Tuesday 19 April 2011

ನಿಮ್ಮ ಮುಖದ ಸಮಸ್ಯೆಗೆ ನಿಮ್ಮಲ್ಲೇ ಇದೆ ಸೂಕ್ತ ಪರಿಹಾರ!


ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳೋದು ರಗಳೆ ಕೆಲಸ, ಒಂದೋ ಅಲ್ಲಿ ಗಂಟೆ ಗಟ್ಟಲೆ ಕಾಯಬೇಕು ಇಲ್ಲವೇ, ಅವರ ಸಮಯಕ್ಕೆ ಸರಿಯಾಗಿ ನಾವು ಹೋಗಬೇಕು ಎಂದೆಲ್ಲ ನಿಮಗೆ ಅನಿಸುತ್ತಿದ್ದರೆ, ಯಾಕೆ ಬೇಸರ ಮಾಡಿಕೊಳ್ಳುತ್ತೀರಿ ಹೇಳಿ? ಅಡುಗೆ ಮನೆಯಲ್ಲೇ ಹಲವಾರು ನೈಸರ್ಗಿಕ ಕೊಡುಗೆಗಳು ನಿಮಗಾಗಿ ಕಾದಿವೆ. ಸ್ವಲ್ಪವೇ ಸ್ವಲ್ಪ ಬಿಡುವು ಮಾಡಿಕೊಂಡು, ನಿಮ್ಮ ಚರ್ಮ ಯಾವ ಮಾದರಿಯದ್ದು ಎಂದು ತಿಳಿದುಕೊಂಡು ಚರ್ಮಕ್ಕೆ ಹೊಂದುವಂಥ ಆಯ್ಕೆಯನ್ನು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು.
ಸಾಮಾನ್ಯ ತ್ವಚೆಗೆ
1.
ಕಿತ್ತಳೆ ಹಾಗೂ ಟೊಮ್ಯಾಟೋ ಹಣ್ಣಿನ ಸ್ವಲ್ಪ ರಸ ತೆಗೆದು ಅದಕ್ಕೆ ಒಂದು ಚಮಚದಷ್ಟು ಮೊಸರು ಸೇರಿಸಿ. ಈ ಮಿಶ್ರಣದಿಂದ ಮೆತ್ತಗೆ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಸ್ವಲ್ಪ ಹೊತ್ತು ಮುಖದಲ್ಲೇ ಒಣಗಲು ಬಿಡಿ. ತಣ್ಣೀರಿನಲ್ಲಿ ಮುಖ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
2.
ಪಪ್ಪಾಯಿ ಹಣ್ಣನ್ನು ಕಿವುಚಿ ಮುಖಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದು ಮುಖಕ್ಕೆ ಹೊಸ ಹೊಳಪನ್ನು ನೀಡುತ್ತದೆ.
3.
ಕ್ಯಾಬೇಜನ್ನು ಅರೆದು ಅದರ ರಸವನ್ನು ಮುಖಕ್ಕೆ ಹಚ್ಚಿ. ಇದು ಸಡಿಲವಾದ ಚರ್ಮವನ್ನು ಟೈಟ್ ಮಾಡುವುದಲ್ಲದೆ, ಸುಕ್ಕುಗಳಿಂದಲೂ ಮುಕ್ತಿ ನೀಡುತ್ತದೆ.
4.
ಸ್ವಲ್ಪ ಕ್ಯಾರೇಟನ್ನು ತುರಿದು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಇದು ಮತ್ತೆ ಚರ್ಮಕ್ಕೆ ತಾಜಾತನವನ್ನು ನೀಡಿ ಸುಂದರವಾಗಿಸುತ್ತದೆ. ಇದು ಚರ್ಮಕ್ಕೆ ಟಾನಿಕ್ ಇದ್ದಂತೆ.
5.
ಪ್ರತಿ ಬಾರಿಯೂ ಆಪಲ್ ತಿನ್ನುವಾಗ ಅದರ ಸಿಪ್ಪೆಯನ್ನು ಬಿಸಾಡಬೇಡಿ. ಸಿಪ್ಪೆಯ ಒಳಭಾಗವನ್ನು ಮುಖಕ್ಕೆ ಉಜ್ಜಿ. ಇದು ಚರ್ಮವನ್ನು ಟೈಟ್ ಮಾಡುವುದಲ್ಲದೆ, ಪರಿಶುದ್ಧಗೊಳಿಸುತ್ತದೆ.
6.
