Sunday, 10 April 2011

ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್ಸ್!

ಇವು ಸೌಂದರ್ಯದ ಗಣಿ ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್ಸ್!ಐಶ್ವರ್ಯಾ ರೈ! ಈ ಹೆಸರೇ ಹಾಗೆ. ಸೌಂದರ್ಯಕ್ಕೆ ಮತ್ತೊಂದು ಹೆಸರು ಎಂಬುದು ಜಗಜ್ಜಾಹೀರು. ವಯಸ್ಸು 35 ದಾಟಿದರೂ ಇಂದಿಗೂ ತನ್ನ ರೂಪ ಪ್ರತಿಭೆಯಿಂದಾಗಿ ಮುಂಚೂಣಿಯಲ್ಲಿರುವ ನಟಿ. ವಿಶ್ವಸುಂದರಿಯಾಗಿ ಬದುಕನ್ನು ತಾನು ಬಯಸಿದ ಹಾಗೆ ಕಟ್ಟಿಕೊಂಡ ಜಾಣೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಪ್ರಚುರ ಪಡಿಸಿದ ಬೆಡಗಿ. ಐಶ್ ಮಾದಕವಾಗಿಯೂ ಕಾಣಬಲ್ಲ ಚತುರೆ. ಅಪ್ಪಟ ಭಾರತೀಯ ನಾರಿಯಾಗಿಯೂ ಕಂಗೊಳಿಸಬಲ್ಲ ಮಂಗಳೂರಿನ ಚೆಲುವೆ. ಈ ತುಳುನಾಡ ಬೆಡಗಿ ತನ್ನ ಜೀವನದ ಒಂದೊಂದೇ ಮೆಟ್ಟಿಲನ್ನೂ ಏರಿ ಬೆಳೆದದ್ದೇ ಒಂದು ಯಶೋಗಾಥೆ. ಸೊಸೆಯಾಗಿ, ಹೆಂಡತಿಯಾಗಿ, ಮಗಳಾಗಿ ತನ್ನ ವೃತ್ತಿ ಬದುಕಿನಲ್ಲೂ ಅಷ್ಟೇ ಮಟ್ಟಿನ ಸ್ಪಷ್ಟತೆಯನ್ನು, ಯಶಸ್ಸನ್ನೂ ಕಾಯ್ದುಕೊಳ್ಳುವುದೆಂದರೆ ಅದು ಸುಲಭದ ಮಾತಲ್ಲ. ಆದರೆ ಈ ಐಶ್ ಅವೆಲ್ಲವೂಗಳನ್ನೂ ಸಮರ್ಥವಾಗಿ ನಿಭಾಯಿಸಿದವಳು. ಈ ಐಶ್ವರ್ಯಾ ಎಂಬ ಸೌಂದರ್ಯದ ಖನಿಯ ಬ್ಯೂಟಿ ಸೀಕ್ರೆಟ್ ನಿಮಗೆ ಗೊತ್ತೇನು? ತುಂಬಾ ಸಿಂಪಲ್. ಆಕೆಯೇ ಹೇಳಿಕೊಂಡಂತೆ, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಆಕೆ ಅನುಸರಿಸುವ ದಿನನಿತ್ಯದ ಅಭ್ಯಾಸಗಳು ಇಲ್ಲಿವೆ.
ಪಕ್ಕಾ ನ್ಯಾಚುರಲ್ ವಸ್ತುಗಳ ಬಳಕೆ ಐಶ್ವರ್ಯಾದು. ಕೆಮಿಕಲ್ ಬ್ಯೂಟಿ ಪ್ರಾಡಕ್ಟ್‌ಗಳಿಗಿಂತಲೂ ನ್ಯಾಚುರಲ್ ಬ್ಯೂಟಿ ಪ್ರಾಡೆಕ್ಟ್‌ಗಳೆಡೆಗೆ ಹೆಚ್ಚು ಮಹತ್ವ. ರಾಸಾಯನಿಕ ಸೌಂದರ್ಯವರ್ಧಕಗಳಿಂದ ಮಾರು ದೂರ. ಕಳಾಹೀನವಾದ ಕೂದಲಿಗೆ ದಿನವೂ ಪ್ರಾಕೃತಿಕವಾಗಿಯೇ ಪೋಷಣೆ ನೀಡುವ ಐಶ್ ಭಾರತದ ಪುರಾತನ ಸೌಂದರ್ಯ ವರ್ಧನೆಯ ಟಿಪ್ಸ್‌ಗಳನ್ನು ಪಾಲಿಸುತ್ತಾ ಬಂದವರು.
ಶೂಟಿಂಗ್ ಮುಗಿಸಿ ಮನೆಗೆ ಬಂದ ಮೇಲೆ, ಚರ್ಮವನ್ನು ಪ್ರತಿದಿನವೂ ಮೃದುವಾಗಿ ತಿಳಿಯಾಗಿಸಲು ಸೌತೆಕಾಯಿ ಬಳಕೆ. ಪ್ರತಿದಿನವೂ ಶೂಟಿಂಗ್ ಮುಗಿಸಿದ ಮೇಲೆ ಕ್ಲೀನಾಗಿ ಮುಖ ತೊಳೆದು, ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಮುಖಕ್ಕೆ ವರ್ತುಲವಾಗಿ ಉಜ್ಜುವುದು.
