ ಆಗಲೇಬೇಕೆಂಬ ನಿಯಮ... ಇದಲ್ಲದೆ, ಹೊರಗಿನಿಂದಲೂ ಬೆಲೆ ಏರಿಕೆ, ಸಾಂಸಾರಿಕ ಒತ್ತಡಗಳು... ಕಚೇರಿಯಲ್ಲಿಯೂ ನೆಮ್ಮದಿಯಿಲ್ಲ... ಇಂತಹಾ ಪರಿಸ್ಥಿತಿಯು ಮಾನಸಿಕ ಒತ್ತಡಕ್ಕೆ ಕಾರಣವಾಗಿ, ನೇರವಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಮಾತ್ರವಲ್ಲದೆ, ಡಯಾಬಿಟೀಸ್ ಹೆಚ್ಚಳಕ್ಕೂ ತನ್ನ ಕೊಡುಗೆ ನೀಡುತ್ತದೆ ಎನ್ನುತ್ತಾರೆ ತಜ್ಞರು.
ಜಂಕ್ ಫುಡ್ ಇಷ್ಟಾನೋ...
ನಗರೀಕರಣ ಹೆಚ್ಚಾದಂತೆ, ಯಾವುದೇ ಪೋಷಕಾಂಶಗಳಿಲ್ಲದ, ಜಂಕ್ ಆಹಾರಕ್ಕೆ ನಾವೆಲ್ಲಾ ಮೊರೆ ಹೋಗುತ್ತಿದ್ದೇವೆ. ನಾರಿನಂಶವಿರುವ ಗೋಧಿಯ ಬದಲು, ಅತ್ಯಲ್ಪ ಕಾರ್ಬೊಹೈಡ್ರೇಟ್ ಇರುವ ಮೈದಾ ಹಿಟ್ಟಿನ ಆಹಾರಕ್ಕೆ, ಪಾಸ್ತಾ, ಪಿಜ್ಜಾ, ನೂಡಲ್... ಏನೇನೋ ಕಂಡು ಕೇಳರಿಯದ ಪೋಷಕಾಂಶಗಳಿಲ್ಲದ ಆಹಾರಕ್ಕೆ ಬಲಿಯಾಗುತ್ತಿದ್ದೇವೆ. ನಾಲಿಗೆ ಚಪಲ ಬಿಡಬೇಕಲ್ಲ... ಅದೂ ಇರಲಿ, ನಮ್ಮ ಸಾಂಪ್ರದಾಯಿಕ ಆಹಾರಗಳೂ ಇರಲಿ. ಇಲ್ಲವಾದಲ್ಲಿ ಪರಿತಪಿಸಬೇಕಾಗಿರುವುದು ನಾವೇ ಅಲ್ಲವೇ?
ಒಂದು ವರದಿಯ ಪ್ರಕಾರ, ಪಾಶ್ಚಾತ್ಯರಿಗೆ ಹೋಲಿಸಿದರೆ ಮಧುಮೇಹಕ್ಕೆ ತುತ್ತಾಗುವ ಭಾರತೀಯರ ವಯಸ್ಸು ಅವರಿಗಿಂತ ಸುಮಾರು 10-20 ವರ್ಷ ಕಡಿಮೆ. ಅಂದರೆ ಯುವ ಪ್ರಾಯದಲ್ಲೇ ಇದು ಬಾಧಿಸುತ್ತದೆ. ಇದಕ್ಕೆ ಭಾರತೀಯ ಜೀವನ ಶೈಲಿ, ಆಹಾರ ಸೇವನಾ ಪದ್ಧತಿಯೂ ಪ್ರಮುಖ ಕಾರಣ.
ಹಾಗಿದ್ದರೆ ನಾವೇನು ಮಾಡಬಹುದು...
* ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಂಡು, ಡಯಾಬಿಟಿಸ್ ಇದೆಯೇ ಎಂದು ತಿಳಿದುಕೊಳ್ಳಬೇಕು. ಡಯಾಬಿಟೀಸ್ ಆರಂಭವಾದಾಗಲೇ ಇದು ಪತ್ತೆಯಾದರೆ, (ಇದನ್ನು ಪ್ರಿ-ಡಯಾಬಿಟಿಸ್ ಅಂತ ಕರೀತಾರೆ) ಅದನ್ನು ಗುಣಪಡಿಸುವುದು ಸುಲಭ. ಆದರೆ ಅದು ಡಯಾಬಿಟಿಸ್ ಹಂತಕ್ಕೆ ತಲುಪಿದರೆ, ಅದನ್ನು ಸಂಪೂರ್ಣ ಕಿತ್ತು ಹಾಕುವ ಮದ್ದಿಲ್ಲ. ಹೀಗಾಗಿ ಬಾರದಂತೆ ತಡೆಯುವುದೇ ನಮ್ಮ ಉದ್ದೇಶವಾಗಿರಬೇಕು.
* ತೂಕದವರಾಗಿದ್ದರೆ, ಆದಷ್ಟು ಬೇಗ ತೂಕ ಇಳಿಸಿಕೊಳ್ಳಬೇಕು. ಬೊಜ್ಜು ಕಡಿಮೆಯಾದರೆ ಡಯಾಬಿಟೀಸ್‌ನ ರಿಸ್ಕ್ ಕೂಡ ಕಡಿಮೆಯಾಗುತ್ತದೆ ಎಂಬುದನ್ನು ಮರೆಯಬೇಡಿ. ಜೀವನಶೈಲಿ - ಆಹಾರ ಸೇವನೆಯಲ್ಲಿ ಬದಲಾವಣೆ ಮತ್ತು ನಿಯಮಿತ ವ್ಯಾಯಾಮ ಮಾಡಿದರೆ ಅತ್ಯುತ್ತಮ. ಸೊಪ್ಪು-ತರಕಾರಿ, ಪೂರಿ, ಮೈದಾದಿಂದ ಮಾಡಿದ ಬ್ರೆಡ್ ಐಟಂ ಮುಂತಾದವುಗಳ ಬದಲು ರೋಟಿ, ಕುಚ್ಚಲಕ್ಕಿಯಂತಹಾ ಪೂರ್ಣಧಾನ್ಯದ ಆಹಾರ ಧಾರಾಳ ಸೇವಿಸಬೇಕು.
* ಬಣ್ಣ ಬಣ್ಣದ ಪೊಟ್ಟಣಗಳಲ್ಲಿ ಬರುವ ಚಿಪ್ಸ್, ಕುಕೀಸ್, ಕೇಕುಗಳು, ಐಸ್ ಕ್ರೀಂಗಳು ಮುಂತಾದವುಗಳನ್ನು ಸಾಧ್ಯವಾದಷ್ಟು ದೂರ ಮಾಡಿ.
* ದಿನಕ್ಕೆ ಕನಿಷ್ಠ ಅರ್ಧಗಂಟೆಯಂತೆ ವಾರದ ಐದು ದಿನಗಳಾದರೂ ವ್ಯಾಯಾಮ ಮಾಡಬೇಕು.
* ಸಾಧ್ಯವಿರುವಾಗಲೆಲ್ಲಾ ನಡೆಯಿರಿ, ಮೆಟ್ಟಿಲು ಹತ್ತಿ ತಾರಸಿಗೆ ಹೋಗಿ.
* ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ಅಥವಾ ಧ್ಯಾನಕ್ಕೆ ಮೊರೆ ಹೋಗಿ.
* ಧೂಮಪಾನ ತ್ಯಜಿಸಿ
* ಮದ್ಯಪಾನದಿಂದ ದೂರವಿರಿ.

No comments:

Post a Comment