ಪ್ರತಿದಿನವೂ ಮುಖ ತೊಳೆದ ನಂತರ ಐಸ್ ತುಂಡನ್ನು ಮುಖಕ್ಕೆ ವರ್ತುಲಾಕಾರದಲ್ಲಿ ಒತ್ತಿ ಉಜ್ಜಿ. ಇದು ಮುಖದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುವ ಮೂಲಕ ಮುಖಕ್ಕೆ ತಾಜಾ ರಕ್ತದ ಪೂರಣವಾಗುತ್ತದೆ. ಹಾಗಾಗಿ ಮುಖದ ಹೊಳಪು ಹೆಚ್ಚುತ್ತದೆ.
7.
ಸ್ವಲ್ಪ ನಿಂಬೆ ಹುಲ್ಲನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಆ ನೀರನ್ನು ಒಂದು ಟ್ರೇನಲ್ಲಿ ಹಾಕಿ ಫ್ರೀಜರ್‌ನಲ್ಲಿಟ್ಟು ಗಟ್ಟಿ ಮಾಡಿ. ಹೀಗೆ ಗಟ್ಟಿಯಾದ ಐಸ್ ತುಂಡನ್ನೂ ಮುಖಕ್ಕೆ ಉಜ್ಜಬಹುದು.
8.
ಮೊಟ್ಟೆಯ ಬಿಳಿ ಲೋಳೆಯನ್ನು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಒಣಗಿದ ಮೇಲೆ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದ ಚರ್ಮವನ್ನು ಟೈಟ್ ಮಾಡುತ್ತದೆ. ಅಲ್ಲದೆ ಸುಕ್ಕನ್ನೂ ತಡೆಗಟ್ಟುತ್ತದೆ.
ತೈಲಯುತ ತ್ವಚೆಗೆ
1.
ಗೋಧಿ ಹುಡಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದಲ್ಲಿರುವ ಹೆಚ್ಚಿನ ಎಣ್ಣೆಯಂಶವನ್ನು ತೆಗೆದುಹಾಕಿ ಚರ್ಮವನ್ನು ಫ್ರೆಶ್ ಆಗಿಸುತ್ತದೆ.
2.
ಕುದಿಸದ ಹಸಿ ಹಾಲಿಗೆ ಅಷ್ಟೇ ಪ್ರಮಾಣದ ಸೌತೆಕಾಯಿ ರಸ ಸೇರಿಸಿ. ಇದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ. ಒಂದು ಹತ್ತಿಯ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಮುಖಕ್ಕೆ ಚೆನ್ನಾಗಿ ಹಚ್ಚಿ. ಒಣಗಲು ಬಿಟ್ಟು ಆಮೇಲೆ ತಣ್ಣೀರಿನಲ್ಲಿ ತೊಳೆಯಿರಿ.
3.
ಎರಡು ಚಮಚ ಮೆಂತೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಮೆಂತೆಯನ್ನು ಅರೆದು ಪೇಸ್ಟ್ ಮಾಡಿ. ಚೆನ್ನಾಗಿ ಈ ಪೇಸ್ಟಿನಿಂದ ಮುಖಕ್ಕೆ ಮಸಾಜ್ ಮಾಡಿ ಹಾಗೆಯೇ ಬಿಟ್ಟು ಒಣಗಿದ ಮೇಲೆ ತೊಳೆಯಿರಿ. ಪೇಸ್ಟ್ ಉಳಿದರೆ ಎಸೆಯದೆ ಹಾಗೆಯೇ ಫ್ರಿಜ್ಜಿನಲ್ಲಿ ಮುಚ್ಚಳವಿರುವ ಡಬ್ಬದಲ್ಲಿ ಹಾಕಿಡಿ. ಒಂದು ವಾರ ದಿನವೂ ಉಪಯೋಗಿಸುತ್ತಿರಬಹುದು.
4.
ಇಡೀ ತೊಗರಿಯನ್ನು ರಾತ್ರಿಯಿಡೀ ನೆನೆಹಾಕಿ ಬೆಳಿಗ್ಗೆ ತೆಗೆದು ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬಹುದು.
5.
ಸೌತೆಕಾಯಿಯನ್ನು ತುರಿದು ಅರೆದು ರಸ ತೆಗೆದು ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆದರೆ ಮುಖ ಫ್ರೆಶ್ ಆಗುತ್ತದೆ. ಅಲ್ಲದೆ ಚರ್ಮವನ್ನೂ ಬಿಗಿಗೊಳಿಸುತ್ತದೆ. ಮುಖದ ಕಲೆಗಳನ್ನೂ ಇದು ತೊಡೆದುಹಾಕುತ್ತದೆ.
ಒಣ ತ್ವಚೆಗೆ
1.
ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ.
2.