ಕಡಲೇ ಹಿಟ್ಟಿನ ಪೇಸ್ಟಿನಿಂದ ಚರ್ಮ ಶುದ್ಧಿಗೊಳಿಸುವುದು. ನಂತರ ಹಾಲು ಹಾಗೂ ಮೊಸರಿನ ಪ್ಯಾಕ್ ಲೇಪಿಸಿ ಚರ್ಮವನ್ನು ಮಾಯ್ಸ್‌ಶ್ಚರೈಸ್ ಮಾಡುವುದು.
ಆಗಾಗ ಮುಖಕ್ಕೆ ಫೇಸ್ ಪ್ಯಾಕ್ ಹಚ್ಚುವುದು. ಭಾರತದಲ್ಲಿ ಬಹು ಪ್ರಸಿದ್ಧವಾದ ಕಡಲೇಹಿಟ್ಟಿನ ಫೇಸ್ ಪ್ಯಾಕ್ ಐಶ್‌ರ ದಿನನಿತ್ಯದ ಹವ್ಯಾಸ. ಸ್ವಲ್ಪ ಕಡಲೇಹಿಟ್ಟಿಗೆ ಸ್ವಲ್ಪ ಅರಿಶಿನ ಸೇರಿಸಿ ಅದಕ್ಕೆ ಮೊಸರು ಹಾಗೂ ಹಾಲು ಸೇರಿಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯುವುದು. ಅಥವಾ, ಶ್ರೀಗಂಧ, ಮುಲ್ತಾನಿ ಮಿಟ್ಟಿ, ಅರಿಶಿನ ಪುಡಿ ಮಿಕ್ಸ್ ಮಾಡಿ ಅದಕ್ಕೆ ಕೊಂಚ ಮೊಸರು ಹಾಗೂ ಹಾಲು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯುವುದು.
ಮನೆಯಲ್ಲಿರುವಷ್ಟೂ ಹೊತ್ತು ಮೇಕಪ್ ರಹಿತಾಗಿದ್ದು, ಚರ್ಮವನ್ನು ಉಸಿರಾಡಲು ಬಿಡುವುದು.
ಕಠಿಣ ಆಹಾರ ಕ್ರಮ ಪಾಲಿಸುವುದು ಕೂಡಾ ಆಕೆಯ ದಿನಚರಿ. ಕರಿದ, ಎಣ್ಣೆ ಹೆಚ್ಚಿರುವ ತಿನಸುಗಳು, ಜಂಕ್ ಫುಡ್‌ಗಳಿಂದ ಐಶ್ ಸದಾ ದೂರ, ಬಹುದೂರ!
ಧೂಮಪಾನ, ಮದ್ಯಪಾನಗಳಿಂದಲೂ ಸದಾ ದೂರವಿರುವುದು.
ಯಾವತ್ತೂ ಹೊಟ್ಟೆ ತುಂಬಿ ತುಳುಕುವಷ್ಟು ತಿನ್ನುವುದರಿಂದ ದೂರವಿರುವುದು ಹಾಗೂ ಹಿತವಾಗಿ ಮಿತವಾಗಿ ಉಣ್ಣುವುದು.
ಪ್ರತಿದಿನವೂ 8 ಲೋಟಗಳಿಗಿಂತಲೂ ಹೆಚ್ಚು ನೀರು ಕುಡಿಯುವ ಮೂಲಕ ಮುಖದ ಚರ್ಮವನ್ನು ಸದಾ ತಿಳಿಯಾಗಿಸಿಕೊಳ್ಳುವುದು. ಬೆಳಿಗ್ಗೆ ಎದ್ದ ತಕ್ಷಣ ಎರಡು ಮೂರು ಲೋಟ ನೀರು ಕುಡಿಯುವುದು.
ಕೆಲಸ ಎಷ್ಟೇ ಕಠಿಣವಿರಲಿ, ಎಷ್ಟೇ ಸುಸ್ತಾಗಲಿ, ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವ ಕಾರ್ಯಕ್ಕೆ ಅದರದ್ದೇ ಆದ ಪ್ರಾಧಾನ್ಯತೆ ನೀಡುವುದು ಐಶ್ ದಿನಚರಿ.
ಸದಾ ತನಗೊಪ್ಪುವ ಬಣ್ಣ ಹಾಗೂ ಡಿಸೈನ್‌ನ ಬಟ್ಟೆಗಳನ್ನು ಧರಿಸುವ ಮೂಲಕ ಇನ್ನೂ ಆಕರ್ಷಕವಾಗಿ ಕಾಣಿಸಿಕೊಳ್ಳುವುದು.
ಕೊಂಚ ಯೋಗ, ಧ್ಯಾನ, ದೇವರೆಡೆಗೆ ಭಕ್ತಿ ಇವೆಲ್ಲವೂ ಐಶ್ ದಿನಚರಿ. ಪ್ರತಿದಿನವೂ ನಗುಮೊಗದಿಂದಲೇ ದಿನದಾರಂಭ. ಪಾಸಿಟಿವ್ ಥಿಂಕಿಂಗ್, ಮುಖದಲ್ಲಿ ನಗು ಇವೆಲ್ಲವೂ ನಿಜವಾದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂಬುದರಲ್ಲಿ ಐಶ್ವರ್ಯಾಗೆ ಅಚಲವಾದ ನಂಬಿಕೆಯಂತೆ.

No comments:

Post a Comment