ಗಸಗಸೆಯನ್ನು ರಾತ್ರಿಯಿಡೀ ನೆನೆ ಹಾಕಿ ಬೆಳಿಗ್ಗೆ ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ಗಸಗಸೆಯಲ್ಲಿರುವ ನೈಸರ್ಗಿಕ ತೈಲ ಮುಖಕ್ಕೆ ಬೇಕಾಗಿರುವ ತೈಲಾಂಶ ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
3.
ಹಾಲು ಕುದಿಯುತ್ತಿರುವಾಗಲೇ ಎರಡು ಚಮಚ ತೆಗೆದುಕೊಂಡು ಅದು ತುಸು ಬೆಚ್ಚಗಿರುವಾಗಲೇ ಮುಖಕ್ಕೆ ಹಚ್ಚಿ ಮೇಲ್ಮುಖವಾಗಿ ಮಸಾಜ್ ಮಾಡಿ. ಇದು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಒಣ ತ್ವಚೆಯನ್ನು ತೊಡೆಹಾಕುತ್ತದೆ. ನಿಮ್ಮ ಮುಖದಲ್ಲಿ ಮೊಡವೆಯಿದ್ದರೆ, ಹಾಲಿಗೆ ಸ್ವಲ್ಪ ಉಪ್ಪು ಸೇರಿಸಿ ಮಸಾಜ್ ಮಾಡಬಹುದು.
4.
ಮೂರ್ನಾಲ್ಕು ಹಸಿ ನೆಲಗಡಲೆಯನ್ನು ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ತೊಳೆದರೆ ಇದು ಕೂಡಾ ಮುಖಕ್ಕೆ ಬೇಕಾದ ತೈಲಾಂಶವನ್ನು ನೀಡಿ ಮಾಯ್‌ಶ್ಚರೈಸ್ ಮಾಡುತ್ತದೆ.
5.
ಹಾಲಿನ ದಪ್ಪ ಕೆನೆಗೆ ಸ್ವಲ್ಪ ಅರಿಶಿನ ಪುಡಿ ಹಾಗೂ ಆಲಿವ್ ಎಣ್ಣೆ ಸೇರಿಸಿ ಮುಖಕ್ಕೆ ಹಚ್ಚಿ. ಇದೂ ಕೂಡಾ ಮುಖಕ್ಕೆ ಬೇಕಾದ ಎಣ್ಣೆಯಂಶ ನೀಡಿ ಮುಖವನ್ನು ತಾಜಾ ಆಗಿಸುತ್ತದೆ.
ಮಿಶ್ರ ಚರ್ಮ (ಒಣ ಹಾಗೂ ತೈಲಯುಕ್ತ ಮಿಶ್ರ ಮಾದರಿಯ ಚರ್ಮ)
1.
ಸ್ವಲ್ಪ ಮುಲ್ತಾನಿ ಮಿಟ್ಟಿಗೆ ಪುದಿನ ಎಲೆ ಸೇರಿಸಿ ಅರೆದು ಪೇಸ್ಟ್ ಮಾಡಿ ಫ್ರಿಜ್ಜಿನಲ್ಲಿಡಿ. ರಾತ್ರಿ ಕಳೆದು ಬೆಳಗಾದ ಮೇಲೆ ಫ್ರಿಜ್ಜಿನಿಂದ ಹೊರತೆಗೆದು ಇದನ್ನು ಮುಖಕ್ಕೆ ಹಚ್ಚಿ.
2.
ನಿಂಬೆ ಹುಲ್ಲನ್ನು ನೀರಿಗೆ ಹಾಕಿ ಪರಿಮಳ ಹೊರಬರುವವರೆಗೆ ಚೆನ್ನಾಗಿ ಕುದಿಸಿ ಆ ನೀರನ್ನು ಟ್ರೇಯಲ್ಲಿ ಹಾಕಿ ಫ್ರೀಜರಿನಲ್ಲಿಟ್ಟು ಗಟ್ಟಿ ಮಾಡಿ. ಪ್ರತಿ ದಿನ ಕೆಲಸಕ್ಕೆ ಅಥವಾ ಹೊರಗೆ ಹೋಗಿ ಬಂದ ಮೇಲೆ ಮುಖ ತೊಳೆದು ನಿಂಬೆ ಹುಲ್ಲಿನ ನೀರಿನ ಐಸ್ ತುಂಡಿನಿಂದ ಮುಖವನ್ನು ಉಜ್ಜಿ. ಇದು ನಿಮ್ಮ ಚರ್ಮವನ್ನು ತಾಜಾ ಆಗಿಸಿ ಎಲ್ಲಾ ಕೊಳೆಯನ್ನೂ ತೊಡೆದುಹಾಕುತ್ತದೆ.
ಮೊಡವೆಯುಕ್ತ ಚರ್ಮಕ್ಕೆ
1.
ಸ್ವಲ್ಪ ಜಾಯಿಕಾಯಿಯನ್ನು ರೋಸ್ ವಾಟರ್ ಅಥವಾ ನೀರಿನಲ್ಲಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆಯಿರಿ. ಇದು ಮೊಡವೆ, ಕಪ್ಪು ಕಲೆಗಳನ್ನು ತೆಗೆಯುತ್ತದೆ.
2.
ರಾತ್ರಿ ಮಲಗುವ ಮುನ್ನ ಪ್ರತಿ ದಿನ ಅರ್ಧ ತುಂಡು ಫ್ರೆಶ್ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಕುದಿಸಿದ ತಾಜಾ ಒಂದು ಲೋಟ ಹಾಲಿಗೆ ಹಿಂಡಿ ಅರ್ಧ ಗಂಟೆ ಬಿಟ್ಟ ಮೇಲೆ ಅದರಿಂದ ಮುಖ ತೊಳೆದು ಮುಖಕ್ಕೆ ಹಚ್ಚಿದರೆ ಮೊಡವೆ ಪರಿಹಾರ ಕಾಣುತ್ತದೆ.
3.
ಮುಕ್ಕಾಲು ಕಪ್ ಟೊಮ್ಯಾಟೋ ರಸಕ್ಕೆ ಅರ್ಧ ತುಂಡು ನಿಂಬೆಯನ್ನು ಹಿಂಡಿ ಅದಕ್ಕೆ ನಾಲ್ಕೈದು ಪುದಿನ ಸೊಪ್ಪಿನ ಪೇಸ್ಟನ್ನು ಸೇರಿಸಿ. ಬೇಕಿದ್ದರೆ ರುಚಿಗಾಗಿ ಸ್ವಲ್ಪ ಉಪ್ಪನ್ನು ಹಾಕಿ ಒಂದು ವಾರ ಬೆಳಿಗ್ಗೆ ಹಾಗೂ ರಾತ್ರಿ ಕುಡಿದರೆ ಮುಖದ ಚರ್ಮದ ತೊಂದರೆಗಳು ನೀಗುತ್ತದೆ. ಇದು ಚರ್ಮದೊಳಗಿನ ವಿಷಕಾರಕಗಳನ್ನು ತೊಡೆದುಹಾಕಿ ಚರ್ಮವನ್ನು ಒಳಗಿನಿಂದ ಪರಿಶುದ್ಧಗೊಳಿಸುತ್ತದೆ. ಮಲಬದ್ಧತೆ, ಹೊಟ್ಟೆ ಹುಳುಗಳ, ಜಂತುಗಳ ತೊಂದರೆಗೂ ಇದು ಮುಕ್ತಿ ನೀಡುತ್ತದೆ.
4.
ನಿಂಬೆಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿ ರಾತ್ರಿ ಮಲಗಿ ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ತೊಳೆದರೆ ಮುಖಕ್ಕೆ ತಾಜಾ ಹೊಳಪು ಬರುವುದಲ್ಲದೆ, ಚರ್ಮ ಮೃದುವಾಯಿ ನಯವಾಗುತ್ತದೆ.
5.
ಪ್ರತಿ ದಿನ 12ರಿಂದ 14 ಲೋಟ ನೀರು ಕುಡಿಯಿರಿ. ಕರಿದ ತಿಂಡಿಗಳನ್ನು ಬಿಟ್ಟು ತಾಜಾ ಹಸಿ ತರಕಾರಿಗಳನ್ನು ತಿನ್ನುವುದನ್ನು ರೂಢಿಸಿಕೊಳ್ಳಿ. ದಿನಕ್ಕೆ ಕನಿಷ್ಟ ಎಂಟು ಗಂಟೆಗಳ ಕಾಲ ಸುಖ ನಿದ್ದೆ ಮಾಡಿ.
6.
ಆಯಾ ಕಾಲಕ್ಕೆ ತಕ್ಕಂತೆ ಸಿಗುವ ಹಣ್ಣುಗಳು ಹಾಗೂ ತರಕಾರಿಗಳನ್ನು ಹಾಗೆಯೇ ಹಸಿಯಾಗಿಯೇ ಹೆಚ್ಚು ತಿನ್ನಿ. ಮಾವಿನ ಹಣ್ಣು ಹಾಗೂ ಸ್ಟ್ರಾಬೆರಿಯನ್ನು ಹೆಚ್ಚು ತಿನ್ನಬೇಡಿ. ಇವುಗಳ ಹೆಚ್ಚಿನ ಸೇವನೆಯಿಂದ ಮುಖದಲ್ಲಿ ಮೊಡವೆಗಳೇಳುವ ಸಂಭವವಿದೆ.

No comments:

Post a Comment